ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ಮದುವೆ ಬದಲು ಬಡವರಿಗೆ ಮನೆ ನಿರ್ಮಿಸಿ

ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯ
Last Updated 16 ಫೆಬ್ರುವರಿ 2020, 11:56 IST
ಅಕ್ಷರ ಗಾತ್ರ

ರಾಮನಗರ: ಶಾಸಕ ಎಚ್.ಡಿ. ಕುಮಾರಸ್ವಾಮಿ ಅವರು ಮಗನ ಮದುವೆಯನ್ನು ನೂರಾರು ಕೋಟಿ ವೆಚ್ಚದಲ್ಲಿ ಮಾಡಲು ಹೊರಟಿದ್ದಾರೆ. ಈ ಹಣದಲ್ಲಿ ರಾಮನಗರ, ಚನ್ನಪಟ್ಟಣದಲ್ಲಿರುವ ಸಾವಿರಾರು ವಸತಿ ಹೀನರಿಗೆ ಮನೆಗಳನ್ನು ಕಟ್ಟಿಸಿ ಕೊಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನಗರ-ಚನ್ನಪಟ್ಟಣದ ಮಧ್ಯಭಾಗದಲ್ಲಿ ನೂರಾರು ಎಕರೆಯಲ್ಲಿ ಮಗನ ಮದುವೆಯನ್ನು ಆಯೋಜಿಸಲು ಮುಂದಾಗಿದ್ದಾರೆ. ಇದರಿಂದ ಹಲವು ಸಮಸ್ಯೆಗಳು ಎದುರಾಗಲಿವೆ. ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದಲ್ಲಿ ಮದುವೆಗೆ ಸೆಟ್ ಹಾಕುವುದರಿಂದ ಜನರಿಗೆ ಅನಗತ್ಯವಾಗಿ ತೊಂದರೆಯಾಗುತ್ತದೆ’ ಎಂದರು.

‘ಜತೆಗೆ ಕೋಟ್ಯಂತರ ಹಣ ಖರ್ಚಾಗುತ್ತದೆ. ಇದೇ ಹಣದಲ್ಲಿ ನಿರ್ಗತಿಕರಿಗೆ ತಮ್ಮ ಮಗನ ಹೆಸರಿನಲ್ಲಿ ಮನೆ ಕಟ್ಟಿಸಿಕೊಟ್ಟರೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಚುನಾವಣಾ ಸಮಯದಲ್ಲಿ ಎಲ್ಲಡೆ ಈ ಪ್ರದೇಶವನ್ನು ಕುರಿತು ಇದು ನನ್ನ ಕರ್ಮಭೂಮಿ ಎಂದು ಹೇಳುತ್ತಾರೆ. ಹಿಂದೆ ಕನಕಪುರದ ಮುನ್ಸಿಪಲ್ ಮೈದಾನದಲ್ಲಿ ತನ್ನ ಮಗನ ಮದುವೆ ಮಾಡುತ್ತೇನೆ ಎಂದಿದ್ದರು. ಸಮಯಕ್ಕೆ ತಕ್ಕಂತೆ ಮಾತನಾಡುವ ಕುಮಾರಸ್ವಾಮಿ ತಮ್ಮ ಮಗನ ಮದುವೆಯನ್ನು ರಾಜಕೀಯಕರಣಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮದು ರೈತರ ಪಕ್ಷ, ಬಡವರ ಪಕ್ಷ ಎಂದು ಹೇಳುವ ಕುಮಾರಸ್ವಾಮಿ ಈಗಲೂ ಜನಪರ ಹೋರಾಟಕ್ಕೆ ತೊಡಗಿಸಿಕೊಂಡಿಲ್ಲ. ತಮ್ಮ ಮಗನ ಮದುವೆ ನಿಶ್ಚಯಗೊಂಡಿರುವುದರಿಂದ ಕ್ಷೇತ್ರಕ್ಕೆ ಪದೇ ಪದೇ ಬರುತ್ತಿದ್ದಾರೆ ಎಂದು ತಿಳಿಸಿದರು.

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಮೀಸಲಾತಿ ಮತ್ತು ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಏಳು ನ್ಯಾಯಾಧೀಶರ ಪೀಠವು ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಆದರೂ ಮೀಸಲಾತಿಯ ವಿರುದ್ಧದ ತೀರ್ಪುಗಳು ಮತ್ತೆ ಮತ್ತೆ ಬರುತ್ತಿರುವುದನ್ನು ನೋಡಿದರೆ ಮೀಸಲಾತಿ ವಿರುದ್ಧ ವ್ಯವಸ್ಥಿತ ಸಂಚಾಗಿದೆ ಎಂದು ಆರೋಪಿಸಿದರು.

ಮೀಸಲಾತಿಗೆ ಸಂಬಂಧಿಸಿದ ಎಲ್ಲ ಕಾಯ್ದೆಗಳನ್ನು ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ ತಂದು ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿಡಬೇಕು. ಮೀಸಲಾತಿ ಎಂದರೆ ಸಾಮಾನ್ಯವಾಗಿ ಪರಿಶಿಷ್ಟರಿಗೆ ಮಾತ್ರ ಸೇರಿದ್ದು ಎಂಬ ಭಾವನೆ ಜನರಲ್ಲಿದೆ. ಆದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಶೇ 22.5ರಷ್ಟು ಮೀಸಲಾತಿ ಪಡೆಯುತ್ತಿದ್ದರೆ, ಹಿಂದುಳಿದ ವರ್ಗಗಳು ಶೇ 27ರಷ್ಟರ ಲಾಭ ಪಡೆಯುತ್ತಿವೆ ಎಂದು ವಿವರಿಸಿದರು.

ಮೀಸಲಾತಿ ಉಳಿವಿನ ಹೋರಾಟದಲ್ಲಿ ಪರಿಶಿಷ್ಟರ ಜತೆಗೆ ಹಿಂದುಳಿದ ವರ್ಗಗಳ ಜನರು ಕೈಜೋಡಿಸಬೇಕು ಎಂದರು. ಟ್ರಸ್ಟಿನ ವೆಂಕಟಾಚಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT