ರಾಮನಗರ ತಾಲ್ಲೂಕಿನ ಅಂಚೀಪುರ ಗ್ರಾಮದಲ್ಲಿ ಕೆ. ಶಿವರಾಮ್ ಸಾವಿಗೆ ಕಂಬನಿ ಮಿಡಿದ ಗ್ರಾಮಸ್ಥರು
ಊರಿನಲ್ಲಿ ಪ್ರೌಢಶಾಲೆ ತೆರೆದಿದ್ದರು
‘ಶಿವರಾಮಣ್ಣ ಅವರು ಓದುವಾಗ ಗ್ರಾಮದಲ್ಲಿ ಪ್ರೌಢಶಾಲೆ ಇರಲಿಲ್ಲ. ಅವರು ಬೆಂಗಳೂರಿನಲ್ಲಿ ಪ್ರೌಢಶಾಲೆ ಮುಗಿಸಿದ್ದರು. ತಮ್ಮೂರಿನಲ್ಲಿ ಪ್ರೌಢಶಾಲೆ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವುದನ್ನು ಅರಿತಿದ್ದ ಅವರು ಐಎಎಸ್ ಅಧಿಕಾರಿಯಾದ ಬಳಿಕ ಗ್ರಾಮದಲ್ಲಿ ವಿಶ್ವಚೇತನ ಪ್ರೌಢಶಾಲೆಯನ್ನು ಆರಂಭಿಸಿದರು. ಇದರಿಂದಾಗಿ ಊರಿನ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಬಿಡದಿ ಅಥವಾ ದೂರದ ಊರುಗಳಿಗೆ ಹೋಗುವುದು ತಪ್ಪಿತು’ ಎಂದು ಗ್ರಾಮದವರಾದ ಉಪನ್ಯಾಸಕ ಕೃಷ್ಣಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಿಕ್ಷಣವೇ ನಮಗಿರುವ ಆಸ್ತಿ ಎಂದು ಹೇಳುತ್ತಿದ್ದರು. ಊರಿಗೆ ಬಂದಾಗ ಯುವಜನರಿಗೆ ಪ್ರೇರಣೆಯ ಮಾತುಗಳನ್ನಾಡುತ್ತಿದ್ದರು. ಏನಾದರೂ ಸಾಧಿಸುವಂತೆ ಹುರಿದುಂಬಿಸುತ್ತಿದ್ದರು. ಬಡವರ ಪರ ಕಾಳಜಿ ಹೊಂದಿದ್ದ ಅವರು ತಮ್ಮ ಅಧಿಕಾರವಾಧಿಯಲ್ಲಿ ಜನಪರವಾಗಿ ಕೆಲಸ ಮಾಡಿದರು’ ಎಂದು ನೆನೆದರು.
ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ
ಶಿವರಾಮ್ ಅವರ ಅಂತ್ಯಕ್ರಿಯೆಯು ಉರಗಹಳ್ಳಿಯಲ್ಲಿರುವ ಅವರ ತೋಟದ ಮನೆಯಲ್ಲಿ ನಡೆಯಲಿದೆ. ಐದು ವರ್ಷಗಳ ಹಿಂದೆ ತೀರಿಕೊಂಡಿದ್ದ ಅವರ ತಾಯಿಯ ಅಂತ್ಯಕ್ರಿಯೆಯನ್ನು ತೋಟದಲ್ಲೇ ಮಾಡಲಾಗಿತ್ತು. ಇವರ ಅಂತ್ಯಕ್ರಿಯೆ ಸಹ ಅಲ್ಲಿಯೇ ನಡೆಯಲಿದೆ. ಶಿವರಾಮ್ ಅವರು ನಿಧನರಾದ ಸುದ್ದಿ ಖಚಿತವಾದ ಬಳಿಕ ಪೊಲೀಸರು ಸಹ ತೋಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನದ ಹೊತ್ತಿಗೆ ಶವವನ್ನು ಗ್ರಾಮಕ್ಕೆ ತರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.