ರಾಮನಗರ:ಎತ್ತಿನಗಾಡಿ ಏರಿ ಕಾಂಗ್ರೆಸ್ ಪ್ರತಿಭಟನೆ

7
ವಿವಿಧ ಸಂಘಟನೆಗಳಿಂದಲೂ ಆಕ್ರೋಶ: ಐಜೂರು ವೃತ್ತದಲ್ಲಿ ಸರಣಿ ಹೋರಾಟ

ರಾಮನಗರ:ಎತ್ತಿನಗಾಡಿ ಏರಿ ಕಾಂಗ್ರೆಸ್ ಪ್ರತಿಭಟನೆ

Published:
Updated:
Deccan Herald

ರಾಮನಗರ: ಭಾರತ್ ಬಂದ್ ಅಂಗವಾಗಿ ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ನಗರದಲ್ಲಿ ಸೋಮವಾರ ಸರಣಿ ಪ್ರತಿಭಟನೆ ನಡೆಸಿದವು.

ನಗರದ ರೈಲು ನಿಲ್ದಾಣದಿಂದ ಎತ್ತಿನಗಾಡಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಸಮಾವೇಶಗೊಂಡರು. ಎಂ.ಜಿ, ರಸ್ತೆ, ಕೋರ್ಟ್ ರಸ್ತೆ, ಬಿ.ಎಂ ರಸ್ತೆ ಮೂಲಕ ಹಾದು ಬಂದ ಮೆರವಣಿಗೆಯು ಐಜೂರು ವೃತ್ತರದಲ್ಲಿ ಅಂತ್ಯವಾಯಿತು. ಈ ವೇಳೆ ಕೆಲ ಕಾಲ ರಸ್ತೆ ತಡೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿದರು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಳೆದ ನಾಲ್ಕು ವರ್ಷದಲ್ಲಿ ₨11 ಲಕ್ಷ ಕೋಟಿ ತೆರಿಗೆ ಸಂಗ್ರಹದ ಮೂಲಕ ಲೂಟಿ ಮಾಡುತ್ತಿದೆ. ವಿದೇಶಗಳಿಗೆ ಅಗ್ಗದ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಮಾಡುತ್ತಿದ್ದು, ದೇಶದ ಜನತೆಯ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

2014 ಮೇ 16 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 107 ಡಾಲರ್‌ ಇತ್ತು. ಈಗ ಅದು 73 ಡಾಲರ್‌ಗೆ ಇಳಿದಿದೆ. ಶೇ 40ರಷ್ಟು ಬೆಲೆ ಕಡಿಮೆಯಾಗಿದ್ದರೂ ಸರ್ಕಾರ ಬೆಲೆ ಏರಿಸುತ್ತಲೇ ಇದೆ. ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ 2014ರ ಮೇ ತಿಂಗಳಿಂದ ಶೇ.211ರಷ್ಟು ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ₨9.2 ರಷ್ಟಿದ್ದ ತೆರಿಗೆ ಈಗ ₨19.48ಕ್ಕೆ ಏರಿದೆ. ಡೀಸೆಲ್‌ ಮೇಲಿನ ಅಬಕಾರಿ ತೆರಿಗೆ ಶೇ 443ಕ್ಕೆ ಏರಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲಿಂದ 12 ಬಾರಿ ಕೇಂದ್ರ ಅಬಕಾರಿ ತೆರಿಗೆಯನ್ನು ಏರಿಸಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮೋದಿ ಸರ್ಕಾರವು ಪೆಟ್ರೋಲ್‌ ಅನ್ನು ಲೀಟರ್‌ಗೆ ₨34ರಂತೆ 15 ದೇಶಗಳಿಗೆ ಹಾಗೂ ಡೀಸೆಲ್ ಅನ್ನು ₨37 ರಂತೆ 29 ದೇಶಕ್ಕೆ ರಫ್ತು ಮಾಡುತ್ತಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿಯಾವುಲ್ಲಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್‌, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಿಜಾಮುದ್ದೀನ್‌ ಷರೀಫ್, ಮುಖಂಡರಾದ ಇಕ್ಬಾಲ್ ಹುಸೇನ್, ಶೇಷಾದ್ರಿ, ಗಾಣಕಲ್ ನಟರಾಜು, ಚೇತನ್‌ಕುಮಾರ್, ಸಿ.ಎನ್. ವೆಂಕಟೇಶ್‌, ನಗರಸಭೆ ಪ್ರಭಾರ ಅಧ್ಯಕ್ಷೆ ಮಂಗಳಾ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ ಇದ್ದರು.

ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಾಥ್ ನೀಡಿದರು.

ಬಿಎಸ್‌ಪಿ: ಬಹುಜನ ಸಮಾಜವಾದಿ ಪಕ್ಷದ ಕಾರ್ಯಕರ್ತರು ನಗರದ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾತನಾಡಿ, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆ ಆಗಿದೆ.  ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್‌ ಸೇನೆ: ಅಂಬೇಡ್ಕರ್ ಸೇನೆ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಿಲಿಂಡರ್‌ ಹಿಡಿದು ಪ್ರತಿಭಟನೆ
ಕುಮಾರಣ್ಣ ಅಭಿಮಾನಿ ಬಳಗದ ಸದಸ್ಯರು ಐಜೂರು ವೃತ್ತದಲ್ಲಿ ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ ನಡೆಸಿದರು.

ತೈಲ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಕೂಡಲೆ ಕೇಂದ್ರ ಸರ್ಕಾರವು ತೈಲ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಜಯಕುಮಾರ್, ಭಾರತಿ ಕ್ರೆಡಿಟ್ ಕೋ.ಆಪರೇಟಿವ್ ಬ್ಯಾಂಕ್ ನಿರ್ದೇಶಕ ಚಂದ್ರಣ್ಣ, ಕುಮಾರಣ್ಣ ಅಭಿಮಾನಿ ಬಳಗದ ಹನುಮಯ್ಯ, ಕುಮಾರ್, ಸಿ.ಎಸ್.ರಾಜು, ಯೋಗೇಶ್ ಕುಮಾರ್, ಶಿವಾಜಿ ರಾವ್ ಇದ್ದರು.

ದೂರ ಉಳಿದ ಜೆಡಿಎಸ್ ಮುಖಂಡರು
ಭಾರತ್ ಬಂದ್ ಕರೆಗೆ ಜೆಡಿಎಸ್ ರಾಜ್ಯ ಘಟಕವು ಬೆಂಬಲ ವ್ಯಕ್ತಪಡಿಸಿತ್ತಾದರೂ ಜಿಲ್ಲೆಯ ಜೆಡಿಎಸ್ ಮುಖಂಡರು ಸೋಮವಾರ ಪ್ರತಿಭಟನೆಗಳಿಂದ ದೂರ ಉಳಿದರು. ಯಾವ ರೀತಿಯಲ್ಲೂ ಖಂಡನೆ ವ್ಯಕ್ತಪಡಿಸಲಿಲ್ಲ.

‘ಡಿಕೆಶಿ ವಿರುದ್ಧ ಪ್ರತೀಕಾರದ ದಾಳಿ’
‘ಸಚಿವ ಡಿ.ಕೆ. ಶಿವಕುಮಾರ್‌ ವಿರುದ್ಧ ಇ.ಡಿ.ಯು ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ ಆಟ. ಈಗಲ್‌ಟನ್ ರೆಸಾರ್ಟಿನಲ್ಲಿ ಗುಜರಾತ್ ಶಾಸಕರು ಇದ್ದಾಗನಿಂದಲೂ ಇದು ಆರಂಭವಾಗಿದೆ’ ಎಂದು ಸಿ.ಎಂ. ಲಿಂಗಪ್ಪ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

‘ಸಾವಿರಾರು ಕೋಟಿ ಲೂಟಿ ಹೊಡೆದ ಜನಾರ್ದನ ರೆಡ್ಡಿ ಆರಾಮವಾಗಿ ಮನೆಯಲ್ಲಿದ್ದಾರೆ. ಅವರಿಗಿಂತ ದೊಡ್ಡ ತಪ್ಪು ಮಾಡಿದ್ದಾರೋ ಶಿವಕುಮಾರ್?’ ಎಂದು ಪ್ರಶ್ನಿಸಿದ ಅವರು ‘ಡಿಕೆಶಿಗೂ ಕಾನೂನು ರಕ್ಷೆ ದೊರೆಯುತ್ತದೆ. ಅವರು ತಪ್ಪು ಮಾಡಿದ್ದರೆ ನ್ಯಾಯಾಲಯ ನಿರ್ಧರಿಸುತ್ತದೆ’ ಎಂದರು.

* ಇಂದು ಭಾರತ್ ಬಂದ್ ಇದೆ ಎಂದು ಗೊತ್ತಿದ್ದರೂ ಸಹ ತಡರಾತ್ರಿ ಮತ್ತೆ ಬೆಲೆ ಹೆಚ್ಚಳ ಮಾಡಿದ್ದಾರೆ. ಇದು ಬಿಜೆಪಿ ಸರ್ಕಾರದ ಸ್ವೇಚ್ಛಾಚಾರದ ವರ್ತನೆ
–ಸಿ.ಎಂ. ಲಿಂಗಪ್ಪ, ವಿಧಾನ ಪರಿಷತ್ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !