ಚನ್ನಪಟ್ಟಣ: ತಾಲ್ಲೂಕಿನ ಮತ್ತೀಕೆರೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಭಾನುವಾರ ಅಂದಿನ ಯುಗಾದಿ, ಇಂದಿನ ಯುಗಾದಿ ಸಂವಾದ ಮತ್ತು ಯುಗಾದಿ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ವೈದ್ಯೆ ರಾಜಶ್ರೀ ಮಾತನಾಡಿ, ‘ಹಬ್ಬ ಹರಿದಿನಗಳಲ್ಲಿ ಒಂದು ಕಡೆ ಎಲ್ಲರೂ ಸೇರಿ ಸಂತೋಷ ಹಂಚಿಕೊಳ್ಳುವ ಸಂಸ್ಕೃತಿ ಇಂದು ಮರೆಯಾಗುತ್ತಿದೆ’ ಎಂದು ವಿಷಾದಿಸಿದರು.
ಯುಗಾದಿ ಹಬ್ಬ ಭಾರತದ ನೈಜ ಸಂಸ್ಕೃತಿ ಬಿಂಬಿಸುವ ಹಬ್ಬ. ಹಿಂದೆ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಿದ್ದರು.
ಇಂದು ಅದೆಲ್ಲವೂ ಮಾಯವಾಗಿದೆ. ಪ್ರತಿಯೊಂದು ಹಬ್ಬಗಳಿಗೂ ವೈಜ್ಞಾನಿಕ ಅರ್ಥವಿದೆ. ಆದರೆ, ಹಬ್ಬಗಳು ಕೇವಲ ಆಚರಣೆಗಷ್ಟೇ ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಹಿಂದಿನ ಸಂಸ್ಕೃತಿ ಮೈಗೂಡಿಸಿಕೊಂಡು ಹಬ್ಬ, ಹರಿದಿನಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಬಿ. ಚಲುವರಾಜು ಮಾತನಾಡಿ, ‘ಕಷ್ಟ-ಸುಖಗಳನ್ನು ಸರಿದೂಗಿಸಿಕೊಳ್ಳಲು ಇಂಥ ಹಬ್ಬಗಳು ಆದರ್ಶವಾಗಿವೆ. ಅಂದು ಹಬ್ಬಗಳು ಒಡೆದು ಹೋಗಿದ್ದ ಮನಸುಗಳನ್ನು ಒಂದುಗೂಡಿಸುವ ಕೊಂಡಿಗಳಾಗಿದ್ದವು. ಅಂತಹ ಹಬ್ಬಗಳ ಆಚರಣೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ’ ಎಂದರು.
ದೊಡ್ಡಆಲಹಳ್ಳಿ ಡಿ. ಪುಟ್ಟಸ್ವಾಮಿಗೌಡ, ಮಂಜೇಶ್ ಬಾಬು, ಪುಟ್ಟಸ್ವಾಮಿ ಕದರಮಂಗಲ, ಯೋಗೇಶ್ ದ್ಯಾವಪಟ್ಟಣ, ಲಕ್ಷ್ಮಿ ಕಿಶೋರ್ ರಾಜೇಅರಸು, ಪಿ. ಗುರುಮಾದಯ್ಯ, ರವಿಕುಮಾರ್ ತೊರೆಹೊಸೂರು, ಹೇಮಂತ್ ಶೃಂಗನಾಡು, ಚ.ಶಿ. ವೆಂಕಟೇಗೌಡ ಕವಿತೆ ವಾಚಿಸಿದರು. ಗಾಯಕರಾದ ಗೋವಿಂದಹಳ್ಳಿ ಶಿವಣ್ಣ, ಕೆ.ಎಚ್.ಕುಮಾರ್, ಸಿ.ಪ್ರಸನ್ನಕುಮಾರ್ ಗೀತಗಾಯನ ನಡೆಸಿಕೊಟ್ಟರು.
ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಎಂ.ಎಸ್. ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ರಾಂಪುರ, ಕಾರ್ಯದರ್ಶಿ ರಾಮಕೃಷ್ಣಯ್ಯ ಭಾಗವಹಿಸಿದ್ದರು.
ತಂತ್ರಜ್ಞಾನದ ವ್ಯಾಮೋಹದಲ್ಲಿ ಜನ
‘ಅಂದಿನ ಯುಗಾದಿಯಲ್ಲಿ ಸಂಭ್ರಮವಿತ್ತು. ದೇಸಿಯ ಆಟಗಳಿಗೆ ಪ್ರಾಮುಖ್ಯತೆ ಇತ್ತು. ಇಂದು ತಂತ್ರಜ್ಞಾನದ ವ್ಯಾಮೋಹಕ್ಕೆ ಬಿದ್ದು ಹಬ್ಬಗಳನ್ನು ಮರೆಯುತ್ತಿದ್ದೇವೆ. ಹಣದಿಂದ ಮಾನವೀಯ ಮೌಲ್ಯಗಳನ್ನು ದೂರ ಮಾಡಿಕೊಳ್ಳುತ್ತಿದ್ದೇವೆ’ ಎಂದು ಸಾಹಿತಿ ದೇ. ನಾರಾಯಣಸ್ವಾಮಿ ತಿಳಿಸಿದರು.
ಸಾಹಿತಿಗಳಾದ ಎಲೆಕೇರಿ ಶಿವರಾಂ, ಕೂರಣಗೆರೆ ಕೃಷ್ಣಪ್ಪ, ಎಲೆಕೇರಿ ಡಿ. ರಾಜಶೇರ್, ಕಸಾಪ ಜಿಲ್ಲಾ ಕಾರ್ಯದರ್ಶಿ ಸಿ. ರಾಜಶೇಖರ್ ಮಾತನಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.