ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕೊರೊನಾ ಸಮರಕ್ಕೆ ಮೊದಲೇ ಸಿದ್ಧವಾಗಿದ್ದ ‘ರೆಡ್‌ಕ್ರಾಸ್’

ಯುದ್ಧದ ಕಾಲದಲ್ಲಿ ಹುಟ್ಟಿದ್ದ ಸಂಸ್ಥೆ ಈಗ ವೈರಸ್‌ ವಿರುದ್ಧದ ಹೋರಾಟಕ್ಕೂ ಸಾಥ್
Last Updated 9 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯದಲ್ಲಿಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುವ ಮೊದಲೇ ಜಿಲ್ಲೆಯ ರೆಡ್‌ಕ್ರಾಸ್‌ ಅಪಾಯಕಾರಿ ವೈರಸ್ ವಿರುದ್ಧದಹೋರಾಟಕ್ಕೆ ಸಿದ್ಧವಾಗಿತ್ತು. ಆರಂಭದಲ್ಲೇ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸುವಲ್ಲಿ ಶ್ರಮಿಸಿತ್ತು.

ಚೀನಾದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಭಾರಿಸುತ್ತಿರುವಾಗಲೇ ಜಿಲ್ಲೆಯ ರೆಡ್‌ಕ್ರಾಸ್‌ ಸಂಸ್ಥೆಯ ಪದಾಧಿಕಾರಿಗಳು ಸದ್ದಿಲ್ಲದೇ ಶಾಲಾ, ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ವೈರಸ್‌ ಹರಡದಂತೆ ತಡೆಯುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದರು. ಈಗಲೂ ಸಂಸ್ಥೆ ಕೊರೊನಾ ವಿರುದ್ಧ ಜಿಲ್ಲಾಡಳಿತ ಕೈಗೊಂಡಿರುವ ಹೋರಾಟದಲ್ಲಿ ಮಂಜೂಣಿಯಲ್ಲಿದೆ.

ಪ್ರಪಂಚದ ಮಹಾ ಯುದ್ಧದ ಸಮಯದಲ್ಲಿ ಜನ್ಮ ತಾಳಿದ್ದ ಈ ಸ್ವಯಂ ಸೇವಾ ಸಂಸ್ಥೆ ಜಿಲ್ಲೆಯಲ್ಲೂಎರಡು ದಶಕಗಳ ಹಿಂದೆ ಕಾರ್ಯಾರಾಂಭ ಮಾಡಿತ್ತು. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಈ ಸಂಸ್ಥೆಯ ಕಟ್ಟಡ ಆರ್‌ಟಿಒ ಕಚೇರಿ ರಸ್ತೆಯಲ್ಲಿದೆ. ಎಸ್.ಬಂಗಾರಪ್ಪ ಅವರು ತಮ್ಮ ಸಂಸದ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ. ಪ್ರಸ್ತುತ ಎಸ್‌.ಪಿ.ದಿನೇಶ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ, ಅಶ್ವತ್ಥ ನಾರಾಯಣ ಶೆಟ್ಟಿ (ಉಪಾಧ್ಯಕ್ಷ), ಡಾ.ದಿನೇಶ್.ಎಸ್ (ಕಾರ್ಯದರ್ಶಿ), ಡಾ.ಕುಮಾರ್ (ರಾಜ್ಯ ಸಂಯೋಜಕ) ಕಾರ್ಯನಿರ್ವಹಿಸುತ್ತಿದ್ದಾರೆ.

ಚೀನಾದಲ್ಲಿ ವೈರಸ್ ಕಾಣಿಸಿಕೊಂಡ ತಕ್ಷಣ ಜಾಗೃತಿ:ಚೀನಾದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡ ತಕ್ಷಣ ಜಿಲ್ಲೆಯ ಹಲವೆಡೆ ಈ ವೈರಸ್ ಹರಡದಂತೆ ತಡೆಯುವಜಾಗೃತಿ ಅಭಿಯಾನ ಹಮ್ಮಿಕೊಂಡಿತ್ತು. ಗೋಪಾಳದ ಅಂಧರ ವಿಕಾಸ ಶಾಲೆ, ಎನ್‌ಇಎಸ್ ಸೇರಿದಂತೆ ಹಲವು ಶಾಲಾ, ಕಾಲೇಜು, ಕಟ್ಟಡ ಕಾರ್ಮಿಕರು ಸೇರಿದಂತೆ ಕಾರ್ಮಿಕರಿಗೆ ಸ್ಯಾನಿಟೈಸರ್ ಬಳಸುವ ವಿಧಾನ, ಕರವಸ್ತ್ರಗಳನ್ನೇ ಮಾಸ್ಕ್‌ ಆಗಿ ಬಳಸುವುದು, ಮನೆಯಲ್ಲೇ ಮಾಸ್ಕ್‌ ಸಿದ್ಧಮಾಡಿಕೊಳ್ಳುವುದು, ಸಾಮಾಜಿಕ ಅಂತದ ಕಾಪಾಡಿಕೊಳ್ಳುವುದು, ವೈಯಕ್ತಿಕ ಹಾಗೂ ಸಮುದಾಯದ ಸ್ವಚ್ಛತೆ ಕುರಿತು ಗಮನ ಹರಿಸುವುದು, ರೋಗದ ಲಕ್ಷಣಗಳು, ಮುಂಜಾಗ್ರತಾ ಕ್ರಮ, ಕ್ವಾರಂಟೈನ್ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗಿತ್ತು.

ನಿರ್ಬಂಧದ ಅವಧಿಯಲ್ಲಿ ಮಂಚೂಣಿ ಕಾರ್ಯ:ಜಿಲ್ಲೆಯಲ್ಲೂ ಕೊರೊನಾ ನಿರ್ಬಂಧಗಳು ಜಾರಿಯಾದ ನಂತರ ಎಲ್ಲ ಕೆಲಸಗಳಲ್ಲೂ ರೆಡ್‌ಕ್ರಾಸ್‌ ಸಂಸ್ಥೆ ಮಂಚೂಣಿಯಲ್ಲಿ ಕೆಲಸ ಮಾಡುತ್ತಿದೆ. ಆನ್‌ಲೈನ್ ಮೂಲಕ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 120 ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲೇ 53 ಸ್ವಯಂಸೇವಕರಿದ್ದಾರೆ. ಹಸಿದವರಿಗೆ ಆಹಾರ ವಿತರಣೆ, ಅಗತ್ಯವಿರುವ ದುರ್ಬಲರಿಗೆ ಔಷಧ ವಿತರಣೆ, ನಿತ್ಯವೂ ಬೆಳಿಗ್ಗೆ 5.30ರಿಂದ 8ರವರೆಗೆ ಸರ್ಕಾರ ಉಚಿತವಾಗಿ ನೀಡುತ್ತಿರುವ ಹಾಲು ವಿತರಣೆ ಮಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ನೆರವಾಗುತ್ತಿದ್ದಾರೆ. ಎರಡು ವಾಹನಗಳು ನಿತ್ಯವೂ ಜಿಲ್ಲೆಯಲ್ಲಿ 400 ಕಿ.ಮೀ.ಸಂಚರಿಸಿ ಕೊರೊನಾ ಸಮರದಲ್ಲಿ ಜನರು ಹೇಗೆ ನಡೆದುಕೊಳ್ಳಬೇಕು ಎಂಬ ಮಾಹಿತಿ ನೀಡಲಾಗುತ್ತಿದೆ.

ಗುಪ್ತ ಮಾಹಿತಿ ಕಾರ್ಯ:ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಟ್ಟಿರುವ ರೆಡ್‌ಕ್ರಾಸ್ ಸ್ವಯಂಸೇವಕರು ಸುಳ್ಳು ಸುದ್ದಿಗಳನ್ನು ಹರಡುವವರ ಮಾಹಿತಿ ನೀಡುತ್ತಿದ್ದಾರೆ. ಸತ್ಯವನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಇರುವ ಕುರಿತು ಸುಳ್ಳು ವದಂತಿ ಬಂದರೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪತ್ತೆ ಮಾಡುತ್ತಿದ್ದಾರೆ. ಈಚೆಗೆ ಹೈದರಾಬಾದ್ ಮಹಿಳೆಯೊಬ್ಬರು ಶಿವಮೊಗ್ಗದಲ್ಲಿರುವ ವೃದ್ಧ ತಂದೆ ತಾಯಿ ಆರೋಗ್ಯದ ಕಾಳಜಿಗೆ ರೆಡ್‌ಕ್ರಾಸ್ ಸಂಪರ್ಕಿಸಿದ್ದಾರೆ. ತಕ್ಷಣ ಅವರ ಕುಟುಂಬಕ್ಕೆ ನೆರವು ದೊರೆತಿದೆ. ಬೇರೆ ರಾಜ್ಯಗಳಿಂದ ಬಂದ ಕೋರಿಗೆ ಮೇರೆಗೆ ಇಲ್ಲಿರುವ ಆ ರಾಜ್ಯದ ಕಾರ್ಮಿಕರಿಗೆನೆರವಾಗುತ್ತಿದ್ದಾರೆ.

ಶಿವಮೊಗ್ಗದಲ್ಲಿ ಎಂಟು ತಿಂಗಳ ಹಿಂದೆ ಸಂಭವಿಸಿದ್ದ ನೆರೆಯ ಸಮಯದಲ್ಲಿ ಪ್ರತಿನಿತ್ಯ 3 ಸಾವಿರ ಜನರಿಗೆ ಊಟದ ವ್ಯವಸ್ಥೆ, ಮನೆ ಕಳೆದುಕೊಂಡ ಮೂವರೆ ಸಾವಿರ ಜನರಿಗೆ ಅಗತ್ಯ ಸಾಮಗ್ರಿ ನೀಡುವ ಮೂಲಕ ರೆಡ್‌ಕ್ರಾಸ್‌ ಮಾನವೀಯತೆ ಮೆರೆದಿತ್ತು.

*
ಕಷ್ಟದಲ್ಲಿರುವರಿಗೆ ಜೀವದ ಹಂಗು ತೊರೆದು ನೆರವು ನೀಡುವ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದೆ ದುಡಿಯುವ ಎಲ್ಲ ಸ್ವಯಂಸೇವಕರು ಸಮಾಜಕ್ಕೆ ಮಾದರಿ.
-ಡಾ.ದಿನೇಶ್.ಎಸ್.,ಕಾರ್ಯನಿರ್ವಾಹಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT