ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಟೆ ಕುಮಾರ್ ಎಂಬ ದೇಸಿ ಪ್ರತಿಭೆ

ಅಪ್ಪನ ಗರಡಿಯಲ್ಲಿ ಬೆಳೆದು ಕಲಾವಿದನಾಗಿ ರೂಪಗೊಂಡ ಕುಮಾರ್
Published 30 ಮಾರ್ಚ್ 2024, 6:06 IST
Last Updated 30 ಮಾರ್ಚ್ 2024, 6:06 IST
ಅಕ್ಷರ ಗಾತ್ರ

ರಾಮನಗರ: ‘ದೇವಸ್ಥಾನದೆದುರು ಅಪ್ಪ ಮತ್ತು ಸಂಗಡಿಗರು ಬೆಂಕಿಯಲ್ಲಿ ತಮಟೆ ಕಾಯಿಸಿ ಬಾರಿಸುತ್ತಿದ್ದರೆ, ಎದುರಿಗೆ ಕುಳಿತು ತದೇಕಚಿತ್ತದಿಂದ ದಿಟ್ಟಿಸುತ್ತಿದ್ದ ಬಾಲಕನಾದ ನನಗೆ ರೋಮಾಂಚನವೆನಿಸುತ್ತಿತ್ತು. ತಮಟೆ ಸದ್ದು ಯಾವಾಗಲೂ ನನ್ನಲ್ಲಿ ಅನುರಣಿಸುತ್ತಿತ್ತು. ಅಪ್ಪನ ದೃಷ್ಟಿ ಬೇರೆಡೆ ಹರಿದಾಗ ನಾನೂ ತಮಟೆ ಬಾರಿಸಿ ಆನಂದಿಸುತ್ತಿದ್ದೆ. ಅಪ್ಪನ ಗರಡಿಯಲ್ಲಿ ಮುಂದೆ ಅದೇ ಕಲೆಯನ್ನು ಅಪ್ಪಿಕೊಂಡು ಬದುಕು ಕಟ್ಟಿಕೊಂಡೆ...’

ಕಲಾವಿದ ಕುಮಾರ್ ಅವರು ತಮ್ಮ ತಂದೆ ನಗಾರಿ ಸಿದ್ದಯ್ಯ ಅವರಿಂದ ಪ್ರೇರಣೆಗೊಂಡು ತಾವೂ ಸಹ ತಮಟೆ ಕಲಾವಿದರಾಗಿ ರೂಪುಗೊಂಡ ಬಗೆಯನ್ನು ‘ಪ್ರಜಾವಾಣಿ’ಯೊಂದಿಗೆ ಬಿಚ್ಚಿಟ್ಟಿದ್ದು ಹೀಗೆ.

ತಾಲ್ಲೂಕಿನ ಬಿಡದಿ ಹೋಬಳಿಯ ಬಾನಂದೂರು ಗ್ರಾಮದ ಕುಮಾರ್ ಅವರದ್ದು ತಮಟೆ ಸೇರಿದಂತೆ ಜಾನಪದ ಕಲೆಗಳನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡ ಕುಟುಂಬ.

‘ಕಾರ್ತಿಕ ಮಾಸ ಬಂತೆಂದರೆ ನಮ್ಮೂರಿನ ಬಸವಣ್ಣ ಮತ್ತು ಆಂಜನೇಯ ದೇವಸ್ಥಾನದಲ್ಲಿ ಸಂಜೆ ಸತತ ಒಂದು ತಿಂಗಳು ಒಬ್ಬೊಬ್ಬರು ಪೂಜೆ ಮಾಡಿಸುತ್ತಾರೆ. ಆಗ ದೇವಸ್ಥಾನದ ಬಳಿ ತಂದೆ ಹಿಟ್ಟಿನ ತಮಟೆ ಬಾರಿಸುತ್ತಿದ್ದರು. ಆ ದಿನದ ಪೂಜಾಕರ್ತರೇ ತಮಟೆ ಬಾರಿಸುವವರ ಕುಟುಂಬಕ್ಕೆ ಊಟ ಕೊಡುತ್ತಿದ್ದರು. ಅದರಿಂದಲೇ ನಮ್ಮೆಲ್ಲರ ಹೊಟ್ಟೆ ತುಂಬುತ್ತಿತ್ತು’ ಎಂದು ಕುಮಾರ್ ಅವರು ಬಡತನದ ದಿನಗಳನ್ನು ಮೆಲುಕು ಹಾಕಿದರು.

‘ವಯಸ್ಸಾಗುತ್ತಿದ್ದಂತೆ ಅಪ್ಪನಿಗೆ ತಮಟೆ ಬಡಿಯುವುದಕ್ಕೆ ಕಷ್ಟವಾದಾಗ ನಾನು ಅವರ ಸ್ಥಾನ ತುಂಬಿದೆ. ನಮ್ಮೂರಿನ ಹೆಮ್ಮೆಯಾದ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿ ಅವರು ಊರಿನ ಹಳೆಯ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡುವ ಜೊತೆಗೆ, ಹೊಸ ದೇವಸ್ಥಾನಗಳನ್ನು ನಿರ್ಮಿಸಿದರು. ನಮ್ಮ ಪರಿಶಿಷ್ಟ ಸಮುದಾಯದವರಿಗೆ ಹುಚ್ಚಮ್ಮನ ದೇವಸ್ಥಾನ ನಿರ್ಮಿಸಿ ಕೊಟ್ಟಿದ್ದರು. ಅಷ್ಟೊತ್ತಿಗಾಗಲೇ ತಮಟೆ ಬಾರಿಸುವುದರಲ್ಲಿ ‍ಪಳಗಿದ್ದ ನಾನು, ದೇವಸ್ಥಾನದಲ್ಲಿ 41 ದಿನ ನಡೆದ ಪೂಜೆಗೆ ನನ್ನದೇ ಒಂದು ತಂಡ ಕಟ್ಟಿ ಸೇವೆ ಸಲ್ಲಿಸಿದೆ. ಮುಂದೆ ಅಕ್ಕಪಕ್ಕದ ಊರಿನವರು, ತಾಲ್ಲೂಕಿನವರು ಹಾಗೂ ಜಿಲ್ಲೆಯವರು ಸಹ ಕರೆಯತೊಡಗಿದರು’ ಎಂದು ತಾವು ಕಲಾವಿದನಾಗಿ ರೂಪುಗೊಂಡ ಬಗೆಯನ್ನು ತಿಳಿಸಿದರು.

ಕಲಾವಿದರ ಕುಟುಂಬ: ಕುಮಾರ್ ಅವರದ್ದು ಜಾನಪದ ಕಲೆಯನ್ನು ಹೊದ್ದ ಕುಟುಂಬ. ತಂದೆ ನಗಾರಿ ಸಿದ್ಧಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ. ತಾಯಿ ಸೋಬಾನಿ ಬೋರಮ್ಮ ತಮ್ಮ ಹಾಡುಗಳ ಮೂಲಕ ಸ್ಥಳೀಯವಾಗಿ ಮನೆ ಮಾತಾದವರು. ಚಿಕ್ಕಪ್ಪ ಬಾನಂದೂರು ಕೆಂಪಯ್ಯ ಹೆಸರಾಂತ ಜಾನಪದ ಕಲಾವಿದ. ಅಜ್ಜಿಯರಾದ ತಿರುಮಲಮ್ಮ, ಹೊನ್ನಮ್ಮ, ಹುಚ್ಚಮ್ಮ, ಅಕ್ಕ ಕವಿತಾ ನಾಗರಾಜ್ ಕೂಡ ಸೋಬಾನೆ ಹಾಡುಗಾರ್ತಿಯರು.

ತಮಟೆ ಕುಮಾರ್ ಎಂದೇ ಜನಪ್ರಿಯರಾಗಿರುವ ಕುಮಾರ್ ಅವರು, ಹಳ್ಳಿಯಿಂದಿಡಿದು ದೆಹಲಿವರೆಗೂ ತಮ್ಮ ಕಲೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ರಾಮನಗರದ ಜಾನಪದ ಲೋಕ, ಮಾದೇಶ್ವರ ಬೆಟ್ಟ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ತಂಡ ಕಟ್ಟಿಕೊಂಡು ಪ್ರದರ್ಶನ ನೀಡಿದ ಹೆಗ್ಗಳಿಕೆ ಕುಮಾರ್ ಅವರದ್ದು. ತಮಟೆ ಬಡಿಯುವ ಜೊತೆಗೆ ಪಟ ಕುಣಿತ, ಕಂಸಾಳೆ, ರಂಗನ ಕುಣಿತವನ್ನು ಸಹ ಕಲಿತಿರುವ ಅವರು, ಆಸಕ್ತ ಶಾಲಾ– ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ.

ವಿರಾಟ್ ಹಿಂದೂ ಪರಿಷತ್, ವೈಭವ ಕರ್ನಾಟಕ, ಕರ್ನಾಟಕ ಜಾನಪದ ಸಂಗೀತ ಕಲಾ ಪರಿಷತ್, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ರಾಮನಗರ ಜಿಲ್ಲಾ ಜಾನಪದ ಸಂಭ್ರಮ, ಕರ್ನಾಟಕ ಜಾನಪದ ಪರಿಷತ್, ಸ್ಪಂದನ ಚಾರಿಟೇಬಲ್ ಟ್ರಸ್ಟ್ , ಜಾನಪದ ಜಾತ್ರೆ, ಜನಪರ ಉತ್ಸವ, ಬುಡಕಟ್ಟು ಜಾನಪದ ಲೋಕೋತ್ಸವ.. ಸೇರಿದಂತೆ ಹಲವು ಪ್ರಶಸ್ತಿಗಳು ಕುಮಾರ್ ಅವರ ಪ್ರತಿಭೆಗೆ ಸಂದಿವೆ.

ನಮ್ಮ ದೇಸಿ ಜಾನಪದ ಕಲೆಯನ್ನು ಉಳಿಸಿ ಮುಂದಿನ ತಲೆಮಾರಿಗೂ ಕಲಿಸಬೇಕು. ಅದಕ್ಕಾಗಿ ನನ್ನ ಮಗಳಿಗೆ ಸೋಬಾನೆ ಹಾಡು ಹಾಗೂ ಮಗನಿಗೆ ತಮಟೆ ಜೊತೆಗೆ ಇತರ ವಾದ್ಯಗಳನ್ನು ಬಾರಿಸುವುದನ್ನು ಹೇಳಿ ಕೊಡುತ್ತಿದ್ದೇನೆ
– ತಮಟೆ ಕುಮಾರ್ ಕಲಾವಿದ ಬಾನಂದೂರು

‘ಕೀಳೆಂದು ತಮಟೆ ಸಹವಾಸ ಬಿಟ್ಟಿದ್ದೆ’ ‘ತಮಟೆ ಬಾರಿಸುವವರನ್ನು ಸಮಾಜ ನೋಡುವ ರೀತಿಯೇ ಬೇರೆ ಇದೆ. ನಾನು ತಮಟೆ ಬಡಿಯುತ್ತೇನೆಂದು ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಆಗ ನನ್ನ ಕಲೆ ಬಗ್ಗೆ ಕೀಳರಿಮೆ ಕಾಡತೊಡಗಿತು. ತಮಟೆ ಸಹವಾಸವೇ ಬೇಡವೆಂದು ತ್ಯಜಿಸಿದೆ. ನಿಧಾನವಾಗಿ ಮದ್ಯಪಾನದ ಚಟವೂ ಹತ್ತಿಕೊಂಡಿತ್ತು. ಸುಮಾರು ಹತ್ತು ವರ್ಷ ತಮಟೆ ಮುಟ್ಟಿರಲಿಲ್ಲ. ಈ ಮಧ್ಯೆ ಮದುವೆಯೂ ಆಯಿತು. ಆದರೂ ನನ್ನೊಳಗಿದ್ದ ಕಲಾವಿದ ಸುಮ್ಮನಿರಲಿಲ್ಲ. ಮದ್ಯದ ಚಟ ಬಿಟ್ಟು ಮತ್ತೆ ಕಲೆಯತ್ತ ಚಿತ್ತ ಹರಿಸಿದೆ. ಊರೂರು ಸುತ್ತಿ ಕಾರ್ಯಕ್ರಮಗಳನ್ನು ಕೊಡತೊಡಗಿದೆ. ಗೌರವ ಜನಪ್ರಿಯತೆ ಜೊತೆಗೆ ಬದುಕಿನ ಬಂಡಿಯೂ ಸಾಗತೊಡಗಿತು’ ಎಂದು ಕುಮಾರ್ ತಮ್ಮ ಬದುಕಿನ ತಿರುವನ್ನು ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT