ಮಂಗಳವಾರ, ಮೇ 11, 2021
26 °C
ಕಾಗೋಡು ಚಳವಳಿಯ 70ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಕಾಗೋಡು ತಿಮ್ಮಪ್ಪ

ಚಳವಳಿ ಜನಮಾನಸದಿಂದ ದೂರವಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಗೇಣಿ ರೈತರಿಗೆ ಭೂಮಿಯ ಹಕ್ಕು ಕೊಡಿಸಿದ ಕಾಗೋಡು ಚಳವಳಿಯ ನೆನಪು ಯಾವತ್ತೂ ಜನಮಾನಸದಿಂದ ದೂರಾಗಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ತಾಲ್ಲೂಕಿನ ಕಾಗೋಡು ಗ್ರಾಮದ ಲೋಹಿಯಾ ಸ್ಮಾರಕ ಭವನದಲ್ಲಿ ಕಾಗೋಡು ರೈತ ಚಳವಳಿ ಸಂಸ್ಮರಣಾ ಸಮಿತಿ, ಡಾ.ರಾಮಮನೋಹರ ಲೋಹಿಯಾ ಟ್ರಸ್ಟ್ ಭಾನುವಾರ ಏರ್ಪಡಿಸಿದ್ದ ಕಾಗೋಡು ಚಳವಳಿಯ 70ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಗೋಡು ಹೋರಾಟ ಎಂಬುದು ಬಲಾಢ್ಯರ ಶೋಷಣೆ ಹಾಗೂ ಗುಲಾಮಗಿರಿ ಪ್ರವೃತ್ತಿ ವಿರುದ್ಧ ನಡೆದ ಒಂದು ಐತಿಹಾಸಿಕ ವಿದ್ಯಮಾನವಾಗಿದೆ. ಈ ಹೋರಾಟದಿಂದಲೇ ರೈತರಿಗೆ ಶಕ್ತಿ ಬಂದದ್ದು ಎಂಬುದನ್ನು ಮರೆಯುವಂತಿಲ್ಲ ಎಂದರು.

‘ಎಚ್.ಗಣಪತಿಯಪ್ಪ ಅವರು ಆರಂಭಿಸಿದ ಕಾಗೋಡು ಚಳವಳಿಯ ಆಶಯ ಈಡೇರಿದ್ದು ದೇವರಾಜ ಅರಸು ಅವರು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೊಳಿಸಿದ ಕಾಲಕ್ಕೆ. ಹೀಗಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಶ್ರೇಯಸ್ಸು ಕಾಗೋಡು ಚಳವಳಿಗೆ ಸಲ್ಲುತ್ತದೆ’ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ, ‘ಉಳುವವನೆ ಹೊಲದೊಡೆಯ’ ಎಂಬ ಘೋಷಣೆಯನ್ನು ಅಕ್ಷರಶಃ ಜಾರಿಗೊಳ್ಳಲು ಕಾರಣವಾಗಿದ್ದು ಕಾಗೋಡು ಸತ್ಯಾಗ್ರಹ. ಆದರೆ, ಇಂದಿನ ಸರ್ಕಾರ ಕೃಷಿ ಭೂಮಿಯ ಮಾರಾಟದ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕುವ ಮೂಲಕ ‘ಉಳ್ಳವನೆ ಹೊಲದೊಡೆಯ’ ಎಂಬ ಘೋಷಣೆಯನ್ನು ಸ್ಥಾಪಿಸಲು ಹೊರಟಂತೆ ಕಾಣುತ್ತಿದೆ’ ಎಂದು ಹೇಳಿದರು.

ರೈತ ಮುಖಂಡ ಶಿವಾನಂದ ಕುಗ್ವೆ, ‘ಕಾಗೋಡು ಗ್ರಾಮದಲ್ಲಿ ಅವಿದ್ಯಾವಂತ ಸಮುದಾಯ ನಡೆಸಿದ ಹೋರಾಟ ಇಡೀ ದೇಶದ ಗಮನ ಸೆಳೆದಿದ್ದು ಚಾರಿತ್ರಿಕ ಸಂಗತಿಯಾಗಿದೆ. ಯಾವುದೇ ಸಂದರ್ಭದಲ್ಲೂ ಹೋರಾಟ ಹಿಂಸೆಯ ಹಾದಿ ಹಿಡಿಯಲಿಲ್ಲ ಎಂಬುದು ಗಮನಾರ್ಹ. ಸತ್ಯಾಗ್ರಹಕ್ಕೆ ಕಾರಣರಾದ ಗಣಪತಿಯಪ್ಪ, ಕಣಸೆ ಜಟ್ಟಪ್ಪ ಮೊದಲಾದವರು ಇಂದಿನ ಯುವ ತಲೆಮಾರಿಗೆ ಮಾದರಿಯಾಗಬೇಕು’ ಎಂದರು.

ರೈತ ಸಂಘದ ಪ್ರಮುಖರಾದ ಎನ್.ಡಿ.ವಸಂತಕುಮಾರ್, ‘ಕಾಗೋಡು ಸತ್ಯಾಗ್ರಹ ನಡೆಯದೆ ಇದ್ದರೆ ಇವತ್ತಿಗೂ ಅಸಂಖ್ಯಾತ ರೈತ ಕುಟುಂಬಗಳು ಭೂಮಿಯ ಹಕ್ಕು ಪಡೆಯುತ್ತಿರಲಿಲ್ಲ. ಭೂಮಿಯ ಹಕ್ಕಿನ ವಿಷಯ ಇಂದಿಗೂ ಪ್ರಸ್ತುತವಾಗಿದೆ’ ಎಂದು ಹೇಳಿದರು.

ಸ್ವರಾಜ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಮ್ಜದ್ ಪಾಷಾ, ‘ಕಾಗೋಡು ಚಳವಳಿ ಎಂಬುದು ಸತ್ಯ ಹಾಗೂ ಮಿಥ್ಯಗಳ ನಡುವಿನ ಘರ್ಷಣೆಯಾಗಿದೆ. ಅಂತಿಮವಾಗಿ ಗೆಲುವಾಗಿದ್ದು ಸತ್ಯಕ್ಕೆ. ಅನ್ಯಾಯ, ಅಸಮಾನತೆ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ’ ಎಂದು ಹೇಳಿದರು.

ಕಾಗೋಡು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಕೋಣೆ ಪರಶುರಾಮ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ಪ್ರಮುಖರಾದ ಈಶ್ವರ ನಾಯ್ಕ್ ಕುಗ್ವೆ, ಕನ್ನಪ್ಪ ಕಾಗೋಡು, ಹೊಳಿಯಪ್ಪ, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಮಡಿವಾಳ ಕನ್ನಮ್ಮ, ಗಿರಿಯಾನ್ ಸಾವಿತ್ರಮ್ಮ, ದೊಡ್ಮನೆ ಹಾಲಪ್ಪ ಇದ್ದರು. ದಿನೇಶ್ ಗಿರಿಯಾನ್ ಸ್ವಾಗತಿಸಿದರು. ರಮೇಶ್ ಕೆಳದಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು