ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದಿದ್ದರು: ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಆರೋಪ

ಜಿಲ್ಲೆಯ ರಾಜಕಾರಣಿಗಳ ಕುರಿತು ಹಗುರವಾಗಿ ಮಾತನಾಡಬೇಡಿ: ಎಚ್ಚರಿಕೆ
Last Updated 13 ಆಗಸ್ಟ್ 2022, 2:39 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇದನ್ನು ಮುಂದುವರಿಸಿದರೆ ಅವರನ್ನು ಅಡ್ಡಗಟ್ಟಿ ಪ್ರಶ್ನಿಸಬೇಕಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ದೊಡ್ಡಮಳೂರಿನ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ತೆಂಗಿನಕಾಯಿ ಮಾರಿಕೊಂಡಿದ್ದ ಯೋಗೇಶ್ವರ್ ನೀರಾವರಿ ತಜ್ಞರಾದರಾ ಎಂದು ಅವರು(ಕುಮಾರಸ್ವಾಮಿ) ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಹಾಗಿದ್ದರೆ ನೀರಾವರಿ ಯೋಜನೆಗಳ ಬಗ್ಗೆ ಅರಿವಿಲ್ಲದ ಅವರು ಹೇಗೆ ನೀರಾವರಿ ತಜ್ಞರಾದರು’ ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಜಿಲ್ಲೆಯ ಎಲ್ಲಾ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧವೂ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಈ ರೀತಿ ಹಗುರವಾಗಿ ಮಾತನಾಡುವುದು ಅವರ ಯೋಗ್ಯತೆಗೆ ಸರಿಯಲ್ಲ. ಅವರಿಗೆ ಅದು ಶೋಭೆ ತರುವುದಿಲ್ಲ ಎಂದರು.

ಚಹಾ ಮಾರುತ್ತಿದ್ದ ನರೇಂದ್ರ ಮೋದಿ ದೇಶದ ಪ್ರಧಾನಿಯಾದರು. ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ರಾಷ್ಟ್ರಪತಿಯಾದರು. ಆಟೊ ಓಡಿಸುತ್ತಿದ್ದ ಏಕನಾಥ ಶಿಂದೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದರು. ಇವೆಲ್ಲವೂ ಈ ದೇಶದ ಸಂವಿಧಾನದ ಅದ್ಭುತ. ಇಂಥವುಗಳು ನಮ್ಮ ಕಣ್ಮುಂದೆ ಇರುವಾಗ ಒಂದು ವೃತ್ತಿ ಬಗ್ಗೆ ಹಗುರುವಾಗಿ ಮಾತನಾಡುವುದು ಸರಿಯಲ್ಲ ಎಂದರು.

‘ನಾನು ತೆಂಗಿನಕಾಯಿ, ಬಾಳೆದಿಂಡು ಕುಯ್ದು ವ್ಯಾಪಾರ ಮಾಡಿದ್ದೇನೆ. ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ವೃತ್ತಿ ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ. ಕುಮಾರಸ್ವಾಮಿಗೆ ಕುಟುಂಬ ಹಿನ್ನೆಲೆ ಇರಬಹುದು. ಆದರೆ ನಾನು ಜನರ ಮಧ್ಯೆ ಬೆಳೆದ ನಾಯಕ. ಪಟೇಲನ ಮಗನೇ ಪಟೇಲ ಆಗಬೇಕು ಎಂದೆನಿಲ್ಲ. ಜನಪರ ಕಾಳಜಿ ಇರುವ ಯಾರಾದರೂ ಮುಂದೆ ಬರಬಹುದು’ ಎಂದು ಕುಟುಕಿದರು.

ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಕುಮಾರಸ್ವಾಮಿ ನಯಾಪೈಸೆ ಕೊಡುಗೆ ನೀಡಿಲ್ಲ. ಕಣ್ವ ಎಡದಂಡೆ, ಬಲದಂಡೆ ಯೋಜನೆ, ಮಾಕಳಿ ನೀರಾವರಿ ಯೋಜನೆ ಎಲ್ಲ ನನ್ನ ಕೊಡುಗೆಗಳು. ಇದರಲ್ಲಿ ಕುಮಾರಸ್ವಾಮಿ ಕೊಡುಗೆ ಏನೂ ಇಲ್ಲ ಎಂದರು.

‘2023ರ ಸಾರ್ವತ್ರಿಕ ಚುನಾವಣೆಯಲ್ಲಿ ತಾಲ್ಲೂಕಿನಿಂದ ನಾನು ಸ್ಪರ್ಧಿಸುತ್ತೇನೆ. ಕುಮಾರಸ್ವಾಮಿಯೂ ಸ್ಪರ್ಧಿಸಲಿ. ಆಗ ಜನ ತೀರ್ಮಾನಿಸುತ್ತಾರೆ’ ಎಂದರು.

ಈ ಬಾರಿ ತಾಲ್ಲೂಕಿನ ಜನತೆ ಹಬ್ಬವನ್ನು ಅದ್ದೂರಿಯಾಗಿ ಮಾಡಲಿ ಎಂದು ಗೌರಿ-ಗಣೇಶ ಹಬ್ಬಕ್ಕೆ ತಾಲ್ಲೂಕಿನ ಜನತೆಗೆ 1001 ಗಣೇಶ ಮೂರ್ತಿಗಳನ್ನು ವಿತರಣೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.

ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ. ಜಯರಾಮು, ನಗರ ಘಟಕದ ಅಧ್ಯಕ್ಷ ಶಿವು, ಮುಖಂಡರಾದ ಎಸ್. ಲಿಂಗೇಶ್ ಕುಮಾರ್, ವಿ.ಬಿ. ಚಂದ್ರು ಇದ್ದರು.

‘ಎಚ್‌ಡಿಕೆ ನನ್ನಿಂದ ಹಣ ಪಡೆದಿದ್ರು’

‘ನಾನು 30 ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದಾಗ ಎಚ್.ಡಿ. ಕುಮಾರಸ್ವಾಮಿ ಬ್ಲ್ಯಾಕ್‌ಮೇಲ್ಮಾಡಿ ನನ್ನಿಂದ ಹಣ ಪಡೆದಿದ್ದರು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಆರೋಪಿಸಿದರು.

ತಾಲ್ಲೂಕಿನ ದೊಡ್ಡಮಳೂರಿನ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಾನು ರಿಯಲ್ ಎಸ್ಟೇಟ್ ಕೆಲಸ ಆರಂಭಿಸಿದಾಗ ಭೂ ಪರಿವರ್ತನೆ ಸೇರಿದಂತೆ ಯಾವೊಂದು ಕೆಲಸಗಳು ಆಗದಂತೆ ತಡೆ ಹಿಡಿಯಲಾಗಿತ್ತು. ನನ್ನನ್ನು ಹೆದರಿಸಿ ತೊಂದರೆ ನೀಡಲಾಯಿತು. ಮಧ್ಯವರ್ತಿಗಳಾದ ಬ್ಯಾಟಪ್ಪ, ನರಸಿಂಹ, ವೆಂಕಟೇಶ್ ಎಂಬುವರು ನನ್ನನ್ನು ಬೆದರಿಸಿ ಎಚ್‌ಡಿಕೆಗೆ ಹಣ ಕೊಡಿಸಿದ್ದರು’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT