ಸೋಮವಾರ, ಜನವರಿ 20, 2020
27 °C

ಯಕ್ಷಗಾನವನ್ನೇ ನಂಬಿ ಜೀವನ ಅಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಯಕ್ಷಗಾನ ಪ್ರದರ್ಶನವನ್ನೆ ನಂಬಿಕೊಂಡು ಮಧ್ಯಮ ವರ್ಗದ ಜೀವನ ನಡೆಸಬಹುದೇ ಹೊರತು ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಬಂಟ್ವಾಳ ತಾಲ್ಲೂಕಿನ ಗಾಣದಪಡ್ಪುವಿನ ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕೆ. ಶಿವರಾಮ ಜೋಗಿ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಇಲ್ಲಿನ ಜಾನಪದ ಲೋಕದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಪ್ರದರ್ಶನ ವರ್ಷದಿಂದ ವರ್ಷಕ್ಕೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ವರ್ಷಕ್ಕೆ 180 ದಿನಗಳು ಮಾತ್ರ ಪ್ರದರ್ಶನವಿರುತ್ತದೆ. ಇಂತಹ ಸಂದರ್ಭದಲ್ಲಿ ಕಲೆಗಳ ಪ್ರದರ್ಶನವನ್ನು ಹವ್ಯಾಸಕ್ಕೆ ಇಟ್ಟುಕೊಳ್ಳಬೇಕು. ವೃತ್ತಿಯಾಗಿಟ್ಟು ಕೊಳ್ಳಲು ಸಾಧ್ಯವಿಲ್ಲ ಎಂದರು.

15ನೇ ವಯಸ್ಸಿಗೆ ಪ್ರದರ್ಶನ ನೀಡಲು ಪ್ರಾರಂಭಿಸಿದೆ. ನನಗೆ ಈಗ 79 ವರ್ಷ. ಯಕ್ಷಗಾನ ಪ್ರದರ್ಶನಗಳನ್ನು ನೋಡಿ ಪ್ರದರ್ಶನ ನೀಡುವುದನ್ನು ಕಲಿತುಕೊಂಡೆ. 61 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೇನೆ. ರಾವಣ, ವೃತುಪರ್ಣ, ಇಂದ್ರಜಿತು, ಹಿರಣ್ಯಕಶಿಪು, ಕಂಸ, ಕರ್ಣ, ಹನುಮಂತ ಒಳಗೊಂಡು ಕಿರೀಟ ಹಾಗೂ ಪುಂಡ ವೇಷಗಳಲ್ಲಿ ಜನರು ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ ಎಂದು ತಿಳಿಸಿದರು.

ಯಕ್ಷಗಾನ ಗುರುಗಳಾದ ಗೋಪಾಲಕೃಷ್ಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಷಿ, ಕುಡಾಣ ಗೋಪಾಲಕೃಷ್ಣ ಭಟ್ ಅವರಿಂದ ಯಕ್ಷಗಾನದ ಅನುಭವವನ್ನು ಕಲಿತುಕೊಂಡು ಕುಣಿತ, ಅರ್ಥಗಾರಿಕೆ, ರಂಗನಡೆ ಇತ್ಯಾದಿಗಳನ್ನು ಅಭ್ಯಾಸ ಮಾಡಿದೆ. ಸುರತ್ಕಲ್ ಮೇಳದಲ್ಲಿ 40 ವರ್ಷ ದುಡಿದೆ. ಇತರ ಮೇಳಗಳಾದ ಕೂಡ್ಲು, ಮುಲ್ಕಿ, ಕರ್ನಾಟಕ, ಮಂಗಳಾದೇವಿ, ಎಡನೀರು, ಕುಂಟಾರು, ಹೊಸನಗರ ಮೇಳಗಳಲ್ಲಿ 63 ವರ್ಷಗಳ ಕಾಲ ಬಣ್ಣ ಹಚ್ಚಿದ್ದೇನೆ ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ವ್ಯವಸ್ಥಾಪಕ ಟ್ರಸ್ಟಿ ಆದಿತ್ಯಾನಂಜರಾಜ್, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್. ರುದ್ರಪ್ಪ, ಆಡಳಿತಾಧಿಕಾರಿ ಡಾ.ಕುರುವ ಬಸವರಾಜ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು