ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಇಂದಿಗೂ ಮಾಸದ ಇತಿಹಾಸದ ಗತವೈಭವ

ಬಿಸ್ಕೂರಿನ ಚಾರಿತ್ರಿಕ ಸ್ಮಾರಕ ರಕ್ಷಿಸಿ * ನಿಧಿ ಆಸೆಗಾಗಿ ಸ್ಮಾರಕಗಳನ್ನು ಅಗೆದು ನಾಶ
Last Updated 7 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಾಗಡಿ: ಗತಕಾಲದ ಇತಿಹಾಸ ಓದಿಕೊಳ್ಳದವರು ಇತಿಹಾಸ ಸೃಷ್ಟಿಸಲಾರರು ಎಂಬುದು ಅನುಭವಿಗಳ ಮಾತು. ಅಹಿಂಸೆಯೇ ಪರಮಧರ್ಮ ಎಂಬ ದಿವ್ಯ ಸಂದೇಶ ಸಾರಿದ ಬಸದಿ ಊರು ಇಂದು ಬಿಸ್ಕೂರು ಆಗಿ ಪರಿವರ್ತನೆಗೊಂಡಿದೆ. ಕಾಲನ ಲೀಲೆಗೆ ಸಿಲುಕಿ ತನ್ನ ಗತವೈಭವ ಉಳಿಸಿಕೊಳ್ಳಲು ಆರ್ತನಾದಗೈಯುತ್ತಿದೆ.

ತಾಲ್ಲೂಕಿನ ಚಾರಿತ್ರಿಕ ದಾಖಲೆಯಲ್ಲಿ ಜೈನಪುರಿ, ಬಸದಿಪುರ, ಜೈನರ ನೆಲೆ ಆಗಿತ್ತು. ಪರಿವರ್ತನೆ ಯುಗದತ್ತ ಸಾಗಿರುವ ಬಿಸಗೂರು ಕ್ರಮೇಣ ಬಿಸ್ಕೂರು ಹೆಸರಾಯಿತು ಎಂಬ ಮಾಹಿತಿ ದಾಖಲೆಯಲ್ಲಿದೆ. ಮಗದ(ಬಿಹಾರ) ರಾಜ್ಯದಲ್ಲಿ ಕ್ಷಾಮ ಕಾಣಿಸಿಕೊಂಡಿದ್ದರಿಂದ ಭೀಕರ ಬರಗಾಲಕ್ಕೆ ಸಿಲುಕಿತು.

ಬರಗಾಲದಿಂದ ಕಂಗಾಲಾದ ಭದ್ರಬಾಹುವಿನೊಡನೆ ದಕ್ಷಿಣ ಭಾರತದತ್ತ ಬಂದ ಚಂದ್ರಗುಪ್ತ ತನ್ನ ಸಹಚರರೊಡನೆ ಕಕುದ್ಗಿರಿ (ಶಿವಗಂಗೆ)ಮಾರ್ಗವಾಗಿ ಬಿಸಗೂರಿನಲ್ಲಿದ್ದ ಜೈನ ಬಸದಿಯಲ್ಲಿ ಕೆಲಕಾಲ ತಂಗಿದ್ದರು. ವಿಶ್ರಾಂತಿ ಬಳಿಕ ಕಲಾವತಿ ಪಟ್ಟಣ(ಕಲ್ಯ) ಹೂಜುಗಲ್ಲಿನಲ್ಲಿ ಸಲ್ಲೇಖನ ವ್ರತಕೈಗೊಂಡಿದ್ದ ಜೈನಮುನಿಗಳನ್ನು ಕಂಡು ಅವರೊಂದಿಗೆ ಕೆಲಕಾಲ ನೆಲೆ ನಿಂತರು. ನೂರು ಶ್ರೀಗಂಧದ ಬಸದಿಗಳಿಂದ ಕಂಗೊಳಿಸುತ್ತಿದ್ದ ಕಲ್ಯಕ್ಕೆ ಭೇಟಿ ನೀಡಿ ಕುಷ್ಮಾಂಡಿನಿ ದೇವಿ ದರ್ಶನ ಪಡೆದ. ನಂತರ ಕಳ್ಬಪ್ಪು ಇಂದಿನ ಶ್ರವಣಬೆಳಗೊಳಕ್ಕೆ ತೆರಳಿ ಅಲ್ಲಿ ತಪಸ್ಸಿಗೆ ನಿಂತು, ಸಲ್ಲೇಖನ ವ್ರತದ ಮೂಲಕ ದಿಗಂಬರನಾದ ಎಂಬುದು ಚರಿತ್ರೆಯ ದಾಖಲೆ.

ಬಾದಾಮಿ ಚಾಲುಕ್ಯರ ಕಾಲದ ಅಹಮ ಸೋಮೇಶ್ವರನ ಅಳ್ವಿಕೆ ಕಾಲದಲ್ಲಿ ಬಿಸಗೂರಿನ ಜೈನ ಬಸದಿ ಜೀರ್ಣೋದ್ಧಾರ ಮಾಡಿಸಿದ. ಅಲ್ಲದೆ, ಪಂಚ ಶಿವನದೇಗುಲಗಳನ್ನು ನಿರ್ಮಿಸಿದ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಒಂದು ಕಾಲದಲ್ಲಿ ಉತ್ತುಂಗ ಸ್ಥಿತಿಯಲ್ಲಿದ್ದ ಸ್ಥಳಗಳು ಕಾಲದ ಮಹಿಮೆಗೆ ಸಿಲುಕಿ ನಶಿಸಿ ಹೋಗಿವೆ. ಬಿಸ್ಕೂರು ಗ್ರಾಮದಲ್ಲಿ ಅಮೂಲ್ಯ ಚಾರಿತ್ರಿಕ ಸ್ಮಾರಕಗಳು ರಕ್ಷಣೆ ಇಲ್ಲದೆ ವಿನಾಶದತ್ತ ಸಾಗಿವೆ. ಜೈನ, ಶೈವ, ವೈಷ್ಣವ ಗುಡಿಗಳ ಗತವೈಭವ ಇಂದಿಗೂ ನೋಡುಗರಲ್ಲಿ ವಿಸ್ಮಯ ಮೂಡಿಸಿವೆ.

ಅಹವಮಲ್ಲ ಸೋಮೇಶ್ವರ ಗಂಗವಾಡಿ ವಶಪಡಿಸಿಕೊಂಡು ಆಳ್ವಿಕೆ ಮಾಡಿದ ನೆನಪಿಗಾಗಿ ಬಿಸ್ಕೂರಿನಲ್ಲಿ ಅರ್ಕೇಶ್ವರ, ನಗರಾಧೀಶ್ವರ, ಜಲಕಂಠೇಶ್ವರ, ವೃಷಭನಾಥೇಶ್ವರ, ಕನ್ನೇರಮ್ಮದೇವಿ ದೇಗುಲಗಳನ್ನು ನಿರ್ಮಿಸಿದ. ಈ ಇವೆಲ್ಲವೂ ಭವ್ಯತೆ ಕಳೆದುಕೊಂಡು ಈಗ ವಿನಾಶದತ್ತ ಸಾಗಿವೆ.

ರಂಗನಾಥ ದೇಗುಲದ ಬಳಿ ಬಿಸ್ಕೂರಿನ ಚರಿತ್ರೆ ತಿಳಿಸುವ ಶಿಲಾಶಾಸನ, ವೀರಗಲ್ಲು, ಮಾಸ್ತಿಕಲ್ಲುಗಳಿವೆ. ಜೈನಮುನಿ ಯತಿಗಳು ಸಲ್ಲೇಖನ ವ್ರತ ಮಾಡುತ್ತಿದ್ದ ಬಸದಿ ಕುರುಹುಗಳಿವೆ. ಬಸದಿ ಬಳಿ ವೀರಭದ್ರಸ್ವಾಮಿ ಶಿಥಿಲ ವಿಗ್ರಹವಿದೆ. ದೇವಾಲಯಗಳಿಗೆ ಸೇರಿದ್ದ ಭೂಮಿ ಅನ್ಯರ ಪಾಲಾಗಿದೆ. ಪ್ರಾಚ್ಯವಸ್ತು ಇಲಾಖೆ ಬಿಸ್ಕೂರಿನಲ್ಲಿ ತಲಸ್ಪರ್ಶಿ ಅಧ್ಯಯನ ನಡೆಸಿ ಮಹತ್ವದ ಸ್ಮಾರಕಗಳನ್ನು ಉಳಿಸಬೇಕೆಂದು ಇತಿಹಾಸ ಸಂಶೋಧಕಿ ಪ್ರೊ.ಸುಷ್ಮಾ ಅವರ ಒತ್ತಾಯವಾಗಿದೆ.

ವಿವಿಧ ಜಾತಿಯ ಪಕ್ಷಿ ಸಂಕುಲ ಬಸದಿ ಬಳಿ ಇರುವ ಮರಗಳಲ್ಲಿ ಗೂಡು ಕಟ್ಟಿಕೊಂಡಿವೆ. ನಿಧಿ ಆಸೆಗಾಗಿ ಸ್ಮಾರಕಗಳನ್ನು ಅಗೆದು ನಾಶಪಡಿಸಲಾಗಿದೆ. ಅಳಿದು ಉಳಿದಿರುವ ಮಹತ್ವದ ಬಸದಿ, ಶಿವಲಿಂಗ, ವೀರಭದ್ರ ವಿಗ್ರಹ ರಕ್ಷಿಸಲು ಪ್ರಾಚ್ಯವಸ್ತು ಇಲಾಖೆ ಮತ್ತು ತಾಲ್ಲೂಕು ಆಡಳಿತ ಮುಂದಾಗಬೇಕಿದೆ.

ಶಾಂತಲೆ ಆತ್ಮಹತ್ಯೆ ಮಾಡಿಕೊಂಡರೆ ?
ಬಿಸ್ಲೂರಿನಲ್ಲಿ ಬಾದಾಮಿ ಚಾಲುಕ್ಯ ಕಾಲದ ಅಪರೂಪದ ಪಾಣಿಪೀಠವಿಲ್ಲದ ಶಿವಲಿಂಗ ಪತ್ತೆ ಆಗಿರುವುದು ಹೊಸ ಆಯಾಮಕ್ಕೆ ಎಡೆ ಮಾಡಿದೆ ಎಂಬುದು ಇತಿಹಾಸ ಸಂಶೋಧಕ ಎಂ.ಜಿ ಶ್ರೀನಿವಾಸ್‌ ಅಭಿಪ್ರಾಯ.

ಹೊಯ್ಸಳ ದೊರೆ ವಿಷ್ಣುವರ್ಧನ ಅವರ ಪಟ್ಟ ಮಹಿಷಿ ನಾಟ್ಯರಾಣಿ ಶಾಂತಲೆ ಜೈನರಾಗಿದ್ದರು. ಬಿಸ್ಕೂರಿಗೂ ಶಿವಗಂಗೆ ಇತಿಹಾಸಕ್ಕೂ ಕೊಡುಕೊಳ್ಳುವಿಕೆ ಸಂಬಂಧ ಇತ್ತು. ‌ಶಾಂತಲೆ ಶಿವಗಂಗೆ ಬೆಟ್ಟದಿಂದ ಹಾರಿಬಿದ್ದು ಆತ್ಮಹತ್ಯೆ ಮಾಡಿಕೊಂಡರು ಎಂಬುದು ಸತ್ಯವೆ? ಅಲ್ಲವೇ ಎಂಬುದನ್ನು ಮರು ಆಯಾಮದಿಂದ ಸಂಶೋಧಿಸಲು ಬಿಸ್ಕೂರಿನಲ್ಲಿ ಪೂರಕ ಮಾಹಿತಿ ಸಿಗಲಿದೆ ಎನ್ನುತ್ತಾರೆ ಇತಿಹಾಸ ಸಂಶೋಧಕ ಮಹಮದ್‌ ಖಲಿಮುಲ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT