ಶುಕ್ರವಾರ, ಆಗಸ್ಟ್ 6, 2021
27 °C

ಭಾರ್ಗಾವತಿ ಕೆರೆ ಉಳಿಸಲು ಆಗ್ರಹ: ರೈತ ಸಂಘ, ಮಠಾಧೀಶರಿಂದ ಜು. 17ರಿಂದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಭಾರ್ಗಾವತಿ ಕೆರೆಗೆ ಹರಿಸುತ್ತಿರುವ ಪುರಸಭೆ ಒಳಚರಂಡಿ ಕಲುಷಿತ ನಿಲ್ಲಿಸಬೇಕು. ಪವಿತ್ರ ಕೆರೆ ಉಳಿಸಲು ಹೋರಾಟ ರೂಪಿಸಲಾಗುತ್ತಿದೆ’ ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದರು.

‘ಜು.17ರಂದು ಬೆಳಿಗ್ಗೆ 11 ಗಂಟೆಗೆ ಜಡೇದೇವರ ಮಠಾಧೀಶರಾದ ಇಮ್ಮಡಿ ಬಸವರಾಜ ಸ್ವಾಮಿ, ಗುಮ್ಮಸಂದ್ರ ಮಠಾಧೀಶರಾದ ಚಂದ್ರಶೇಖರಸ್ವಾಮೀಜಿ ಹಾಗೂ ರೈತ ಸಂಘದ ಸದಸ್ಯರು ಕೆರೆಗೆ ಭೇಟಿ ನೀಡಲಿದ್ದಾರೆ’ ಎಂದರು.

ಭಾರ್ಗಾವತಿ ಕೆರೆ ಉಳಿಸುವ ಹೋರಾಟಕ್ಕೆ ಯಶಸ್ಸು ಕೋರಿ ಸೋಮೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಒಳಚರಂಡಿ ಕಲುಷಿತವನ್ನು ಭಾರ್ಗಾವತಿ ಕೆರೆಗೆ ಹರಿಯುವುದನ್ನು ತಡೆಯುವಂತೆ ರೈತ ಸಂಘ ಹಾಗೂ ಪರಿಸರವಾದಿಗಳು ಹತ್ತಾರು ಬಾರಿ ಶಾಂತಿಯುತ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ನಮ್ಮ ಮನವಿಗೆ ಸ್ಥಳೀಯ ಆಡಳಿತ ಸ್ಪಂದಿಸಿಲ್ಲ. 2014ರಿಂದಲೂ ಒಳಚರಂಡಿ ಕಲುಷಿತ ಕೆರೆಯ ಒಡಲನ್ನು ಸೇರಿ ನೀರು ಮಲೀನವಾಗಿದೆ. ಭಾರ್ಗಾವತಿ ಕೆರೆ ಉಳಿಸಿಕೊಳ್ಳಲು ರೈತರು ಮತ್ತು ಕೆರೆಯ ಅಚ್ಚುಕಟ್ಟುದಾರರು ನಿರ್ಧರಿಸಿದ್ದೇವೆ. ವಿವಿಧ ಮಠಾಧೀಶರು ಕೆಂಪೇಗೌಡರ ಕಾಲದ ಕೆರೆ ಉಳಿಸಲು ನೇತೃತ್ವವಹಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಜು.17ರಂದು ಕೆರೆಯ ಬಳಿ ಇರುವ ಕೋಡಿ ಮಲ್ಲೇಶ್ವರ ಸ್ವಾಮಿದೇವರಿಗೆ ಉಡುವೆಗೆರೆ ಒಡೆರಯ್ಯ ಪೂಜೆ ಸಲ್ಲಿಸಲಿದ್ದಾರೆ’ ಎಂದರು.

‘ಉಡುವೆಗೆರೆ ಅನ್ನಧಾನೇಶ್ವರ ಶನೇಶ್ವರ ಕ್ಷೇತ್ರದ ರಮೇಶ ಸ್ವಾಮಿ, ಪುರ ಗ್ರಾಮದ ತಾರಮಂಡಲ ಶನೇಶ್ವರ ಕ್ಷೇತ್ರದ ಬೋರಯ್ಯಸ್ವಾಮಿ, ಕೋಡಿ ಶನೇಶ್ವರ ಕ್ಷೇತ್ರದ ಮಾರಯ್ಯಸ್ವಾಮಿ, ನೇತೇನಹಳ್ಳಿ, ಉಡುವೆಗೆರೆ, ಪರಂಗಿಚಿಕ್ಕನ ಪಾಳ್ಯ, ಗುಮ್ಮಸಂದ್ರ, ಪುರ, ಮಾಡಬಾಳ್ ಗ್ರಾಮಗಳ ಅಚ್ಚುಕಟ್ಟುದಾರರು ಭಾಗವಹಿಸಲಿದ್ದಾರೆ. ತಾಲ್ಲೂಕು ಆಡಳಿತ ಹೋರಾಟಕ್ಕೆ ಸ್ಪಂದಿಸದಿದ್ದರೆ ಮುಂದಿನ ಹೋರಾಟ ಉಗ್ರಸ್ವರೂಪ ಪಡೆಯಲಿದೆ. ಮಾಡಬಾಳ್, ನೇತೇನಹಳ್ಳಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರೆಲ್ಲರೂ, ಬೆಸ್ತರ ಸಂಘಗಳ ಪದಾಧಿಕಾರಿಗಳು ಕೆರೆಉಳಿಸಲು ಹೋರಾಟದಲ್ಲಿ ಭಾಗವಹಿಸಬೇಕು’ ಎಂದರು.

ಪವಿತ್ರ ಗಂಗೆ: ಜಡೇದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮಿ ಮಾತನಾಡಿ, ‘ಮುಮ್ಮಡಿ ಕೆಂಪೇಗೌಡರು ತನ್ನ ಮುದ್ದಿನ ಮಡದಿ ಭಾರ್ಗಾವತಿ ಆಕಾಂಕ್ಷೆಯಂತೆ ಕಣಿವೆಗೆ ಅಡ್ಡಲಾಗಿ ಬೃಹತ್ ಒಡ್ಡು ನಿರ್ಮಿಸಿ, ಏರಿ ಕಟ್ಟಿಸಿದ್ದಾರೆ. ಕಲಾತ್ಮಕ ತೂಬುಗಳನ್ನು ಇಡಿಸಿ ನಿರ್ಮಿಸಿರುವ ಸಿಹಿನೀರಿನ ತಟಾಕ ಇತಿಹಾಸ ಪ್ರಸಿದ್ಧ ಭಾರ್ಗಾವತಿ ಕೆರೆಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಧರ್ಮವಾಗಿದೆ’ ಎಂದು ತಿಳಿಸಿದರು.

ಗುಮ್ಮಸಂದ್ರದ ರುದ್ರಮುನೇಶ್ವರ ಮಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ‘ಭಾರ್ಗಾವತಿ ಕೆರೆಗೆ ಪುರಸಭೆ ಒಳಚರಂಡಿಯ ಕಲುಷಿತ ಹರಿಸುತ್ತಿರುವುದು ಅಮಾನವೀಯವಾಗಿದೆ. ಪವಿತ್ರ ಮಾಗಡಿ ಗಂಗೆಯಂತಿದ್ದ ಕೆರೆ ಮಲೀನವಾಗಿದೆ. ಕೆರೆಕಟ್ಟೆ ಗುಡಿಗೋಪುರಗಳು ಕೆಂಪೇಗೌಡರ ಕಾಲದ ಅನನ್ಯ ಕುರುಹುಗಳು. ಉಡುವೆಗೆರೆ ವೀರಶೈವಾಗಮ ಪಂಡಿತ ಒಡೆರಯ್ಯ ಅವರು ಕೋಡಿ ಮಲ್ಲೇಶ್ವರಸ್ವಾಮಿಯ ಅನನ್ಯ ಭಕ್ತರಾಗಿದ್ದು, ರೈತಾಪಿವರ್ಗದವರ ಭೂಮಿ ನೀರುಣಿಸುವ ಮಹತ್ವದ ಕೈಂಕರ್ಯ ಕೈಗೊಂಡಿದ್ದರು. ಚಾರಿತ್ರಿಕ ಸ್ಮಾರಕ ಮತ್ತು ಕೆರೆ ಉಳಿಸಲು ಶಾಂತಿಯುತ ಹೋರಾಟದಲ್ಲಿ ಅನ್ನದಾತರ ಪರವಾಗಿ ಭಾಗವಹಿಸುವೆ’ ಎಂದರು.

ಕನ್ನಡ ಸಹೃದಯ ಬಳಗದ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮಾರಣ್ಣ ಮಾತನಾಡಿ, ಕೆರೆಯನ್ನು ಉಳಿಸುವುದು ಈ ಭಾಗದ ಸರ್ವರ ಮಹತ್ವದ ಕೆಲಸವಾಗಿದ್ದು, ಪರಿಸರವಾದಿಗಳು, ಸಾಹಿತಿ ಕಲಾವಿದರು, ಇತಿಹಾಸಕಾರರು, ಪತ್ರಕರ್ತರು, ರೈತರು ಕೆರೆ ಉಳಿಸಲು ಮುಂದಾಗಬೇಕಿದೆ ಎಂದರು.

ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳಾದ ಚನ್ನರಾಯಪ್ಪ, ಮತ್ತದ ಹನುಮಂತರಾಯಪ್ಪ, ಜಯಣ್ಣ, ಯುವಘಟಕದ ಅಧ್ಯಕ್ಷ ರವಿಕುಮಾರ್, ಬಷೀರ್, ಪಟೇಲ್ ಹನುಮಂತಯ್ಯ, ಬುಡೇನ್ ಸಾಬ್, ಬೈಲಪ್ಪ, ರಂಗಸ್ವಾಮಯ್ಯ, ಗಿರೀಶ್, ಮತ್ತರಾಮು, ಮುನಿರಾಜು, ರಾಜು, ಹೊನ್ನೇಗೌಡ, ಗಂಗಣ್ಣ, ಕೃಷ್ಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು