ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಬ್‌ ಜಾಗ ವಶಕ್ಕೆ ಪಡೆದ ನಗರಸಭೆ

ವಿವಾದಿತ ಸ್ಥಳ ಉದ್ಯಾನಕ್ಕೆ ಮೀಸಲು: ಪ್ರಾದೇಶಿಕ ಆಯುಕ್ತರ ಕೋರ್ಟ್‌ ಆದೇಶ
Last Updated 4 ಜುಲೈ 2021, 8:47 IST
ಅಕ್ಷರ ಗಾತ್ರ

ರಾಮನಗರ: ನಗರದ ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದ ವಶದಲ್ಲಿದ್ದ ಜಾಗವನ್ನು ನಗರಸಭೆ ಅಧಿಕಾರಿಗಳು ಶನಿವಾರ ತಮ್ಮ ವಶಕ್ಕೆ ಪಡೆದರು. ಈ ಜಾಗವು ಉದ್ಯಾನಕ್ಕೆ ಮೀಸಲಿಟ್ಟ ಸ್ವತ್ತು ಎಂದು ಫಲಕ ಅಳವಡಿಸಲಾಯಿತು.

ಈ ಸ್ಪೋರ್ಟ್‌ ಕ್ಲಬ್‌ ಇರುವ ಜಾಗವು ನಗರಸಭೆಗೆ ಸೇರಿದ್ದು ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪುನರ್ ಪರಿಶೀಲನಾ ಪ್ರಾಧಿಕಾರ ನ್ಯಾಯಾಲಯವು ಈಚೆಗೆ ಆದೇಶ ನೀಡಿತ್ತು. ಜಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆ ನಗರಸಭೆಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟಡಕ್ಕೆ ಬೀಗ ಜಡಿದು ಜಾಗವನ್ನು ವಶಕ್ಕೆ ಪಡೆದರು.

ಅಸಮಾಧಾನ: ‘ಮೂರು ದಶಕದಿಂದ ಈ ಸ್ಥಳದಲ್ಲಿ ಬ್ಯಾಡ್ಮಿಂಟನ್ ಅಂಕಣ ಸೇರಿದಂತೆ ನಾನಾ ಸೌಲಭ್ಯಗಳನ್ನು ಕ್ಲಬ್ ವತಿಯಿಂದ ನಿರ್ಮಿಸಲಾಗಿದೆ. ಇದಕ್ಕೆ ನಗರಸಭೆಯೇ ಅನುಮತಿ ನೀಡಿದೆ. ಹೀಗಾಗಿ ಇದನ್ನು ಮುನ್ನಡೆಸಲು ಸಮಿತಿಗೆ ಅನುಮತಿ ನೀಡಿ, ಕಾನೂನು ಪ್ರಕ್ರಿಯೆ ಮುಂದುವರಿಸಿ’ ಎಂದು ಕ್ಲಬ್‌ನ ಸದಸ್ಯರು ಅಧಿಕಾರಿಗಳನ್ನು ಆಗ್ರಹಿಸಿದರು.

ಕೆ.ಎಚ್. ಕ್ರೀಡಾ ಕೇಂದ್ರದ ಮುಖಂಡ ರಾಜಶೇಖರ್ ಎಂಬುವರು ಮಾತನಾಡಿ, ‘ಇಲ್ಲಿ ನೂರಾರು ಮಂದಿ ಬ್ಯಾಡ್ಮಿಂಟನ್, ಟೆನಿಸ್ ಮತ್ತು ಯೋಗ ತರಬೇತಿ ಪಡೆಯುತ್ತಿದ್ದಾರೆ. ಹೀಗಾಗಿ, ಇದನ್ನು ಮುಂದುವರಿಸಲು ಅನುಮತಿ ನೀಡಬೇಕು. ಸದ್ಯ ಈ ಪ್ರದೇಶವನ್ನು ವಶಕ್ಕೆ ಪಡೆಯಬಾರದು’ ಎಂದು ಒತ್ತಾಯಿಸಿದರು.

ನಗರಸಭೆಯ ಪೌರಾಯುಕ್ತ ನಂದಕುಮಾರ್ ಪ್ರತಿಕ್ರಿಯಿಸಿ, ‘ನ್ಯಾಯಾಲಯದ ಆದೇಶದಂತೆ ಸದರಿ ಸ್ವತ್ತನ್ನು ವಶಕ್ಕೆ ಪಡೆದಿದ್ದೇವೆ. ಇನ್ನು ಮುಂದೆ ಇದು ನಗರಸಭೆ ಸ್ವತ್ತಾಗಲಿದೆ. ಕಟ್ಟಡ ಕೆಡವುವ ವಿಚಾರದಲ್ಲಿ ಮೇಲಧಿಕಾರಿಗಳ ಆದೇಶದ ನಂತರ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ನಗರಸಭೆಯ ಎಇಇ ರಂಗರಾಜು, ಜೆಇಗಳಾದ ಗೋಪಾಲಸ್ವಾಮಿ, ಜಯಣ್ಣ, ಆರ್ಒ ನಂಜುಂಡಸ್ವಾಮಿ, ಆರ್‌ಐ ಶ್ರೀನಿವಾಸ್, ಪರಿಸರ ಅಧಿಕಾರಿ ಸುಬ್ರಹ್ಮಣ್ಯ, ಆರೋಗ್ಯ ನಿರೀಕ್ಷಕರಾದ ರಮೇಶ್ ರಾಜ್, ಪವಿತ್ರಾ, ಡಿವೈಎಸ್‍ಪಿ ಮೋಹನ್ ಕುಮಾರ್, ಸಿಪಿಐ ಅಶೋಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT