ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ಮೂಲ ಜನಪದ ಕಲೆ ಕಲಿಸಿ’

ಏಳಿಗೆಹಳ್ಳಿಯಲ್ಲಿ ಸಂಭ್ರಮದ ಕಲಾಮಹೋತ್ಸವ
Last Updated 20 ಸೆಪ್ಟೆಂಬರ್ 2019, 5:24 IST
ಅಕ್ಷರ ಗಾತ್ರ

ಮಾಗಡಿ: ಜನಪದ ಕಲೆ ಮತ್ತು ಕಲಾವಿದರ ಉಳಿವು - ಅಳಿವು ದೇಶದ ಪಾರಂಪರಿಕ ಸಂಪತ್ತಿನ ಬೆಳೆವಣಿಗೆ ಅವಲಂಬಿಸಿದೆ ಎಂದು ಕಲಾಪೋಷಕ ತಮ್ಮಣ್ಣಗೌಡ ತಿಳಿಸಿದರು.

ತೂಬಿನಕೆರೆ ಭೈರವೇಶ್ವರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏಳಿಗೆಹಳ್ಳಿಯಲ್ಲಿ ಬುಧವಾರ ನಡೆದ ಜಾನಪದ ಸಾಂಸ್ಕೃತಿಕ ಕಲಾಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನಪದ ಕಲಾವಿದರು ಸಾಂಸ್ಕೃತಿಕ ಕಲೆಗಳ ಹುಟ್ಟಿಗೆ ಕಾರಣಕರ್ತರು. ವಯೋವೃದ್ಧ ಮಹಿಳೆಯರು ಹಾಡುವ ಜನಪದಪದಗಳನ್ನು ಸಂಗ್ರಹಿಸಬೇಕಿದೆ. ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಸಂತೋಷ, ಕೀರ್ತಿ ಗಳಿಸಬಹುದು. ಟಿ.ವಿ.ಮಾಧ್ಯಮದಿಂದ ಮೂಲ ಜನಪದ ಕಲೆ ಕಣ್ಮರೆಯಾಗುತ್ತಿದೆ ಎಂದರು.

ಬಾಳೇನಹಳ್ಳಿ ಮುಖಂಡ ಗವಿಗೌಡ ಮಾತನಾಡಿ, ಗಾದೆ, ಒಗಟು, ಲಾವಣಿ ನಿಜ ಜೀವನದಲ್ಲಿ ಸತ್ಯದ ದರ್ಶನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ಯಾಕಲದೇವನಪುರದ ರಾಮಚಂದ್ರ ಮಾತನಾಡಿ, ಕಲಾವಿದರು ಒಂದು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬ ಕಾಲವೊಂದಿತ್ತು. ಆಧುನಿಕ ಕಾಲದಲ್ಲಿ ಗ್ರಾಮೀಣ ಜನಪದ ಕಲಾವಿದರನ್ನು ಸರ್ಕಾರ ಕಡೆಗಣಿಸಿದೆ. ವೃದ್ಧ ಕಲಾವಿದರನ್ನು ಗುರುತಿಸಿ, ಅವರಲ್ಲಿನ ಮಹತ್ವದ ಕಲಾಪ್ರಕಾರ ಸಂಗ್ರಹಿಸಿ, ಅವರ ಬದುಕಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.

ಜನಪದ ಕಲಾವಿದ ತೂಬಿನಕೆರೆ ಖಾದ್ರಯ್ಯ ಮಾತನಾಡಿ, ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಮೂಲ ಜನಪದ ಕಲೆ ಕಲಿಸಬೇಕಿದೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಮುನಿಬೈರಪ್ಪ ಮಾತನಾಡಿ, ‘ನಮ್ಮ ತಾಯಿ ಕಲಿಸಿದ ಜನಪದ ಕಲೆ ಮುಂದುವರಿಸುವ ಸಲುವಾಗಿ ಕಲಾ ಮಹೋತ್ಸವ ಆಯೋಜಿಸಲಾಗಿದೆ’ ಎಂದರು.

ಏಳಿಗೆಹಳ್ಳಿ ವರದಾಂಜನೇಯಸ್ವಾಮಿ ದೇವಾಲಯದ ಅರ್ಚಕ ಕಾಂತರಾಜು, ಕಲಾವಿದರಾದ ತೂಬಿನಕೆರೆ ರಾಜಣ್ಣ, ನೆಸೆಪಾಳ್ಯದ ರಾಜಕುಮಾರ್, ಕಮಲಮ್ಮ, ಪುಷ್ಪಲತಾ, ಪುಟ್ಟಮ್ಮ, ಶಿವಮ್ಮ,ನರಸಯ್ಯ, ಉಮಾಮುರಳಿ, ವೀರಗಾಸೆ ಕಲಾವಿದ ಮಹದೇವಯ್ಯ ಮಾತನಾಡಿದರು.

ಕಲಾ ಸಂಘದ ಅಧ್ಯಕ್ಷೆ ಗಂಗಬೋರಮ್ಮ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕಲಾತಂಡಗಳ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ತುಮಕೂರಿನ ಗಂಗಾಧರಯ್ಯ ತಂಡದವರು ವೀರಗಾಸೆ, ರಾಮನಗರದ ಪುರುಷೋತ್ತಮ್ ತಂಡದವರು ಪೂಜಾಕುಣಿತ, ಪರಂಗಿಚಿಕ್ಕನಪಾಳ್ಯದ ರವಿ ತಂಡದವರಿಂದ ಚಿಲಿಪಿಲಿಗೊಂಬೆ, ಗಂಗಯ್ಯ ತಂಡದವರು ಕೀಲುಕುದುರೆ, ತೂಬಿನಕೆರೆ ಕರಿಯಪ್ಪ ತಂಡದವರು ತಮಟೆ ವಾದನ ಪ್ರದರ್ಶಿಸಿದರು.

ವಿ.ರಾಮಚಂದ್ರ ಅವರ ತಂಡದಿಂದ ಸುಗಮಸಂಗೀತ, ಎಸ್.ಬಿ.ಹನುಮಂತರಾಯಪ್ಪ ತಂಡದವರು ಜಾನಪದಗೀತೆ, ಡಾ.ಎನ್.ಜಿ.ಎಸ್.ರಾಜ್ ಕುಮಾರ್ ತಂಡದಿಂದ ರಂಗಗೀತೆ, ಅರಸೇಗೌಡ ತಂಡದಿಂದ ಭಜನೆ, ತೂಬಿಬಕೆರೆ ತಿ.ಎಂ.ರಾಣಿ ತಂಡದಿಂದ ಚಿತ್ರಗೀತೆ, ಕಮಲಮ್ಮ ತಂಡದವರು ಸೋಬಾನೆ ಪದ, ಬಾಳೆನಹಳ್ಳಿ ರಂಗನಾಥಸ್ವಾಮಿ ಪ್ರೌಢಶಾಲೆ ಮಕ್ಕಳಿಂದ ಜಾನಪದ ನೃತ್ಯ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT