ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ವಾವಲಂಬನೆಗೆ ಕೌಶಲ ತರಬೇತಿ ಅಗತ್ಯ’

Published 14 ಜೂನ್ 2024, 6:14 IST
Last Updated 14 ಜೂನ್ 2024, 6:14 IST
ಅಕ್ಷರ ಗಾತ್ರ

ರಾಮನಗರ: ‘ಕೌಶಲ ತರಬೇತಿಗಳು ಉದ್ಯೋಗಕ್ಕಷ್ಟೇ ನೆರವಾಗುವುದಲ್ಲದೆ, ಸ್ವಂತ ಉದ್ಯಮ ಆರಂಭಿಸುವುದಕ್ಕೂ ಪೂರಕವಾಗಲಿದೆ. ಉತ್ತಮ ವಿದ್ಯಾರ್ಹತೆ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದೆಂಬ ಕಲ್ಪನೆ ಎಲ್ಲರಿಗೂ ಇದೆ. ಅದು ತಪ್ಪು. ಉದ್ಯೋಗಕ್ಕೆ ಓದಿಗಿಂತ ಹೆಚ್ಚಾಗಿ ಕೌಶಲ ಹೆಚ್ಚು ಮುಖ್ಯ’ ಎಂದು ನವಚೇತನ ಚಾರಿಟೇಬಲ್ ಟ್ರಸ್ಟ್ ಫಾರ್ ಡಿಸೆಬಲ್ಸ್ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್. ಮಂಜುನಾಥ್ ಹೇಳಿದರು.

ನಗರದ ವಿವೇಕಾನಂದನಗರದಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಸೂತಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಚ್ಚು ಅಂಕಗಳು ಅಥವಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರು ಮಾತ್ರ ಜೀವನ ರೂಪಿಸಿಕೊಳ್ಳುತ್ತಾರೆ ಎಂದು ಅನೇಕ ಪೋಷಕರು ತಪ್ಪು ತಿಳಿದಿದ್ದಾರೆ. ಅದೇ ಕಾರಣಕ್ಕೆ ತಮ್ಮ ಮಕ್ಕಳನ್ನು ಹೆಚ್ಚು ಅಂಕ ಗಳಿಕೆಯತ್ತಲೇ ಚಿತ್ತ ಹರಿಸುವಂತೆ ಮಾಡುತ್ತಿದ್ದಾರೆ. ಇದರಿಂದಾಗಿ, ಮಕ್ಕಳಲ್ಲಿರುವ ಇತರ ಪ್ರತಿಭೆ ಮತ್ತು ಕೌಶಲಗಳನ್ನು ಗುರುತಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅವರಲ್ಲಿ ಇತರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ, ಅದರಲ್ಲೂ ಉನ್ನತ ಸಾಧನೆ ಮಾಡಬಲ್ಲರು’ ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್. ರುದ್ರೇಶ್ವರ ಮಾತನಾಡಿ, ‘ಕಸೂತಿ ಕೇವಲ ಮನೆಯಲ್ಲಿ ಕುಳಿತು ಕೆಲಸವಿಲ್ಲದ ವೇಳೆಯಲ್ಲಿ ಮಾಡುವ ಒಂದು ಕಲೆಯಲ್ಲ. ಬದಲಾಗಿ ಅದೊಂದು ಉದ್ಯಮವಾಗಿ ಬದಲಾಗಿದೆ. ಈ ಕಲೆಗೆ ಶ್ರದ್ಧೆ ಇದ್ದರೆ ಮಾತ್ರ ಪರಿಣತಿ ಸಾಧಿಸಲು ಸಾಧ್ಯ. ಬಟ್ಟೆಯ ಮೇಲೆ ಕೈಯಲ್ಲಿ ನೂಲಿನಿಂದ ವಿವಿಧ ವಿಧದ ಚಿತ್ತಾರ ಬಿಡಿಸುವುದೇ ಕಸೂತಿಯ ವಿಶೇಷತೆಯಾಗಿದೆ’ ಎಂದು ಹೇಳಿದರು.

ಅಥರ್ವ ಅಕಾಡೆಮಿ ತರಬೇತುದಾರರಾದ ಎಸ್. ಗೀತಾ, ‘ಕಸೂತಿಯನ್ನುಅರೆಕಾಲಿಕ ಹಾಗೂ ಪೂರ್ಣಕಾಲಿಕ ಉದ್ಯೋಗವಾಗಿ ಆಯ್ಕೆ ಮಾಡಿಕೊಳ್ಳಬಹುದು. ಬೇರೆ ಉದ್ಯೋಗದಲ್ಲಿದ್ದರೂ, ಕಸೂತಿ ನಿಮ್ಮ ಪ್ಯಾಷನ್‌ ಆಗಿದ್ದರೆ ಇದನ್ನೊಂದು ಅರೆಕಾಲಿಕ ಉದ್ಯೋಗವಾಗಿ ಮಾಡಬಹುದು’ ಎಂದರು.

ಟಯೋಡಾ ಗೋಸಾಯಿ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾನವ ಸಂಪನ್ಮೂಲ ಅಧಿಕಾರಿ ಪಿ.ಕೆ. ದಯಾನಂದ, ತರಬೇತುದಾರರಾದ ಎಚ್. ವನಿತಾ ಹಾಗೂ ಇತರರು ಇದ್ದರು. ಬಿಡದಿಯ ಟಯೋಡಾ ಗೋಸಾಯಿ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮಹಿಳೆಯರಿಗೆ ಉಚಿತ ಕಸೂತಿ ತರಬೇತಿಯನ್ನು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT