ಗುರುವಾರ , ಆಗಸ್ಟ್ 11, 2022
28 °C
ಶ್ರಮಿಕ ವರ್ಗಕ್ಕೆ ಸೆಲ್ಕೋ ನೆರವು; ತಪ್ಪಿತು ಇಂಧನ ಹೊರೆ

ರಾಮನಗರ: ಗ್ರಾಮೀಣ ಕಸುಬಿಗೆ ‘ಸೌರ’ ಸ್ಪರ್ಶ

ಆರ್. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೇವೂರು ಗ್ರಾಮದಲ್ಲಿನ ಕುಂಬಾರಿಕೆ ಕಲೆ ಈಗ ಆಧುನಿಕ ಸ್ಪರ್ಶ ಪಡೆದಿದೆ. ಮಡಿಕೆ–ಕುಡಿಕೆ ತಯಾರಾಗುವ ತಿರುಗು ಮಣೆಗೆ ಸೌರ ವಿದ್ಯುತ್‌ ಸಂಪರ್ಕ ದೊರೆತಿದ್ದು, ಇದರಿಂದ ಉತ್ಪಾದನೆ ದುಪ್ಪಟ್ಟಾಗಿ ಆದಾಯವೂ ಹೆಚ್ಚಿದೆ.

ಚನ್ನಪಟ್ಟಣ ತಾಲ್ಲೂಕಿನ ಈ ಗ್ರಾಮ ಕುಡಿಕೆ ಬೇವೂರು ಎಂತಲೇ ಪ್ರಸಿದ್ಧಿ. ಇಲ್ಲಿ ತಯಾರಾಗುವ ಮಡಿಕೆಯಾಕಾರದ ಪುಟ್ಟ ಕುಡಿಕೆಗಳಿಗೆ ಜಿಲ್ಲೆ–ಹೊರ ಜಿಲ್ಲೆಯಲ್ಲೂ ಬೇಡಿಕೆ ಇದೆ. ಸುಮಾರು 30 ಕುಟುಂಬಗಳು ಈ ಕಸುಬಿನಲ್ಲಿ ತೊಡಗಿಸಿಕೊಂಡಿವೆ. ತಲೆತಲಾಂತರದಿಂದ ಈ ವೃತ್ತಿ ಮಾಡುತ್ತ ಬಂದಿರುವ ಕುಟುಂಬಗಳಿಗೆ ಸೆಲ್ಕೋ ಸೋಲಾರ್‌ ಲೈಟ್‌ ಕಂಪನಿ ಸೋಲಾರ್‌ ಚಾಲಿತ ಮಡಿಕೆ ಮಾಡುವ ಚಕ್ರವನ್ನು ಒದಗಿಸಿದೆ. ಸೌರಶಕ್ತಿಯನ್ನೇ ಬಳಸಿಕೊಂಡು ಈ ಮಣೆ ತಿರುಗುತ್ತಿದ್ದು, ಇದರಿಂದ ಶ್ರಮಿಕರ ಸಮಯದ ಉಳಿತಾಯದ ಜೊತೆಗೆ ಉತ್ಪಾದನೆಯೂ ಹೆಚ್ಚಿದೆ.

ಬೇವೂರಿನ ಏಳು ಮನೆಗಳಲ್ಲಿ ಈಗಾಗಲೇ ಈ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ವಿದ್ಯುತ್‌ನ ಸಹಾಯವಿಲ್ಲದೆಯೇ ಸೌರಶಕ್ತಿಯಿಂದಲೇ ಇವು ತಿರುಗುತ್ತಿವೆ. ದಿನಕ್ಕೆ 7–8 ಗಂಟೆ ಉಪಯೋಗಿಸಬಹುದಾಗಿದೆ. ಬ್ಯಾಟರಿ, ಇನ್‌ವರ್ಟರ್ ಸೇರಿದಂತೆ ಇದಕ್ಕೆ ₹70 ಸಾವಿರ ವೆಚ್ಚ ತಲುಪಿದ್ದು, ಇದರಲ್ಲಿನ ಒಂದು ಪಾಲನ್ನು ಸೆಲ್ಕೋ ಹಾಗೂ ಉಳಿದಿದ್ದನ್ನು ಫಲಾನುಭವಿಗಳು ಭರಿಸಿದ್ದಾರೆ.

‘ಈ ಮೊದಲು ಕೈಯಿಂದ ಮಣೆ ತಿರುಗಿಸಿ ಕುಡಿಕೆ ಮಾಡಲು ಸಮಯ ಹಿಡಿಯುತ್ತಿತ್ತು. ದಿನಕ್ಕೆ ಹೆಚ್ಚೆಂದರೆ 700 ಕುಡಿಕೆ ಮಾಡುತ್ತಿದ್ದೆವು. ಸೌರಮಣೆ ಬಂದ ಮೇಲೆ ಉತ್ಪಾದನೆಯು ದಿನಕ್ಕೆ 1,500ಕ್ಕೆ ಏರಿದೆ. ಅದರಂತೆ ನಮ್ಮ ಆದಾಯವೂ ದುಪ್ಪಟ್ಟಾಗಿದೆ’ ಎಂದು ಬೇವೂರಿನ ಕರಕುಶಲಕರ್ಮಿ ರಾಜು ಸಂತಸ ವ್ಯಕ್ತಪಡಿಸಿದರು.

ಸೌರಶಕ್ತಿಯಿಂದ ಶುದ್ಧ ನೀರು ಘಟಕ: ರಾಮನಗರ ತಾಲ್ಲೂಕಿನ ಚೌಡೇಶ್ವರಿಪುರದಲ್ಲಿ ಸೆಲ್ಕೋದಿಂದ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುವ 500 ಲೀಟರ್ ಸಾಮರ್ಥ್ಯದ ಶುದ್ಧ ನೀರು ಘಟಕ ಸ್ಥಾಪಿಸಲಾಗಿದೆ. ನೂರು ಕುಟುಂಬಗಳ ಪುಟ್ಟ ಗ್ರಾಮಕ್ಕೆ ಬೇಕಾಗುವಷ್ಟು ಶುದ್ಧ ನೀರನ್ನು ಈ ಘಟಕವೇ ಪೂರೈಸುತ್ತಿದೆ. ವಿದ್ಯುತ್‌ ಕಡಿತಗೊಂಡರೂ ಇಲ್ಲಿ ನೀರು ಪೂರೈಕೆ ನಿಲ್ಲುವುದಿಲ್ಲ.

ಈ ಘಟಕ ನಿರ್ಮಾಣಕ್ಕಾಗಿ ಸೆಲ್ಕೋ ಒಟ್ಟು ₹8.5 ಲಕ್ಷ ವ್ಯಯಿಸಿದೆ. ಸಂಪೂರ್ಣ ಸೌರಚಾಲಿತ ಎನ್ನುವುದು ಇದರ ವಿಶೇಷ. ಇದರಿಂದ ವಿದ್ಯುತ್‌ ಬಿಲ್‌ ತಪ್ಪಿದೆ. ನೀರಿನ ಬಿಲ್‌ನಿಂದ ಸಂಗ್ರಹವಾಗುವ ಹಣವು ಯಂತ್ರ ನಿರ್ವಹಣೆ ಜೊತೆಗೆ ಒಬ್ಬ ಮಹಿಳೆಗೆ ಉದ್ಯೋಗವನ್ನೂ ನೀಡಿದೆ. ಈಗ ಇರುವ ಘಟಕಗಳನ್ನೂ ಸೌರಶಕ್ತಿಗೆ ಬದಲಿಸಿಕೊಳ್ಳಲು ₹3.5 ಲಕ್ಷ ಸಾಕು. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇಂತಹ 40 ಶುದ್ಧ ಗಂಗಾ ಘಟಕಗಳನ್ನು ಈಗಾಗಲೇ ಸ್ಥಾಪಿಸಿದ್ದೇವೆ ಎಂದು ಸೆಲ್ಕೋ ಕಂಪನಿಯ ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು