ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಬೀದಿಗೆ ತಳ್ಳಲು ವ್ಯವಸ್ಥಿತ ಹುನ್ನಾರ: ಆರ್.ಎಂ. ಮಂಜುನಾಥ ಗೌಡ

Last Updated 27 ನವೆಂಬರ್ 2022, 4:06 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಪಧಾನಿ ನರೇಂದ್ರ ಮೋದಿ ರೈತರಿಗೆ ಉಚಿತ ವಿದ್ಯುತ್‌ ನೀಡಬಾರದು ಎಂದು ತೀರ್ಮಾನಿಸಿದ್ದಾರೆ. ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಬಿಜೆಪಿ ನೇತೃತ್ವದ ಡಬಲ್‌ ಇಂಜಿನ್‌ ಸರ್ಕಾರ ದೇಶಭಕ್ತಿ ಹೆಸರಲ್ಲಿ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ದೂರಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಬಹಿರಂಗ ಪತ್ರ ಬಿಡುಗಡೆ ಮಾಡಿದ ಅವರು, ‘ಮುಖ್ಯಮಂತ್ರಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕೇಂದ್ರ ಸಚಿವರಿಗೆ ಸಾಮಾನ್ಯ ವ್ಯಕ್ತಿಗಳಂತೆ ಮನವಿ ಸಲ್ಲಿಸುತ್ತಿದ್ದಾರೆ. ಚುನಾವಣೆ ನಾಟಕ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ನಿರ್ಣಯಗಳನ್ನು ಕೇಂದ್ರಕ್ಕೆ ಸಲ್ಲಿಸುವ ಮೂಲಕ ಒತ್ತಡ ಹಾಕಲಿ’ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬಿಜೆಪಿಯ 26 ಸಂಸದರಿದ್ದರೂ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ. 2018ರ ವಿಧಾನಸಭೆ, 2019ರ ಲೋಕಸಭಾ ಚುನಾವಣೆಯಲ್ಲಿ ನೀಡಿದ ಅರಣ್ಯ, ಕಂದಾಯ ಪ್ರದೇಶಕ್ಕೆ ಸೇರಿದ್ದ ಬಗರ್‌ಹುಕುಂ ಸಾಗುವಳಿಯ 75 ವರ್ಷದ ಸ್ವಾಧೀನನುಭವವನ್ನು 25 ವರ್ಷಕ್ಕೆ ಇಳಿಸುವ ಭರವಸೆ ಹುಸಿಯಾಗಿದೆ. ಚಕ್ರ, ವರಾಹಿ, ಸಾವೇಹಕ್ಲು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರ ಡಿನೋಟಿಫಿಕೇಷನ್‌ ರದ್ದು ಮಾಡುವ ಮೂಲಕ ಮೋಸ ಮಾಡಲು ಹೊರಟಿದೆ ಎಂದು ದೂರಿದರು.

60 ವರ್ಷಗಳಿಂದ ಮುಳುಗಡೆ ಸಂತ್ರಸ್ತರ ಸಮಸ್ಯೆ ಇತ್ಯರ್ಥವಾಗಿಲ್ಲ. ತಿರಸ್ಕೃತ ರೈತರ ಸಾಗುವಳಿ ಜಮೀನು ಸ್ವಾಧೀನಕ್ಕೆ ಸರ್ಕಾರ 2021 ಜನವರಿ 30ರಂದು ಆದೇಶ ಹೊರಡಿಸಿದೆ. ವಿವಿಧ ಯೋಜನೆಯಡಿ 94ಸಿ, 94ಸಿಸಿ ಹಕ್ಕುಪತ್ರ ಮಂಜೂರಾಗಿದ್ದರೂ ಅಡಮಾನ ಸಾಲ ದೊರೆಯುತ್ತಿಲ್ಲ. ಡಿನೋಟಿಫಿಕೇಶನ್‌ ರದ್ದು ಮಾಡುವಾಗಲೂ ವಿಶೇಷ ಕಾಳಜಿ ವಹಿಸಿ ಶಿವಮೊಗ್ಗದ ಬಿಜೆಪಿ ಪ್ರಭಾವಿಗಳ ಜಮೀನು ಇರುವ ಸರ್ವೆ ನಂಬರ್‌ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಅಡಿಕೆ ಎಲೆಚುಕ್ಕಿ ರೋಗಕ್ಕೆ ಪರಿಹಾರ ಮತ್ತು ಔಷಧ ಕಂಡು ಹಿಡಿಯುವ ನಾಟಕ ನಡೆಯುತ್ತಿದೆ. 30 ವರ್ಷದ ಹಳದಿ ರೋಗಕ್ಕೆ ವಿಜ್ಞಾನಿಗಳು ಔಷಧ ಒದಗಿಸಿಲ್ಲ. ಇಂತಹ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನವೆಂಬರ್‌ 28ರಂದು ಆಯನೂರಿನಿಂದ ಶಿವಮೊಗ್ಗದವರೆಗೆ ಪಾದಯಾತ್ರೆ ಬೃಹತ್‌ ಸಮಾವೇಶ ನಡೆಯಲಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಸದಸ್ಯರಾದ ರಹಮತ್‌ ಉಲ್ಲಾ ಅಸಾದಿ, ಶಬನಮ್‌, ಮಂಜುಳಾ, ಮುಖಂಡರಾದ ಹಾರೋಗೊಳಿಗೆ ಪದ್ಮನಾಭ, ಕಟ್ಟೇಹಕ್ಕಲು ಕಿರಣ್‌, ಬೇಡನಬೈಲು ಯಲ್ಲಪ್ಪ, ಮಟ್ಟಿನಮನೆ ರಾಮಚಂದ್ರ, ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT