ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಯುವಕರಿಂದ ರೌದ್ರಾವತಿಯ ಸ್ವಚ್ಛತೆ

Last Updated 30 ಮಾರ್ಚ್ 2020, 9:24 IST
ಅಕ್ಷರ ಗಾತ್ರ

ಕಾಳಗಿ: ನೈಸರ್ಗಿಕ ಜಲಧಾರೆಯ ಇಲ್ಲಿನ ರೌದ್ರಾವತಿ ನದಿಯನ್ನು ಸ್ವಚ್ಛಗೊಳಿಸಲು ಸ್ಥಳೀಯ ಕೆಲ ಯುವಕರು ಆಸಕ್ತಿ ವಹಿಸಿ ಮುಂದೆ ಬಂದಿದ್ದಾರೆ.

ಬೇಸಿಗೆ ಕಾಲದಲ್ಲಿ ಅದೆಷ್ಟೊ ಹಳ್ಳಿಗಳ ಜನರು ಹನಿ ನೀರಿಗಾಗಿ ಪರದಾಡುತ್ತಿರುವ ಇಂದಿನ ದಾರುಣ ಪರಿಸ್ಥಿತಿಯಲ್ಲಿ ಆರಾಧ್ಯದೈವ ನೀಲಕಂಠ ಕಾಳೇಶ್ವರ ಕೃಪೆಯಿಂದ ಕಾಳಗಿ ಪಟ್ಟಣ ನೀರಿನ ಝರಿಗಳಿಂದ ಊಹಿಸಲಾರದಷ್ಟು ಜಲ ಸಂಪನ್ಮೂಲ ಹೊಂದಿದೆ. ಇಲ್ಲಿ ವಿವಿಧ ಪುಷ್ಕರಣಿಗಳ ನಡುವೆ ಜುಳು ಜುಳು ಹರಿಯುವ ರೌದ್ರಾವತಿ ನದಿ ‘ಬತ್ತದ ಸೆಲೆ’ಯಾಗಿದೆ.

ಇಲ್ಲಿರುವ ಶಿಲ್ಪಕಲಾ ವೈಭವದ ದೇವಸ್ಥಾನಗಳನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ಇದನ್ನು ‘ಕಾಳಗಿ ಬುಗ್ಗಿ’ ಎಂದೇ ಕರೆಯುತ್ತಾರೆ. ಎಂಥಾ ಬರಗಾಲದಲ್ಲೂ (1972) ಹನಿ ನೀರು ಕಡಿಮೆಯಾಗದೆ ಸಮತಲ ಕಾಪಾಡಿಕೊಂಡು ಬಂದ ಕೀರ್ತಿ ಈ ಬುಗ್ಗಿಗೆ ಸಲ್ಲುತ್ತದೆ.

ಈ ಬುಗ್ಗಿಯ ನೀರನ್ನೇ ಅರ್ಧ ಊರಿನ ಜನರು ಕುಡಿಯಲು ಬಳಸುತ್ತಾರೆ. ಅದರಂತೆ 15 ರಿಂದ 20 ಮೋಟರ್ ಪಂಪ್‌ಸೆಟ್‌ಗಳು ರೈತರ ಜಮೀನುಗಳಿಗೆ ನೀರು ಹರಿಸುತ್ತವೆ. ಇನ್ನುಳಿದು ಮುಂದಕ್ಕೆ ಹರಿಯುವ ನೀರು ಕಾಗಿಣಾ ನದಿಗೆ ಸೇರಿಕೊಳ್ಳುತ್ತದೆ.

ಹೀಗೆ ದಿನಪೂರ್ತಿ ಎಷ್ಟೆಲ್ಲ ನೀರು ಹೊರಹೋದರೂ ಹನಿ ನೀರು ಕಡಿಮೆಯಾಗದ ಈ ಜೀವ ಸೆಲೆಯಲ್ಲಿ ಕೆಲ ವರ್ಷಗಳಿಂದ ಜೇಕು ಸೇರಿದಂತೆ ವಿವಿಧ ತರಹದ ಸಸ್ಯಗಳು ಬೆಳೆಯತೊಡಗಿವೆ

ಊರೊಳಗಿನ ಕೆಲ ಮಹಿಳೆಯರು ಇಲ್ಲೇ ಬಟ್ಟೆ ತೊಳೆಯುತ್ತಾರೆ. ಜತೆಗೆ ಕೆಲವರು ಚಿಂದಿ ಬಟ್ಟೆ, ಪೂಜೆಯ ನಂತರದ ವಸ್ತುಗಳು, ಪ್ಲಾಸ್ಟಿಕ್ ಮತ್ತಿತರ ಅನಗತ್ಯ ವಸ್ತುಗಳನ್ನು ಇದೇ ನೀರಲ್ಲಿ ಎಸೆಯುತ್ತಿದ್ದಾರೆ. ಊರಿನ ಕೆಲ ಕೊಳಚೆ ಹರಿದು ಬಂದು ಈ ನೀರನ್ನೇ ಸೇರಿಕೊಳ್ಳುತ್ತಿದೆ. ಇದರಿಂದ ನದಿ ಸಂಪೂರ್ಣ ಕಲುಷಿತಗೊಂಡಿದೆ. ಇಷ್ಟಾದರೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ.

ಬುಗ್ಗೆಯ ಸ್ಥಿತಿಗತಿ ನೋಡಿ ಸ್ಥಳೀಯ 12ರಿಂದ 15 ಜನ ಯುವಕರ ತಂಡ ಒಂದು ವಾರದಿಂದ ಪ್ರತಿದಿನ ಬೆಳಿಗ್ಗೆ 6ರಿಂದ 8 ಗಂಟೆವರೆಗೆ ನದಿಯ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಕೊರೊನಾ ಭೀತಿ ಎದುರಾಗಿದ್ದರೂ ಕೈಗೆ ಕವಚ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ವಾಹನದ ಟೈರ್, ಏಣಿ, ಬಿದಿರು ಕಟ್ಟಿಗೆ, ಹಗ್ಗ, ಬುಟ್ಟಿ ಬಳಸಿ ಕೈಗೆ ಬಂದಷ್ಟು ತ್ಯಾಜ್ಯ ಹೊರತೆಗೆದು ದಂಡೆಗೆ ಹಾಕುತ್ತಿದ್ದಾರೆ. ಇಷ್ಟಾದರೂ ಯಾರೊಬ್ಬ ಜನಪ್ರತಿನಿಧಿ ಈ ಕಡೆ ಕಣ್ಣು ಬಿಟ್ಟು ನೋಡದಿರುವುದು ನಿಷ್ಕಾಳಜಿಗೆ ಹಿಡಿದ ಕೈ ಗನ್ನಡಿಯಾಗಿದೆ.

‘ಇನ್ನೂ ಕೆಲವೊಂದಿಷ್ಟು ಸಾಮಾನುಗಳು ಬೇಕಾಗಿವೆ. ದೇವಸ್ಥಾನ ಸಮಿತಿ ಅಧ್ಯಕ್ಷರು ಕೊಡಿಸುವುದಾಗಿ ಹೇಳಿದ್ದಾರೆ. ನಮಗೆ ಎಷ್ಟು ಸಾಧ್ಯವೋ ಅಷ್ಟು ನಿಸ್ವಾರ್ಥವಾಗಿ ಕೆಲಸ ಮಾಡುತ್ತೇವೆ. ನಮ್ಮ ಕೆಲಸದ ಮೇಲೆ ಹಿಂದಿನಂತೆ ಈಗಲೂ ಯಾರೂ ಬಿಲ್ ಎತ್ತುವ ಪ್ರಯತ್ನ ಮಾಡಬಾರದು’ ಎಂದು ಯುವಕರ ತಂಡದ ಸದಸ್ಯ ಬಸವರಾಜ ಸಿಂಗಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT