ಭಾನುವಾರ, ಮಾರ್ಚ್ 7, 2021
32 °C
ನಾಳೆ ಬೆಂಗಳೂರಲ್ಲಿ ಟ್ರ್ಯಾಕ್ಟರ್, ಬೈಕ್‌‌ ಪರೇಡ್‌

ಕೇಂದ್ರ ಕಾಯ್ದೆ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ: ಬಡಗಲಪುರ ನಾಗೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರಿನಲ್ಲಿ ಜ. 26ರಂದು ಟ್ರ್ಯಾಕ್ಟರ್ ಮತ್ತು ಬೈಕ್ ಪೆರೇಡ್ ಮೂಲಕ ರೈತರು ಗಣರಾಜ್ಯೋತ್ಸವ ಆಚರಿಸಲಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಟ್ರ್ಯಾಕ್ಟರ್ (ರೈತ) ವರ್ಸಸ್ ಟ್ಯಾಂಕರ್ (ಕಾರ್ಪೋರೇಟ್) ಹೋರಾಟ ಎಂಬ ಸಂದೇಶ ನೀಡಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.

ನಗರದ ಎಪಿಎಂಸಿ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಪರೇಡ್ ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟ. ರೈತರೇ ಸಂಘಟಿತರಾಗಿ ಟ್ರ್ಯಾಕ್ಟರ್ ಪರೇಡ್ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರು.‌

ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಗಳು ಒಗ್ಗೂಡಿ ಗಣರಾಜ್ಯೋತ್ಸವ ಆಚರಿಸುತ್ತಿವೆ. ರಾಷ್ಟ್ರಧ್ವಜದೊಂದಿಗೆ ಪರೇಡ್ ನಡೆಯಲಿದೆ. ಟ್ರ್ಯಾಕ್ಟರ್ ಪರೇಡ್ ಫ್ರೀಡಂ ಪಾರ್ಕ್‌ನಲ್ಲಿ ಅಂತ್ಯವಾಗಲಿದೆ. ಅಲ್ಲಿ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ರೈತರು ಮತ್ತು ಇತರೇ ಸಂಘಟನೆಗಳ ಸಭೆ ನಡೆಯಲಿದೆ ಎಂದು ಹೇಳಿದರು.

‘ದೇಶದಲ್ಲಿ ಸದ್ಯ ಕೃಷಿಕರು 280 ಮಿಲಿಯನ್ ಟನ್ ಆಹಾರ ಉತ್ಪಾದಿಸಿದ್ದಾರೆ. ಆದರೆ, ಕೃಷಿ ಸಂಬಂಧಿತ ಕಾನೂನುಗಳಿಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಗಳು ಪಡಿತರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಆಹಾರ ಭದ್ರತೆಯ ಆತಂಕಕ್ಕೆ ಕಾರಣವಾಗಿದೆ’ ಎಂದರು.

ಮೈಸೂರು ಕಡೆಯ ಜಿಲ್ಲೆಗಳಿಂದ ಈಗಾಗಲೇ ಟ್ರ್ಯಾಕ್ಟರ್‌ಗಳು ಹೊರಟಿವೆ. ಚನ್ನಪಟ್ಟಣದ ಬಳಿಯ ಬೈರಾಪಟ್ಟಣದಲ್ಲಿ ಎಲ್ಲರೂ ತಂಗಲಿದ್ದಾರೆ. ನಂತರ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿ ಬಿಡದಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗಣರಾಜ್ಯೋತ್ಸವದ ದಿನ 10 ಗಂಟೆ ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಹಾಗೆಯೇ ಕೋಲಾರದ ಕಡೆಯಿಂದ ಬರುವ ರೈತರು ಹೊಸಕೋಟೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಬರುವ ರೈತರು ನಂದಿ ಕ್ರಾಸ್‌ ಬಳಿಯಲ್ಲಿ ಮತ್ತು ತುಮಕೂರು ಕಡೆಯಿಂದ ಬರುವ ರೈತರು ಮಾದನಾಯಕನಹಳ್ಳಿ ಬಳಿ ಜಮಾಯಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಎ. ರಾಮು, ಮಲ್ಲಯ್ಯ, ತಿಮ್ಮೇಗೌಡ, ಮುನಿರಾಜು, ಪುಟ್ಟಸ್ವಾಮಿ, ಕೆ.ಎನ್. ರಾಜು, ರಾಮೇಗೌಡರು, ಅಂಕಪ್ಪ, ಶಿವರಾಜು, ಚನ್ನಪಾಜಿ, ಯಶವಂತ ಹಾಜರಿದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು