ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿಟ್ಟು, ದೇಶ ಕಟ್ಟುವವರಿಗೆ ಮತ ಹಾಕಿ: ಸಾಹಿತಿಗಳ ಮನವಿ

‘ಜಾಗೃತ ನಾಗರಿಕರು- ಕರ್ನಾಟಕ’ ಸಂಘಟನೆಯ ಸಾಹಿತಿಗಳ ಮನವಿ
Published 23 ಏಪ್ರಿಲ್ 2024, 5:50 IST
Last Updated 23 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ರಾಮನಗರ: ‘ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಧರ್ಮಗಳ ಮಧ್ಯೆ ವ್ಯವಸ್ಥಿತವಾಗಿ ದ್ವೇಷ ಬಿತ್ತುವ ಕೆಲಸ ಮಾಡಲಾಗುತ್ತಿದೆ. ಈ ಚುನಾವಣೆಯಲ್ಲಿ ಮತದಾರರು ದ್ವೇಷ ಬಿತ್ತುವವರ ಬದಲು, ದೇಶ ಕಟ್ಟುವವರಿಗೆ ಮತ ಹಾಕಬೇಕು’ ಎಂದು ಲೇಖಕ ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು.

‘ಭಾರತಕ್ಕೆ ಧರ್ಮಾಧಾರಿತ ರಾಜಕೀಯ ಒಗ್ಗುವುದಿಲ್ಲ. ಕೋಮು ರಾಜಕೀಯದಿಂದಾಗಿ ದೇಶ ಮುಂದಕ್ಕೆ ಹೋಗುವ ಬದಲು ಹಿಂದಕ್ಕೆ ಹೋಗಿದೆ. ಮತ್ತೆ ಅದೇ ವ್ಯವಸ್ಥೆ ಮುಂದುವರಿದರೆ ದೇಶಕ್ಕೆ ಭಾರೀ ಅಪಾಯ ಎದುರಾಗಲಿದೆ’ ಎಂದು ‘ಜಾಗೃತ ನಾಗರಿಕರು- ಕರ್ನಾಟಕ’ ಸಂಘಟನೆ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ ಮಾತನಾಡಿ, ‘ಸಂವಿಧಾನದ ಆಶಯದಡಿ ದೇಶದಲ್ಲಿ ಸಮ ಸಮಾಜ ನಿರ್ಮಾಣ ಆಗಬೇಕಿತ್ತು.  ಆದರೆ, ವಿಕಾಸದ ಬದಲು ವಿನಾಶದ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಅಭಿವೃದ್ಧಿ ಬದಲು ಭಾವನಾತ್ಮಕ ವಿಷಯಗಳೇ ಹೆಚ್ಚು ಆದ್ಯತೆ ಪಡೆಯುತ್ತಿವೆ’ ಎಂದರು.

ಪತ್ರಕರ್ತ ಪಾರ್ವತೀಶ ಬಿಳಿದಾಳೆ, ‘ಈ ಚುನಾವಣೆಯಲ್ಲಿ ಕರ್ನಾಟಕವು ಎತ್ತಿರುವ ಪ್ರಶ್ನೆಗಳು ದೇಶದ ಗಮನ ಸೆಳೆಯುತ್ತಿವೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆಯು ಕೇಂದ್ರೀಕೃತ ವ್ಯವಸ್ಥೆಯಾಗುವತ್ತ ಸಾಗುತ್ತಿದೆ. ದೇಶಕ್ಕೆ ಒಳಿತಾಗುವ ನಿರ್ಣಯವನ್ನು ಮತದಾರರು ಕೈಗೊಳ್ಳಬೇಕು’ ಎಂದು ಹೇಳಿದರು.

ಲೇಖಕ ಡಾ. ರವಿಕುಮಾರ್ ಭಾಗಿ, ‘ಭಾರತ ವಿಶ್ವಗುರುವಾಗಿದೆ ಎಂದು ಬೀಗುತ್ತಿರುವವರಿಗೆ ದೇಶ ಯಾವುದರಲ್ಲಿ ವಿಶ್ವಗುರುವಾಗಿದೆ ಎಂದು ಜನ ಪ್ರಶ್ನಿಸಬೇಕಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಇಡಬ್ಲ್ಯೂ ಎಸ್ ಮೀಸಲಾತಿಯಿಂದಾಗಿ ಮೀಸಲಾತಿ ಆಶಯಕ್ಕೆ ಧಕ್ಕೆಯಾಗಿದೆ. ಈ ಸಲದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೇಲ್ಜಾತಿಯ ಒಂದೇ ಸಮುದಾಯದ 150 ಮಂದಿ ಪಾಸಾಗಿದ್ದಾರೆ‌. ಈ ಮೀಸಲಾತಿಯಿಂದ ಹಿಂದುಳಿದ ಸಮುದಾಯಗಳಿಗೆ ದೊಡ್ಡ ಅನ್ಯಾಯಾಗಿದೆ’ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ವಿ. ಬಾಬು, ಸುರೇಂದ್ರ ಹಾಗೂ ಇತರರು ಇದ್ದರು.

ಹುಬ್ಬಳ್ಳಿಯ ನೇಹಾ ಮತ್ತು ತುಮಕೂರಿನ ರುಕ್ಸನಾ ಕೊಲೆ ಹೇಯ ಕೃತ್ಯವಾಗಿದ್ದು ಎಲ್ಲರೂ ಖಂಡಿಸಬೇಕು. ಆದರೆ ನೇಹಾ ವಿಷಯವನ್ನು ಬಿಜೆಪಿ ಧರ್ಮ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ
– ಕೆ.ಎಸ್. ವಿಮಲಾ ಜನವಾದಿ ಮಹಿಳಾ ಸಂಘಟನೆ
ಮಹಿಳೆಯರ ಮೇಲೆ ದೌರ್ಜನ್ಯ ಏರುಗತಿಯಲ್ಲಿ ಸಾಗುತ್ತಿದೆ. ಆತ್ಮಹತ್ಯೆ ಹಸಿವು ಅಪೌಷ್ಟಿಕತೆ ಹೆಚ್ಚಳವಾಗಿದೆ. ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಅವರಿಗೆ ನ್ಯಾಯ ಸಿಕ್ಕಿಲ್ಲ
– ವಸುಂಧರಾ ಭೂಪತಿ ಲೇಖಕಿ

‘ಕೋಮುವಾದದಿಂದ ಸಮಾಜ ಅಸ್ಥಿರ’

ದೇಶದಲ್ಲಿ ಕೋಮುವಾದ ಆಧಾರಿತ ರಾಜಕೀಯದಿಂದಾಗಿ ಸಮಾಜ ಅಸ್ಥಿರಗೊಳ್ಳುತ್ತಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆಗಳ ಜೊತೆಗೆ ದೊಡ್ಡಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ. ಕೋಮು ಸೌಹಾರ್ದ ಕಾಯ್ದುಕೊಳ್ಳುವ ಮತ್ತು ಅಭಿವೃದ್ಧಿಪರ ರಾಜಕಾರಣ ಮಾಡುವವರನ್ನು ಜನ ಚುನಾವಣೆಯಲ್ಲಿ ಬೆಂಬಲಿಸಬೇಕು’ ಎಂದು ಸಾಹಿತಿ ಬಂಜೆಗೆರೆ ಜಯಪ್ರಕಾಶ್ ಹೇಳಿದರು. ‘ದೇಶದಲ್ಲಿ ಅಭಿವೃದ್ಧಿ ವಿಷಯಕ್ಕಿಂತ ಹೆಚ್ಚಾಗಿ ರಾಮಮಂದಿರ ವಿಷಯವೇ ಚರ್ಚೆಯಾಗುತ್ತಿದೆ. ಇದು ಅಪಾಯಕಾರಿ. ಮತದಾರರು ಸಂವಿಧಾನ ಸಾಮಾಜಿಕ ನ್ಯಾಯ ಜಾತ್ಯತೀತ ನಿಲುವು ದಲಿತರು ಹಿಂದುಳಿದವರು ಮಹಿಳೆಯರು ರೈತರು ಹಾಗೂ ಕಾರ್ಮಿಕರ ಪರವಾಗಿರುವವರನ್ನು ಆಯ್ಕೆ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT