ಶನಿವಾರ, ಡಿಸೆಂಬರ್ 4, 2021
20 °C
ತಮ್ಮಣ್ಣನದೊಡ್ಡಿಯಲ್ಲಿ ಕಟ್ಟಡ ನಿರ್ಮಾಣ: ಬಾಷ್‌ ಕಂಪನಿಯ ಸಿಎಸ್‌ಆರ್‌ ಅನುದಾನದ ನೆರವು

ಹೈಟೆಕ್ ತರಬೇತಿ ಕೇಂದ್ರ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯ ತಮ್ಮಣ್ಣನದೊಡ್ಡಿಯಲ್ಲಿ ಹೈಟೆಕ್‌ ತರಬೇತಿ ಕೇಂದ್ರವು ತಲೆ ಎತ್ತಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿನ ಅಂಗನವಾಡಿ ಕಾರ್ಯಕರ್ತೆಯರು, ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರಿಗೆ ಸ್ಥಳೀಯವಾಗಿಯೇ ತರಬೇತಿ ದೊರೆಯಲಿದೆ.

ಬಾಷ್ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಬಳಸಿಕೊಂಡು ಸುಮಾರು ₨36 ಲಕ್ಷ ವ್ಯಯಿಸಿ ಈ ತರಬೇತಿ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ದಾನಿಯೊಬ್ಬರು ಇದರ ನಿರ್ಮಾಣಕ್ಕೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಇಲ್ಲಿ ಅಂಗನವಾಡಿ ಸಿಬ್ಬಂದಿಗೆ ವೃತ್ತಿಪರತೆ ಮತ್ತು ಪುನಃಶ್ಚೇತನ ತರಬೇತಿ ಸಿಗಲಿದೆ. ಕೇಂದ್ರದ ಕಟ್ಟಡದ ಕೆಳ ಅಂತಸ್ತಿನಲ್ಲಿ ಮಾದರಿ ಅಂಗನವಾಡಿ ಕೇಂದ್ರವಿದೆ. ಮೇಲ್ಭಾಗದ ಕಟ್ಟಡದಲ್ಲಿ ಸುಸಜ್ಜಿತವಾದ ತರಬೇತಿ ಕೊಠಡಿ ಇದೆ. ಜೊತೆಗೆ ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒಳಗೊಂಡಿದೆ.

5 ವೃತ್ತ: ಜಿಲ್ಲೆಯಲ್ಲಿ ಐದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳಿದ್ದು, ಇದರಲ್ಲಿ 55 ವೃತ್ತಗಳ ವ್ಯಾಪ್ತಿಯಲ್ಲಿ 1543 ಅಂಗನವಾಡಿ ಕೇಂದ್ರಗಳಿವೆ. ಪ್ರತಿಯೊಂದು ವೃತ್ತದಲ್ಲಿ 25 ರಿಂದ 30 ಅಂಗನವಾಡಿ ಕೇಂದ್ರಗಳು ಬರುತ್ತವೆ.

ರಾಮನಗರ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಹೊಸದಾಗಿ ಸೇರ್ಪಡೆಯಾದ ಕಾರ್ಯಕರ್ತೆಯರಿಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ರಿವರ್ ವ್ಯಾಲಿ ತರಬೇತಿ ಕೇಂದ್ರದಲ್ಲಿ 32 ದಿನಗಳು ಹಾಗೂ 2 ವರ್ಷಕ್ಕೊಮ್ಮೆ 7 ದಿನಗಳ ಕಾಲ ವೃತ್ತಿ, ಪುನಃಶ್ಚೇತನ ತರಬೇತಿ ನೀಡಲಾಗುತ್ತಿತ್ತು. ಆದರೀಗ ರಾಮನಗರದಲ್ಲಿಯೇ ಹೈಟೆಕ್ ತರಬೇತಿ ಕೇಂದ್ರ ನಿರ್ಮಾಣಗೊಂಡಿದ್ದು, ಇಲ್ಲಿನ ಸಿಬ್ಬಂದಿಗೆ ಸ್ಥಳೀಯವಾಗಿಯೇ ತರಬೇತಿ ಸಿಗಲಿದೆ.

ಏನಿದು ತರಬೇತಿ?: ಹೊಸದಾಗಿ ನೇಮಕವಾದ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಕಾರ್ಯಕರ್ತೆಯರಿಗೆ ಒಂದು ತಿಂಗಳ ಕಾಲ ಆರು ಸೇವೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಇದರಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ತಾಯಂದಿರ ಸಭೆ, ಮಾಹಿತಿ ಸೇವೆ , ದಾಖಲಾತಿ ನಿರ್ವಹಣೆ ಒಳಗೊಂಡಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು