ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ನಿರ್ಮಾಣಕ್ಕೆ ವಿಳಂಬ: ಜನರ ಆಕ್ರೋಶ

ಶಾಸಕಿ ಅನಿತಾ ಕುಮಾರಸ್ವಾಮಿಗೆ ಮುತ್ತಿಗೆ ಹಾಕಿದ ಹುಲಿಕೆರೆ ಗ್ರಾಮಸ್ಥರು
Last Updated 11 ನವೆಂಬರ್ 2019, 17:30 IST
ಅಕ್ಷರ ಗಾತ್ರ

ರಾಮನಗರ: ‘ಕೋಟಳ್ಳಿ-– ಹುಲಿಕೆರೆ ಮಧ್ಯೆ ಅರ್ಕಾವತಿ ನದಿಗೆ ಅಡ್ಡಲಾಗಿ ಯಾವುದೇ ಸೇತುವೆ ಇಲ್ಲ. ಈಗಾಗಲೇ 20 ಜನ ಪ್ರಾಣ ಕಳೆದುಕೊಂಡಿದ್ದರೂ ಇನ್ನೂ ಸೇತುವೆ ನಿರ್ಮಾಣಕ್ಕೆ ಮುಂದಾಗಿಲ್ಲ’ ಎಂದು ಹುಲಿಕೆರೆ ಗ್ರಾಮಸ್ಥರು ಶಾಸಕಿ ಅನಿತಾ ಕುಮಾರಸ್ವಾಮಿ ಎದುರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಹುಲಿಕೆರೆ ಗ್ರಾಮದ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಸೋಮವಾರ ಬಂದಿದ್ದ ಶಾಸಕಿ ಅನಿತಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದರು. ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನುದಾನ ಬಿಡುಗಡೆ ಆಗಿದ್ದು, ಸೇತುವೆ ಕಾಮಗಾರಿಗೆ ತಾವೇ ಶಂಕುಸ್ಥಾಪನೆ ನೆರವೇರಿಸಿದ್ದೀರಿ. ಒಂದೂವರೆ ವರ್ಷದಿಂದ ಇಲ್ಲಿಯವರೆಗೂ ಸೇತುವೆ ಕಾಮಗಾರಿ ಪ್ರಾರಂಭವಾಗಿಲ್ಲ. ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ನಾವು ಕೇಳಿದಾಗ ಮಾಡಿಸುತ್ತೇನೆ ಎಂದು ಹೇಳುತ್ತೀರಿ ಅಷ್ಟೆ. ಹೀಗಾದರೆ ಮುಂದೆ ನಮ್ಮ ಗ್ರಾಮಕ್ಕೆ ಮತ ಕೇಳಲು ಬರಬೇಡಿ’ ಎಂದು ಏರುಧ್ವನಿಯಲ್ಲಿಯೇ ಗ್ರಾಮಸ್ಥರು ಅಸಮಾಧಾನ ಹೇಳಿಕೊಂಡರು.

ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದ ಅನಿತಾ, ಕೆಲವೇ ದಿನಗಳಲ್ಲಿ ಸೇತುವೆ ಕಾಮಗಾರಿಗೆ ಚಾಲನೆ ಕೊಡಿಸಲಾಗುವುದು. ಸ್ವಲ್ಪ ತಾಳ್ಮೆವಹಿಸಿ ಎಂದು ಗ್ರಾಮಸ್ಥರನ್ನು ಸಮಾಧಾನಿಸಲು ಮುಂದಾದರು.

ಪೋಲೀಸರ ವಿರುದ್ಧ ಧಿಕ್ಕಾರ: ಗ್ರಾಮದ ಯುವಕರು ಒಮ್ಮೇಲೆ ಶಾಸಕರನ್ನು ಅಡ್ಡಗಟ್ಟಿಕೊಂಡು ಸೇತುವೆ ಕಾಮಗಾರಿ ವಿಷಯವಾಗಿಯೇ ಕೇಳಲು ಮುಂದಾದಾಗ, ಪೊಲೀಸರು ಅವರನ್ನು ಚದುರಿಸಿ ಶಾಸಕರಿಗೆ ಕಾರಿನತ್ತ ಹೋಗಲು ಅನುವು ಮಾಡಿಕೊಟ್ಟರು. ಇದರಿಂದ ಸಿಟ್ಟಾದ ಗ್ರಾಮದ ಕೆಲವರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಪಡಿಸಿದರು.
ಮೊಟ್ಟೆದೊಡ್ಡಿ ಗ್ರಾಮದ ಶ್ರೀನಿವಾಸ ದೇವಾಲಯಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಸೋಮವಾರ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾದರು. ಹುಲಿಕೆರೆ ದೇವಾಲಯದ ಆವರಣದಲ್ಲಿ ಅನಿತಾಕುಮಾರಸ್ವಾಮಿ ಅವರನ್ನು ದೇವಾಲಯದ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಸನ್ಮಾನಿಸಿದರು.

ದೇವಸ್ಥಾನ ಉದ್ಘಾಟನೆ: ಹುಲಿಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮರುಳಸಿದ್ದೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ವಿಘ್ನೇಶ್ವರ, ಮರುಳಸಿದ್ದೇಶ್ವರ ಮತ್ತು ಅನ್ನಪೂರ್ಣೆಶ್ವರಿ ದೇವರ ನೂತನ ವಿಗ್ರಹಗಳ ಪ್ರತಿಷ್ಠಾಪನೆ, ವಿಮಾನ ಗೋಪುರ, ಕಳಸ ಪ್ರತಿಷ್ಠಾಪನೆ ಕಾರ್ಯ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯದ ಆವರಣದಲ್ಲಿ ದೊಡ್ಡರಸಿನಕೆರೆ ಬಸವನ ಪೂಜೆ ಏರ್ಪಡಿಸಲಾಗಿತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ಸುಮಾರು ಐದು ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ದೇವಾಲಯದ ಸೇವಾ ಟ್ರಸ್ಟ್ ಮತ್ತು ಗ್ರಾಮಸ್ಥರಿಂದ ಅನ್ನಸಂತರ್ಪಣೆ ನಡೆಯಿತು.

ವಿಧಾನ ಪರಿಷತ್ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್. ರವಿ, ಹಿರಿಯ ಮುಖಂಡ ಕೆ. ರಾಜು, ಮರುಳಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸೇವಾ ಟ್ರಸ್ಟಿನ ಗೌರವ ಅಧ್ಯಕ್ಷ ಎಚ್.ಟಿ. ಬೆಟ್ಟೇಗೌಡ, ಅಧ್ಯಕ್ಷ ಎಚ್.ಎಸ್. ದೇವರಾಜು, ಉಪಾಧ್ಯಕ್ಷ ಎಚ್.ಸಿ. ರಾಜಣ್ಣ, ಕಾರ್ಯದರ್ಶಿ ಎಚ್.ವಿ. ಶ್ರೀನಿವಾಸಮೂರ್ತಿ, ಖಜಾಂಚಿ ಎಚ್.ಕೆ. ವೆಂಕಟೇಶ್, ಸದಸ್ಯರಾದ ಎಚ್.ಎಸ್. ವೆಂಕಟೇಶ್, ನರಸಿಂಹಮೂರ್ತಿ, ಪ್ರಭು, ಪುಟ್ಟಮಾದಯ್ಯ, ಎಚ್.ಆರ್. ಚಂದ್ರಶೇಖರ್, ಎಚ್.ಎಂ. ಲಿಂಗರಾಜೇಗೌಡ, ನಾರಾಯಣಪ್ಪ, ರುದ್ರಯ್ಯ, ಎಚ್.ಎಸ್. ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT