ಕನಕಪುರ: ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಶಾಂತಿ ಸಭೆ ನಡೆಸಿ ಪರಿಶಿಷ್ಟ ಜಾತಿಯ ಜನರಿಗೆ ಕೂನೂರು ಗ್ರಾಮದ ದೇವಾಲಯಕ್ಕೆ ಪ್ರವೇಶ ಮಾಡಿಸಿದ ಘಟನೆ ಬುಧವಾರ ನಡೆಯಿತು.
ಕಸಬಾ ಹೋಬಳಿ ಕೂನೂರು ಗ್ರಾಮದಲ್ಲಿ ಮೇಲ್ವರ್ಗದ ಜನರು ತಮಗೆ ದೇವಾಲಯ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಪರಿಶಿಷ್ಟ ಜಾತಿಯ ಜನರು ತಾಲ್ಲೂಕು ಆಡಳಿತ ಮತ್ತು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಮೇಲ್ವರ್ಗದ ಜನರ ನಡುವೆ ಶಾಂತಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಜಿ.ಮಂಜುನಾಥ್, ಸಂವಿಧಾನ ಹಾಗೂ ಕಾನೂನಿನಡಿ ಎಲ್ಲರೂ ಸಮಾನರು, ಎಲ್ಲರಿಗೂ ಎಲ್ಲಾ ದೇವಾಲಯಗಳಿಗೂ ಮುಕ್ತ ಅವಕಾಶವಿದೆ. ಯಾರೂ ಯಾರಿಗೂ ಅಡ್ಡಿಪಡಿಸುವಂತಿಲ್ಲ ಎಂದು ತಿಳಿಸಿದರು.
ಗ್ರಾಮದಲ್ಲಿ ನಡೆಯುವ ದೇವರ ಉತ್ಸವಗಳಲ್ಲಿ ಎಲ್ಲರಿಂದಲೂ ಆರತಿ ಸ್ವೀಕರಿಸಬೇಕು, ದೇವಾಲಯದಲ್ಲಿ ಎಲ್ಲಾ ಸಮುದಾಯದ ಜನರಿಗೂ ಒಳಗೆ ಪ್ರವೇಶ ಮಾಡಲು ಅವಕಾಶವಿರಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಯಪ್ರಕಾಶ್ ಸೇರಿದಂತೆ ದಲಿತ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು, ಗ್ರಾಮದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕನಕಪುರ ಕೂನೂರು ಗ್ರಾಮದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಮುಖಂಡರು