ಭಾನುವಾರ, ಆಗಸ್ಟ್ 14, 2022
24 °C
ಬೆಲೆ ಕುಸಿತದಿಂದ ಬೆಳೆಗಾರರ ಕುಟುಂಬ ಕಂಗಾಲು

ಚಿಕ್ಕಬೊರೇಗೌಡನದೊಡ್ಡಿ: ಬಾಳೆ ತೋಟ ನಾಶಗೊಳಿಸಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ರೈತರೊಬ್ಬರು ಕೊಯ್ಲಿಗೆ ಬಂದಿದ್ದ ಮೂರೂವರೆ ಎಕರೆ ಬಾಳೆ ತೋಟವನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ ಪ್ರಸಂಗ ಶನಿವಾರ ನಡೆದಿದೆ.

ಗ್ರಾಮದ ರೈತ ನಾಗರಾಜು ಹಾಗೂ ಅವರ ಮಗ ಸಿದ್ದೇಶ್ ಬಾಳೆ ಬೆಳೆ ನಾಶಪಡಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ತಾವು ಬೆಳೆದ ಏಲಕ್ಕಿ ಬಾಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಹತಾಶರಾಗಿ ಬಾಳೆ ನಾಶಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.

ಮೂರೂವರೆ ಎಕರೆ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದಿದ್ದರು. ಈಗಾಗಲೇ ಸುಮಾರು ₹ 4 ಲಕ್ಷ ಖರ್ಚು ಮಾಡಿ ಬೆಳೆದಿದ್ದ ಬೆಳೆಯೂ ಉತ್ತಮವಾಗಿ ಬಂದಿತ್ತು. ಆದರೆ, ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಮುಂದೆಯೂ ಸಿಗುವ ಲಕ್ಷಣಗಳಿಲ್ಲ ಎಂಬ ಕಾರಣಕ್ಕಾಗಿ ಸಂಪೂರ್ಣ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಏಲಕ್ಕಿ ಬಾಳೆಗೆ ಕೆ.ಜಿ.ಗೆ ₹ 15 ರಿಂದ ₹ 20ವರೆಗೆ ಬೆಲೆ ಇದೆ. ಯಾವುದೇ ಸಮಾರಂಭಗಳು ನಡೆಯದ ಕಾರಣ ಬಾಳೆಹಣ್ಣು ಹಾಗೂ ಬಾಳೆ ಎಲೆಗೂ ಮಾರುಕಟ್ಟೆ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ನಾವು ಖರ್ಚು ಮಾಡಿದ್ದ ಹಣವೂ ಬರುವುದಿಲ್ಲ. ಮುಂದೆಯೂ ಬೆಳೆ ಕೊಯ್ಲಿಗೆ ಹಣ ಖರ್ಚು ಮಾಡುವುದು ತರವಲ್ಲ ಎಂಬ ನಿರ್ಧಾರದಿಂದ ಈ ಕ್ರಮ ಕೈಗೊಂಡೆವು’ ಎಂದು ನಾಗರಾಜು ತಿಳಿಸಿದರು.

ಲಾಕ್‌ಡೌನ್‌ನಿಂದ ರೈತರ ಬದುಕು ದುಸ್ತರವಾಗಿದೆ. ಬೆಳೆಗಳಿಗೆ ಉತ್ತಮ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ದೊರಕುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸದಿದ್ದರೆ ರೈತರ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ ಎಂದು ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.