ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಪ್ರಜ್ಞೆಯ ವಿಶಿಷ್ಟ ಪ್ರತಿಭೆ ರೇಣುಕಪ್ಪ ಗೌಡ

ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಭಿಮತ
Last Updated 23 ಜೂನ್ 2019, 20:23 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಮ್ಮನ್ನು ಅಗಲಿರುವ ರೇಣುಕಪ್ಪ ಗೌಡರು ವೈಚಾರಿಕ ಪ್ರಜ್ಞೆಯ ವಿಶಿಷ್ಟ ಪ್ರತಿಭೆ ಎಂದು ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ಎಂ.ಕೆ. ರೇಣುಕಪ್ಪ ಗೌಡ ಪ್ರತಿಷ್ಠಾನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮ್ಮ ಜೀವಿತಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ
ಪ್ರತಿಭೆಯ ಬೀಜವನ್ನು ಬಿತ್ತಿದ ಅಪರೂಪದ ವ್ಯಕ್ತಿ ರೇಣುಕಪ್ಪ ಗೌಡ’ ಎಂದು ಶ್ಲಾಘಿಸಿದರು.

ರೇಣುಕಪ್ಪ ಗೌಡರ ಕುರಿತು ಬೆಳಗಾವಿಯ ಆದಿತ್ಯ ಪ್ರಕಾಶನ ಪ್ರಕಟಿಸಿರುವ ‘ನಮ್ಮೇಷ್ಟ್ರು’ ಕೃತಿಯನ್ನು ಬಿಡುಗಡೆ ಮಾಡಿದ ಲೇಖಕ ಡಾ.ಜಿ.ಎಸ್.ಭಟ್ ‘ಗೌಡರ ಮೇಲಿನ ಗೌರವ, ಪ್ರೀತಿ, ಕಾಳಜಿಯಿಂದ ರೂಪುಗೊಂಡಿರುವ ಈ ಕೃತಿಯಲ್ಲಿ ಅವರ ವ್ಯಕ್ತಿಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ’ ಎಂದರು.

ರೇಣುಕಪ್ಪ ಗೌಡರು ಒಂದು ಜಾತಿಯ ಸೀಮಿತ ಚೌಕಟ್ಟಿನಲ್ಲಿ ಆಲೋಚನೆ ಮಾಡಿದವರಲ್ಲ. ಅವರಲ್ಲಿ ಸಮತೋಲನ ದೃಷ್ಟಿ ಇತ್ತು. ಮೇಲ್ನೋಟಕ್ಕೆ ಒರಟು, ಜಿಗುಟು ಅನಿಸಿದರೂ ಅಂತರಂಗದಲ್ಲಿ ಅವರು ಮೃದು ವ್ಯಕ್ತಿತ್ವದವರಾಗಿದ್ದರು ಎಂಬುದನ್ನು ಕೃತಿ ಸಮರ್ಥವಾಗಿ ಬಿಂಬಿಸಿದೆ ಎಂದು ಹೇಳಿದರು.

‘ಇಲ್ಲಿನ ಎಲ್‌ಬಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಬರಹಗಾರರಾಗಿಯೂ ನಾಡಿನಲ್ಲಿ ಹೆಸರು ಮಾಡಿರುವ ದೊಡ್ಡ ಪರಂಪರೆಯೇ ಇದೆ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಜಿ.ಕೆ. ಗೋವಿಂದರಾವ್, ಟಿ.ಪಿ. ಅಶೋಕ್, ಡಾ. ಗುರುರಾವ್ ಬಾಪಟ್ ಹೀಗೆ ಹಲವರನ್ನು ಹೆಸರಿಸಬಹುದು. ರೇಣುಕಪ್ಪ ಗೌಡರು ಅಧ್ಯಾಪನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಬಹುಶಃ ಬರವಣಿಗೆಯತ್ತ ಆಸಕ್ತಿ ಹೊರಳಿಸಲಿಲ್ಲ’ ಎಂದು ಹೇಳಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀಪತಿ ಹಳಗುಂದ, ’30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗಾಢ ಪ್ರಭಾವ ಬೀರಿದ ರೇಣುಕಪ್ಪ ಗೌಡರ ಹೆಸರಿನಲ್ಲಿ ಆರಂಭಿಸಿರುವ ಪ್ರತಿಷ್ಠಾನದ ಮೂಲಕ ಅವರ ಹುಟ್ಟೂರಾದ ಹೊಸನಗರ ತಾಲ್ಲೂಕಿನ ಮಸರೂರು ಗ್ರಾಮದಲ್ಲಿ ರಂಗಮಂದಿರ, ಗ್ರಂಥಾಲಯ, ರಂಗ ತರಬೇತಿ ಶಾಲೆ ಆರಂಭಿಸುವ ಉದ್ದೇಶವಿದೆ. ಪ್ರತಿವರ್ಷ ಗೌಡರ ಹೆಸರಿನಲ್ಲಿ ‘ಶ್ರೇಷ್ಟ ಅಧ್ಯಾಪಕ’, ‘ಶ್ರೇಷ್ಠ ಸಾಹಿತ್ಯ ಕೃತಿ’ ಪ್ರಶಸ್ತಿ ನೀಡುವ ಯೋಜನೆ ಇದೆ’ ಎಂದು ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷೆ ಸರೋಜಮ್ಮ ಅಧ್ಯಕ್ಷತೆ ವಹಿಸಿದ್ದರು. ‘ನಮ್ಮೇಷ್ಟ್ರು’ ಕೃತಿಯ ಸಂಪಾದಕರಾದ ವಿ. ಗಣೇಶ್, ಡಾ.ಸರ್ಫ್ರಾಜ್ ಚಂದ್ರಗುತ್ತಿ, ಮಸರೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್. ಉಮೇಶ್ ಮಾತನಾಡಿದರು.

ಸುಕನ್ಯಾ ಜಿ.ಭಟ್ ಪ್ರಾರ್ಥಿಸಿದರು. ಗಣೇಶ್ ಕೆಂಚನಾಲ ಸ್ವಾಗತಿಸಿದರು. ಡಾ.ಮೋಹನ್ ಚಂದ್ರಗುತ್ತಿ ವಂದಿಸಿದರು. ಸಿ.ರತ್ನಾಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT