ಸೋಮವಾರ, ಮಾರ್ಚ್ 8, 2021
24 °C

‘ಇಷ್ಟು ದಿನ ಅಪ್ಪ ಮಕ್ಕಳು ಎಲ್ಲಿದ್ದರು?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿಯಾಗಿ, ಸಂಸದರಾಗಿ, ಶಾಸಕರಾಗಿ ಅಧಿಕಾರ ನಡೆಸಿದ ಅಪ್ಪ ಮಕ್ಕಳು ಇಂದಿಗೂ ಕ್ಷೇತ್ರದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವುದು ನಾಚಿಕೆಯ ಸಂಗತಿ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ವಿರುದ್ಧ ಹರಿಹಾಯ್ದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ ಎಂದು ಹೇಳುವ ಅಪ್ಪ ಮಕ್ಕಳು ಇಷ್ಟು ದಿನ ಎಲ್ಲಿ ಹೋಗಿದ್ದರು. ಅವರ ಅಧಿಕಾರವಧಿಯಲ್ಲಿ ಚಾಲನೆ ಸಿಕ್ಕ ಯೋಜನೆಗಳು ಇನ್ನೂ ಏಕೆ ಪೂರ್ಣಗೊಳ್ಳಲಿಲ್ಲ. ಇದೀಗ ಚುನಾವಣೆ ಸಂದರ್ಭದಲ್ಲಿ ಕೇವಲ ಸ್ಟಂಟ್‌ ಮಾಡಲು  ಸಚಿವ ಡಿ.ಕೆ.ಶಿವಕುಮಾರ್‌ ಮನೆಗೆ ಭೇಟಿ ನೀಡಿ ಮನವಿ ಸಲ್ಲಿಸುವ ನಾಟಕವಾಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಒಂದು ಕಡೆ ಸರ್ಕಾರವೇ ಸತ್ತು ಹೋಗಿದೆ ಎಂದು ಹೇಳುವ ಅವರು ಇನ್ನೊಂದು ಕಡೆ ಜೀವಂತವಾಗಿರುವ ಸರ್ಕಾ ರದ ಬಳಿ ಮನವಿ ಮಾಡು ತ್ತಾರೆ. ಇದು ಇವರ ಇಬ್ಬಗೆಯ ನೀತಿ ತೋರಿಸುತ್ತದೆ. ಅಲ್ಲದೇ ಯಡಿಯೂರಪ್ಪ ಪದೇ ಪದೇ ಮೈತ್ರಿ ಸರ್ಕಾರವನ್ನು ಬೀಳಿಸುತ್ತೇನೆ ಎನ್ನುತ್ತಿದ್ದಾರೆ. ತಮ್ಮನ್ನು ತಾವು ಮುಖ್ಯಮಂತ್ರಿ ಎಂದು ಘೋಷಿಸಿಕೊಂಡ ಯಡಿಯೂರಪ್ಪ ಅವರಿಗೆ ತಮ್ಮ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಿಲ್ಲ. ಈಗ ಕೆಡವುತ್ತೇವೆ ಎಂದು ಹೇಳುತ್ತಿರುವುದು ಹತಾಶೆ’ ಎಂದು ವ್ಯಂಗ್ಯವಾಡಿದರು.

‘ಜಿಲ್ಲೆಯಲ್ಲಿ ತುಮರಿ ಸೇತುವೆ, ರೈಲ್ವೆ ಯೋಜನೆಗಳು, ಶಿಕಾರಿಪುರ, ಸೊರಬ ಸೇರಿ  ಏತ ನೀರಾವರಿ ಯೋಜನೆಗಳ ಬಗ್ಗೆ ಬಿಜೆಪಿಯವರು ಬೊಗಳೆ ಬಿಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಸಂಸದರಾಗಿ ಅಧಿಕಾರ ನಡೆಸಿದ ಅಪ್ಪಮಕ್ಕಳು ಈವರೆಗೆ ಎಷ್ಟು ಅನುದಾನ ಜಿಲ್ಲೆಗೆ ತಂದಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ’ ಎಂದು ಸವಾಲು ಹಾಕಿದರು. 

  ‘ಜನರನ್ನು ದಿಕ್ಕುತಪ್ಪಿಸುವುದನ್ನು ಬಿಟ್ಟು ಅಭಿವೃದ್ಧಿಯ ಬಗ್ಗೆ ಮಾತನಾಡಲಿ.ಕಡಿಮೆ ಅವಧಿ ತಮ್ಮ ಸೋಲಿಗೆ ಕಾರಣವಾಯಿತು. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಕಾರ್ಯಕರ್ತರು ತಮ್ಮ ಗೆಲುವಿಗೆ ಶ್ರಮಿಸಿದ್ದಾರೆ. ಈ ಸೋಲು ಶಾಶ್ವತವಲ್ಲ. ಚುನಾವಣೆ ಬಂದೇ ಬರುತ್ತದೆ. ಮುಂದಿನ ಗೆಲುವಿಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತೇನೆ’ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ತೀ.ನಾ.ಶ್ರೀನಿವಾಸ್, ಆರ್.ಎಂ.ಮಂಜುನಾಥ ಗೌಡ, ಎಂ.ಶ್ರೀಕಾಂತ್, ಶಾರದಾ ಪೂರ್ಯನಾಯ್ಕ, ನಾಗರಾಜ್ ಕಂಕಾರಿ, ಜಿ.ಡಿ.ಮಂಜುನಾಥ್, ಮಹಮ್ಮದ್‌ ಯೂಸಫ್‌ ಬಯ್ಯಾ, ಸಿದ್ದಪ್ಪ ಇದ್ದರು.

‘ಕಾಮ್‌ಕೀ ಬಾತ್‌ ಹೋಯ್ತು, ರಾಮ್‌ಕೀ ಬಾತ್‌ ಬಂತು’
‘ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರವೇ ರಾಮನ ನೆನಪಾಗುತ್ತದೆ. ಇಲ್ಲಿಯವರೆಗೆ ಕಾಮಕೀ ಬಾತ್‌ ಎನ್ನುತ್ತಿದ್ದವರು ಇದೀಗ ರಾಮ್‌ಕೀ ಬಾತ್‌ ಎನ್ನುತ್ತಿದ್ದಾರೆ.  ತಾವು ಮಾತ್ರವೇ ಹಿಂದೂಗಳು ಎನ್ನುವ ನಾಟಕವಾಡುತ್ತಿದ್ದಾರೆ. ಅವರಿಗಿಂತ ಹೆಚ್ಚಾಗಿ ನಮಗೂ ರಾಮನ ಬಗ್ಗೆ ಗೌರವವಿದೆ. ನಾವು ಕೂಡ ಪ್ರತಿದಿನ ದೇವಸ್ಥಾನಗಳಿಗೆ ಹೋಗುತ್ತೇವೆ. ಆದರೆ ಎಲ್ಲಾ ಸಮುದಾಯಗಳನ್ನು ಯಾರು ಪ್ರೀತಿಸುತ್ತಾರೋ ಅವರೇ ನಿಜವಾದ ಹಿಂದೂಗಳು’ ಎಂದು ಮಧು ಬಂಗಾರಪ್ಪ ತಿಳಿಸಿದರು.

‘ವ್ಯವಸ್ಥೆಯಲ್ಲಿ ತಾವು ಎಂಎಲ್‌ಸಿ ಆಗಿ ಬ್ಯಾಕ್‌ ಡೋರ್‌ ಎಂಟ್ರಿ ನೀಡುವುದಕ್ಕೆ ‌ಇಷ್ಟವಿಲ್ಲ. ಇಂಥ ಜಾಯಮಾನ ತಮ್ಮದಲ್ಲ. ಬಂಗಾರಪ್ಪ ಮಗನಾಗಿ ಚುನಾವಣೆ ಎದುರಿಸಿಯೇ ನಾನು ಮುಂದುವರೆಯುತ್ತೇನೆ’ ಎಂದರು.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.