ಶುಕ್ರವಾರ, ಆಗಸ್ಟ್ 19, 2022
22 °C
ಅಣೆಕಟ್ಟೆ ನಿರ್ಮಾಣ ಸ್ಥಳಕ್ಕೆ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೇಟಿ

"ಮೇಕೆದಾಟು ಯೋಜನೆ: ಕೇಂದ್ರಕ್ಕೆ ನಿಯೋಗ"

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜ್ಯದ ಮಹಾತ್ಮಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮೇಕೆದಾಟು ಅಣೆಕಟ್ಟೆ‌ ನಿರ್ಮಾಣ ಸಂಬಂಧ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಜೊತೆಗೂಡಿ ಕೇಂದ್ರ ಜಲಶಕ್ತಿ ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಕನಕಪುರ ತಾಲ್ಲೂಕಿನ ಸಂಗಮ-ಮೇಕೆದಾಟು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಯೋಜನೆಗಾಗಿ ₨9 ಸಾವಿರ ಕೋಟಿ ವೆಚ್ಚದ ಡಿಪಿಆರ್ ಈಗಾಗಲೇ ಸಿದ್ಧವಾಗಿದೆ. ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೇ ಇದರ ಡಿಪಿಆರ್ ಸಿದ್ಧವಾಗಿದ್ದು, ನಂತರ ನನೆಗುದಿಗೆ ಬಿದ್ದಿತ್ತು. ಈಗ ಮತ್ತೊಮ್ಮೆ ಪರಿಷ್ಕೃತ ಪ್ರಸ್ತಾವ ಸಲ್ಲಿಸಲಾಗುವುದು. ಬೆಂಗಳೂರು ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ ಜೀವನಾಡಿಯಾಗಲಿರುವ ಈ ಸಮತೋಲನ ಜಲಾಶಯ ಯೋಜನೆಯ ಅನುಷ್ಠಾನ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಇನ್ನೊಮ್ಮೆ ಭೇಟಿ ಮಾಡಿ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.

ಈ ಯೋಜನೆಗೆ ಒಟ್ಟಾರೆಯಾಗಿ 5252 ಹೆಕ್ಟೇರ್ ಪ್ರದೇಶ ಅವಶ್ಯವಿದ್ದು, ಇದರಲ್ಲಿ 3181 ಹೆಕ್ಟೇರ್ (ಶೇ.63) ವನ್ಯಜೀವಿ ಪ್ರದೇಶ , 1870 ಹೆಕ್ಟೇರ್ (ಶೇ.37) ಮೀಸಲು ಅರಣ್ಯ ಹಾಗೂ 201 ಹೆಕ್ಟೇರ್ ಕಂದಾಯ ಪ್ರದೇಶವಿದೆ. ಒಟ್ಟಾರೆ 5051 ಹೆಕ್ಟೇರ್ (ಶೇ.96) ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ಹೀಗಾಗಿ ಕೇಂದ್ರ ಅರಣ್ಯ ಇಲಾಖೆಯ ಅನುಮೋದನೆ ಪಡೆಯುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯೋಜನೆ ವರದಿ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದು, ನಂತರ ನೆನೆಗುದಿಗೆ ಬಿದ್ದಿತ್ತು. ಇದೀಗ ₨9 ಸಾವಿರ ಕೋಟಿ ವೆಚ್ಚದ ಪರಿಷ್ಕೃತ ಯೋಜನೆಯನ್ನು ಸಲ್ಲಿಸಲಾಗಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ‌ ಚುನಾವಣೆ ಇದೆ. ಹೀಗಾಗಿ ನೆರೆಯ ರಾಜ್ಯದಿಂದ ಸಹಜವಾಗಿಯೇ ಇದಕ್ಕೆ ಅಡೆತಡೆ ಹೆಚ್ಚಿದೆ. ಅಲ್ಲಿನ ಸರ್ಕಾರ ಸುಪ್ರೀಂ ಕೋರ್ಟ್‌‌ನಲ್ಲಿ ಈ ಸಂಬಂಧ ತಡೆ ಕೋರಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಕೇಂದ್ರ ಹಾಗೂ ಕರ್ನಾಟಕ ಸರ್ಕಾರಗಳು ಪ್ರತಿ ಪ್ರಮಾಣ ಪತ್ರಗಳಿಗೆ ಪ್ರತ್ಯುತ್ತರ ಸಲ್ಲಿಸಿದೆ. ಅಗತ್ಯ ಬಿದ್ದರೆ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದರು.

ಸಮುದ್ರಕ್ಕೆ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಹಿಡಿದಿಟ್ಟು ಸಂಕಷ್ಟದ ಸಮಯದಲ್ಲಿ ಬಳಕೆ ಮಾಡಿಕೊಳ್ಳಲು ಈ ಜಲಾಶಯವನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುವುದು. ಈ ಯೋಜನೆಯನ್ನು ಕೃಷಿ ಚಟುವಟಿಕೆ ಹೊರತು ಪಡಿಸಿ ಕುಡಿಯುವ ನೀರಿಗೆ ಮಾತ್ರ ಬಳಸಿಕೊಳ್ಳುತ್ತೇವೆ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗನ್ನಾಥ್, ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.