ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕರ್ನಾಟಕ ಬಂದ್‌, ಎಲ್ಲೆಡೆ ಕಟ್ಟೆಚ್ಚರ

ಹಲವು ಸೇವೆಗಳ ವ್ಯತ್ಯಯ; ಜನಜೀವನದ ಮೇಲೆ ಪರಿಣಾಮ ಸಾಧ್ಯತೆ
Last Updated 27 ಸೆಪ್ಟೆಂಬರ್ 2020, 12:17 IST
ಅಕ್ಷರ ಗಾತ್ರ

ರಾಮನಗರ: ಕಾರ್ಮಿಕ ಕಾನೂನು, ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳ ತಿದ್ದುಪಡಿ ವಾಪಸ್‌ಗೆ ಆಗ್ರಹಿಸಿ ರೈತ ಸಂಘಟನೆಗಳು ಇದೇ 28ರಂದು ಕರೆ ನೀಡಿರುವ ಕರ್ನಾಟಕ ಬಂದ್ ಅನ್ನು ವಿವಿಧ ಸಂಘಟನೆಗಳು ಬೆಂಬಲಿಸಿವೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಿವಿಧ ಬಣ), ಕೇಂದ್ರಿಯ ಕಾರ್ಮಿಕ ಸಂಘಟನೆಗಳಾದ ಎಐಟಿಯುಸಿ ( ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್), ಟಿಯುಸಿಸಿ ( ಟ್ರೇಡ್ ಯೂನಿಯನ್ ಕಮಿಟಿ ಕೌನ್ಸಿಲ್), ಐಎನ್‍ಟಿಯುಸಿ ( ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್), ಮಂಡಿ ವರ್ತಕರ ಸಂಘ, ಕನ್ನಡ ಪರ ಸಂಘಟನೆಗಳು, ಹಮಾಲಿ, ಬೀದಿ ಬದಿ ವ್ಯಾಪಾರಿಗಳು, ಮಂಡಿ ಕೂಲಿ ಕಾರ್ಮಿಕರು ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.

ಸೋಮವಾರ ನಡೆಯಲಿರುವ ಬಂದ್ ಅನ್ನು ಬೆಂಬಲಿಸಿ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಭಾನುವಾರ ರೈತಪರ ಸಂಘಟನೆಯ ಪದಾಧಿಕಾರಿಗಳು ಆಟೊದಲ್ಲಿ ಪ್ರಚಾರ ನಡೆಸಿದರು. ಪ್ರತಿ ಅಂಗಡಿಗಳಿಗೆ ತಲುಪಿದ ಕಾರ್ಯಕರ್ತರು ಕರ ಪತ್ರ ಹಂಚಿಕೆ ಮಾಡಿ ಮನವಿ ಮಾಡಿಕೊಂಡರು. ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಎಪಿಎಂಸಿ ಮಾರುಕಟ್ಟೆಯಿಂದ ಮೆರವಣಿಗೆ ಹೊರಡಲಿದೆ. ಐಜೂರು ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ, ರಾಮದೇವರ ಬೆಟ್ಟದ ರಸ್ತೆ ತಲುಪಿ ಅಲ್ಲಿಂದ ಅದೇ ಮಾರ್ಗದಲ್ಲಿ ರಾಯರದೊಡ್ಡಿ, ರೋಟರಿ ವೃತ್ತ ಮಾರ್ಗವಾಗಿ ರೇಷ್ಮೆಗೂಡಿನ ಮಾರುಕಟ್ಟೆ, ಕೆಂಪೇಗೌಡ ವೃತ್ತ ಬಳಸಿ ಐಜೂರು ವೃತ್ತದಲ್ಲಿ ಮೆರವಣಿಗೆ ಸಮಾಪ್ತಿ ಆಗಲಿದೆ. ಇದೇ ಸಂದರ್ಭ ಬೈಕ್‌ ರ್‍ಯಾಲಿ ಸಹ ನಡೆಯಲಿದೆ.

ಬಂದ್ ಅನ್ನು ಕಾರ್ಮಿಕ ಸಂಘಟನೆಗಳು ಬೆಂಬಲಿಸಿದ್ದು, ಬೆಳಗ್ಗೆ ಬಿಡದಿ ಬಸ್‌ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ನಂತರ ಕೈಗಾರಿಕಾ ಪ್ರದೇಶಗಳಲ್ಲಿಯೂ ಪ್ರತಿಭಟನೆಗೆ ಯೋಜಿಸಿವೆ. ಕೈಗಾರಿಕೆಗಳ ಬಂದ್‌ ಮಾಡಲು ಕಾರ್ಮಿಕ ಮುಖಂಡರು ಯೋಜಿಸಿದ್ದಾರೆ.

ಭದ್ರತೆ: ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ತಡೆಯುವ ಸಲುವಾಗಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಮಾಗಡಿ, ಕನಪುರ ಹಾಗೂ ಹಾರೋಹಳ್ಳಿ ವೃತ್ತಕ್ಕಾಗಿ ಒಟ್ಟು 6 ಡಿಎಆರ್ ತುಕಡಿಯನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿದೆ.

ಪರೀಕ್ಷೆ ಮುಂದೂಡಿಕೆ: ಬಂದ್ ಹಿನ್ನಲೆಯಲ್ಲಿ ಸೋಮವಾರ ನಡೆಯಬೇಕಿದ್ದ ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ ವಿಷಯದ ಪರೀಕ್ಷೆಗಳು ಹಾಗೂ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯನ್ನು 29ಕ್ಕೆ ಮುಂದೂಡಲಾಗಿದೆ.

ಪಕ್ಷಗಳ ಬೆಂಬಲ: ಪ್ರಮುಖ ರಾಜಕೀಯ ಪಕ್ಷಗಳೂ ಸೋಮವಾರದ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿವೆ. ರೈತ ಸಂಘಗಳ ಜೊತೆ ಕೈಜೋಡಿಸುವುದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಮುಖಂಡರು ತಿಳಿಸಿದ್ದಾರೆ.

ಯಾವುದು ಬಂದ್: ಯಾವ ಸೇವೆ ಲಭ್ಯ
ಕೃಷಿ ಉತ್ಪನ್ನ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ. ಹೋಟೆಲ್‌ಗಳು, ಆಟೊ ಸಂಚಾರದ ಬಗ್ಗೆ ನಿರ್ಧಾರವಾಗಿಲ್ಲ. ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ಆಸ್ಪತ್ರೆ. ಮೆಡಿಕಲ್‌ ಸ್ಟೋರ್‌, ದಿನಬಳಕೆಯ ವಸ್ತುಗಳ ಮಾರಾಟ ಸೇವೆಗೆ ಯಾವುದೇ ಅಡ್ಡಿಯಿಲ್ಲ. ರೇಷ್ಮೆ ಮಾರುಕಟ್ಟೆ ಸಹ ತೆರೆದಿರಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಬೆಳಗ್ಗೆ ಎಂದಿನಂತೆ ಆರಂಭ ಆಗಲಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

*******
ರಾಮನಗರ ರೇಷ್ಮೆಗೂಡು ಮಾರುಕಟ್ಟೆ ಸೋಮವಾರ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಗೂಡು ಹರಾಜು ನಡೆಯಲಿದೆ
-ಮುನ್ಶಿಬಸಯ್ಯ
ಉಪನಿರ್ದೇಶಕ, ರಾಮನಗರ ರೇಷ್ಮೆ ಗೂಡು ಮಾರುಕಟ್ಟೆ

ಬಂದ್‌ ಬೆಂಬಲಿಸುವಂತೆ ಕೋರಿ ಭಾನುವಾರ ಆಟೊ ಪ್ರಚಾರ ನಡೆಸಿದ್ದೇವೆ. ಸೋಮವಾರ ಬೆಳಗ್ಗೆ ಮೆರವಣಿಗೆ ಮೂಲಕ ಚಾಲನೆ ನೀಡಲಿದ್ದೇವೆ
-ಬೈರೇಗೌಡ
ಜಿಲ್ಲಾ ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಬಂದ್‌ ಭದ್ರತೆಗೆಂದು 700 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕೈಗಾರಿಕಾ ಪ್ರದೇಶಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು
ಎಸ್‌. ಗಿರೀಶ್‌
ಎಸ್ಪಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT