ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಅದಾಲತ್‌ನಲ್ಲಿ ಇತ್ಯರ್ಥಗೊಂಡ 31ವರ್ಷದ ಪ್ರಕರಣ

ರಾಜಿಸಂಧಾನದಲ್ಲಿ ಸಂತಸ ಕಂಡ ಪಕ್ಷಗಾರರು
Last Updated 26 ಜೂನ್ 2022, 7:50 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 31 ವರ್ಷಗಳ ಹಳೆಯದಾದ ಸಿವಿಲ್ ಪ್ರಕರಣವೊಂದು ನ್ಯಾಯಾಧೀಶರ, ವಕೀಲರ ಪ್ರಯತ್ನದಿಂದ ಪಕ್ಷಗಾರರ ಒಪ್ಪಿಗೆಯೊಂದಿಗೆ ರಾಜಿಸಂಧಾನದ ಮೂಲಕ ಇತ್ಯರ್ಥಗೊಂಡಿದೆ.

ನಗರವ್ಯಾಪ್ತಿಯ ನೆಹರೂ ನಗರ ಬಡಾವಣೆಯ ಮನೆಯೊಂದರ ಮಾರಾಟಕ್ಕೆ ಸಂಬಂಧಿಸಿದಂತೆ ಜೈನುಲ್ ಅಬಿದಿನ್ ಎಂಬುವವರು ಇದೇ ನಗರದ ಎ.ರಾಡ್ರಿಗಸ್ ಎಂಬುವವರಿಗೆ 1988ನೇ ಸಾಲಿನಲ್ಲಿ ಕ್ರಯ ಒಪ್ಪಂದ ಪತ್ರವೊಂದನ್ನು ಬರೆದುಕೊಟ್ಟಿದ್ದರು. ಒಪ್ಪಂದ ಪತ್ರದ ಪ್ರಕಾರ ಮನೆ ಬಿಟ್ಟುಕೊಡದ ಕಾರಣ ಜೈನುಲ್ ಅಬಿದಿನ್ ವಿರುದ್ಧ ರಾಡ್ರಿಗಸ್ ಅವರು ನಿರ್ದಿಷ್ಟ ಪರಿಹಾರ ಕಾಯ್ದೆಯಡಿ 1991ನೇ ಸಾಲಿನಲ್ಲಿ ಇಲ್ಲಿನ ನ್ಯಾಯಾಲಯದಲ್ಲಿ ದಾವೆಹೂಡಿದ್ದರು.

ಈ ವ್ಯಾಜ್ಯ ತಾಲ್ಲೂಕು, ಜಿಲ್ಲಾ ನ್ಯಾಯಾಲಯದಲ್ಲಿ ನಡೆದು ಹೈಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಹೈಕೋರ್ಟ್‌ನಿಂದ ಮರು ವಿಚಾರಣೆಗೆ ಇಲ್ಲಿನ ನ್ಯಾಯಾಲಯಕ್ಕೆ ಪ್ರಕರಣ ಬಂದಿತ್ತು. ಈ ನಡುವೆ ಜೈನುಲ್ ಅಬಿದಿನ್ ಹಾಗೂ ರಾಡ್ರಿಗಸ್ ಇಬ್ಬರೂ ಮೃತಪಟ್ಟಿದ್ದು, ಅವರಿಬ್ಬರ ವಾರಸುದಾರರು ವ್ಯಾಜ್ಯವನ್ನು ಮುಂದುವರಿಸಿದ್ದರು.

ಈಗ ಅಂತಿಮವಾಗಿ ಅದಾಲತ್‌ನಲ್ಲಿ ರಾಜಿಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ. ಜೈನುಲ್ ಅಬಿದಿನ್ ಅವರ ವಾರಸುದಾರರಿಗೆ ರಾಡ್ರಿಗಸ್ ಅವರ ವಾರಸುದಾರರು ₹ 10 ಲಕ್ಷ ಮೊತ್ತವನ್ನು ನ್ಯಾಯಾಲಯದಲ್ಲಿ ಪಾವತಿಸಿದ್ದು, ಇದಕ್ಕೆ ಪ್ರತಿಯಾಗಿ ಅಬಿದಿನ್ ವಾರಸುದಾರರು ನೆಹರೂ ನಗರದಲ್ಲಿರುವ ಮನೆಯ ಸ್ವಾಧೀನವನ್ನು ರಾಡ್ರಿಗಸ್ ಅವರ ವಾರಸುದಾರರಿಗೆ ಬಿಟ್ಟುಕೊಟ್ಟಿದ್ದಾರೆ.

ನ್ಯಾಯಾಧೀಶರಾದ ರೆಹೆನಾ ಸುಲ್ತಾನಾ, ಉಭಯ ಕಕ್ಷಿಗಾರರ ಪರ ವಕೀಲರಾದ ಕೆ.ಟಿ.ಶೆಟ್ಟಿ, ಟಿ.ಎಸ್.ರಮಣ, ಸಿಬ್ಬಂದಿ ಉದಯ್ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT