ಕುಡಿಯುವ ನೀರಿಗೆ ₹1031 ಕೋಟಿ ವೆಚ್ಚ: ಸಚಿವ ಕೆ.ಸಿ.ನಾರಾಯಣಗೌಡ

ಶಿವಮೊಗ್ಗ: ಗ್ರಾಮೀಣರಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ 2.27 ಲಕ್ಷ ಮನೆಗಳಿಗೆ ₹1031 ಕೋಟಿ ವೆಚ್ಚದಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಇಲ್ಲಿನ ಡಿಎಆರ್ ಮೈದಾನದಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಅವರು, ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನೇ ಓದಿ ಹೇಳಿದರು.
ಲೋಕೋಪಯೋಗಿ ಇಲಾಖೆ
ಯಿಂದ ₹104 ಕೋಟಿ ವೆಚ್ಚದಲ್ಲಿ 190 ಕಿ.ಮೀ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದು ಸರ್ಕಾರದ ಧ್ಯೇಯ. ಬಸವ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 7688 ಮನೆಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ ಎಂದು ಹೇಳಿದರು.
ಅಡಿಕೆಗೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ 9794 ರೈತರಿಗೆ ಉಚಿತವಾಗಿ ಔಷಧ ವಿತರಿಸಲಾಗಿದೆ. ಚರ್ಮಗಂಟು ರೋಗ ನಿಯಂತ್ರಣಕ್ಕೆ ಶೇ 93ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ರೋಗದಿಂದ ಮರಣ ಹೊಂದಿದ 329 ರಾಸುಗಳ ಮಾಲೀಕರಿಗೆ ₹63.95 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ 1.55 ಲಕ್ಷ ರೈತರ ಖಾತೆಗೆ ₹476 ಕೋಟಿ ಜಮಾ ಮಾಡಲಾಗಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಸಿಇಒ ಎನ್.ಡಿ.ಪ್ರಕಾಶ್, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹಾಜರಿದ್ದರು.
ಬಾಲಮಂದಿರ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ
ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಶಿಸ್ತಾಗಿ ಹೆಜ್ಜೆ ಇಟ್ಟ ಸರ್ಕಾರಿ ಬಾಲ ಮಂದಿರದ ಮಕ್ಕಳು ಜಿಲ್ಲಾಡಳಿತದಿಂದ ಮೊದಲ ಬಹುಮಾನ ಪಡೆದರೆ, ಅರವಿಂದ ನಗರದ ಸಾಂದೀಪನಿ ಇಂಗ್ಲಿಷ್ ಪ್ರೌಢಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ಪಡೆದರು. ಎನ್‌ಸಿಸಿ ಕೆಡೆಟ್‌ಗಳು ಮೂರನೇ ಬಹುಮಾನ ತಮ್ಮದಾಗಿಸಿಕೊಂಡರು. ವಿಜೇತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಬಹುಮಾನ ವಿತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.