ಸೋಮವಾರ, ಮಾರ್ಚ್ 8, 2021
29 °C

ಮಹಾಲಕ್ಷ್ಮೀ ಜಾತ್ರೆ: ಸಕಲ ಸಮೃದ್ಧಿಗಾಗಿ ಸಪ್ತ ಭಜನೆ, 31 ಗಂಟೆ ‘ಓಂ ನಮಃ ಶಿವಾಯ’ಜಪ

ಬಾಬುಗೌಡ ರೋಡಗಿ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ಸಕಲ ಜೀವರಾಶಿಯ ಒಳಿತಿಗಾಗಿ, ಉತ್ತಮ ಮಳೆ–ಬೆಳೆಗಾಗಿ, ನಾಡಿನ ಸಮಸ್ತ ಜನರ ಸಮೃದ್ಧಿಯ ಜೀವನಕ್ಕಾಗಿ ಹಲ ದಶಕಗಳಿಂದಲೂ ಸತತ 31 ತಾಸು ‘ಸಪ್ತ ಭಜನೆ’ ನಡೆಸುವ ಸಂಪ್ರದಾಯ ಬಸವನಬಾಗೇವಾಡಿ ತಾಲ್ಲೂಕು ಕಾಮನಕೇರಿ ಬೂದಿಹಾಳ ಗ್ರಾಮದಲ್ಲಿದೆ.

ಗ್ರಾಮದೇವತೆ ಮಹಾಲಕ್ಷ್ಮೀ ದೇವಿ ಜಾತ್ರೆಯ ಸಂದರ್ಭ ಎರಡು ದಿನ ನಡೆಯುವ ಈ ಸಪ್ತ ಭಜನೆಯಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಅಪಾರ ಸಂಖ್ಯೆಯ ಭಕ್ತರು ಜಮಾಯಿಸಿ, ಶ್ರದ್ಧಾ ಭಕ್ತಿಯಿಂದ ಭಜನೆಯಲ್ಲಿ ಭಾಗಿಯಾಗಿ ದೇವಿಯ ಕೃಪೆಗೆ ಪಾತ್ರರಾಗುವುದು ವಿಶೇಷ.

‘ಗ್ರಾಮದೇವತೆ ಜಾತ್ರೆ ಸಂದರ್ಭ ಸಪ್ತ ಭಜನೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಪ್ರತಿ ವರ್ಷ ಶ್ರಾವಣ ಮಾಸದ ಕೊನೆ ಗುರುವಾರ ಬೆಳಿಗ್ಗೆ 5 ಗಂಟೆಗೆ ಆರಂಭಗೊಳ್ಳುವ ಭಜನೆ, ಶುಕ್ರವಾರ ಮಧ್ಯಾಹ್ನ 12ಕ್ಕೆ, ಮಹಾಲಕ್ಷ್ಮೀ ದೇವಿ ಸೇರಿದಂತೆ ವಿವಿಧ ಪಲ್ಲಕ್ಕಿಗಳು ಕಂಟಿ ಲಕ್ಕಮ್ಮ ಗುಡಿಗೆ ತೆರಳಿದ ನಂತರ ಸಮಾಪ್ತಿಗೊಳ್ಳುತ್ತದೆ’ ಎಂದು ಗ್ರಾಮದ ಹಿರಿಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ದೇವಸ್ಥಾನದ ಗರ್ಭ ಗುಡಿಯ ಬಾಗಿಲ ಎರಡೂ ಬದಿಯಲ್ಲಿ ಏಳು ಮಣಿಗಳನ್ನಿಟ್ಟು, ಪಾಳಿಯಂತೆ ಪ್ರತಿ ಎರಡು ತಾಸಿಗೆ ಏಳು ಜನರ ತಂಡದಿಂದ ನಿರಂತರವಾಗಿ 31 ಗಂಟೆ ಭಜನೆ ನಡೆಯುತ್ತದೆ. ಗ್ರಾಮದ ಪ್ರತಿಯೊಂದು ಕುಟುಂಬದ ಒಬ್ಬ ಸದಸ್ಯರು ತಮ್ಮ ಪಾಳಿಯ ಅವಧಿಗೆ ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ ತಪ್ಪದೇ ದೇವಸ್ಥಾನಕ್ಕೆ ಬಂದು ಶ್ರದ್ಧಾ ಭಕ್ತಿಯಿಂದ ಭಜನೆಯಲ್ಲಿ ಭಾಗವಹಿಸುವುದು ಇಲ್ಲಿನ ವಾಡಿಕೆ.

ಕೇವಲ ಭಜನೆಯಲ್ಲದೆ ಜಾತ್ರೆಯಲ್ಲಿ ಐದು ಗ್ರಾಮಗಳ ದೇವರ ಪಲ್ಕಕ್ಕಿ ಮೆರವಣಿಗೆ, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಶುಕ್ರವಾರ ಅನ್ನ ಪ್ರಸಾದದ ನಂತರ ಸಿದ್ಧಪುರುಷ ಅಡಿವೆಪ್ಪ ಮಹಾರಾಜ ಸೇರಿದಂತೆ ವಿವಿಧ ಹಳ್ಳಿಗಳಿಂದ ಆಗಮಿಸಿದ ಪೂಜಾರಿಗಳು ಮಳೆ–ಬೆಳೆ, ಪ್ರಸಕ್ತ ಹಾಗೂ ಭವಿಷ್ಯ ಕುರಿತಂತೆ ಹೇಳಿಕೆ ನೀಡುತ್ತಾರೆ. ಇದನ್ನು ಆಲಿಸಲು ವಿವಿಧ ಭಾಗದ ಜನ ನಮ್ಮೂರಿಗೆ ಬರಲಿದ್ದಾರೆ’ ಎಂದು ಗ್ರಾಮದ ಹಿರಿಯರು ಹೇಳಿದರು.

‘ದೇವಿ ಜಾತ್ರೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುವುದರಿಂದ ಈವರೆಗೂ ಗ್ರಾಮದ ಜನರಿಗೆ ಏನು ಕೊರತೆಯಾಗಿಲ್ಲ. ಈ ವರ್ಷ ಜಿಲ್ಲೆಯಲ್ಲಿ ಎಲ್ಲಿಯೂ ಸರಿಯಾಗಿ ಮಳೆ ಆಗದಿದ್ದರೂ; ನಮ್ಮೂರಲ್ಲಿ ಉತ್ತಮ ಮಳೆಯಾಗಿ, ಚಲೋ ಬೆಳೆಯಿದೆ. ಇದರಿಂದ ಮತ್ತಷ್ಟು ವಿಜೃಂಭಣೆಯಿಂದ ಜಾತ್ರೆ ಮಾಡಲು ಹುಮ್ಮಸ್ಸು ಬಂದಿದೆ’ ಎಂದು ಗ್ರಾಮಸ್ಥರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.