ಶನಿವಾರ, ಮೇ 28, 2022
21 °C
ಯುವಕರಿಗೆ ಮಾದರಿಯಾದ ವೀರಾಪುರದ ಪ್ರೀತಮ್

ತ್ಯಾಗರ್ತಿ: ಕಂಪನಿ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಕಂಡ ಯುವಕ

ಪಾವನಾ ನೀಚಡಿ Updated:

ಅಕ್ಷರ ಗಾತ್ರ : | |

Prajavani

ತ್ಯಾಗರ್ತಿ: ಒತ್ತಡದ ಜೀವನದಿಂದ ಕಂಪನಿ ಕೆಲಸ ಬಿಟ್ಟು ಕೃಷಿಯಲ್ಲಿ ನೆಮ್ಮದಿ ಕಂಡಿಕೊಂಡಿದ್ದಾರೆ ಸಮೀಪದ ವೀರಾಪುರದ ಯುವಕ ಪ್ರೀತಮ್. ಸಾವಯವ ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಅವರು ಯುವಕರಿಗೆ ಮಾದರಿಯಾಗಿದ್ದಾರೆ.

ಸಾಗರ ತಾಲ್ಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಾಪುರ ಗ್ರಾಮದ ಮಲ್ಲಿಕಾರ್ಜುನಗೌಡರ ಪುತ್ರ ಪ್ರೀತಮ್‌ ನೆಮ್ಮದಿ ಜೀವನ ಅರಸಿ ಪಟ್ಟಣ ಬಿಟ್ಟು ಹಳ್ಳಿ ಸೇರಿದವರು. ಬದುಕಿಗೆ, ನೆಮ್ಮದಿಗಾಗಿ ಕೃಷಿಯನ್ನು ನೆಚ್ಚಿಕೊಂಡಿರುವ ಅವರು ಸಮಗ್ರ ಕೃಷಿ ಪದ್ಧತಿ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಎಂಬಿಎ ಮುಗಿಸಿ 6 ವರ್ಷಗಳ ಕಾಲ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಅಲ್ಲಿನ ಒತ್ತಡದ ಬದುಕಿಗೆ ವಿದಾಯ ಹೇಳಿ, ನೆಮ್ಮದಿಯ ಬದುಕಿಗೆ ವ್ಯವಸಾಯ ಆಯ್ಕೆಮಾಡಿಕೊಂಡವರು.

8 ಎಕರೆಯ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ, ರಬ್ಬರ್, ಹಲಸು, ಮಾವು, ಕಾಳುಮೆಣಸುಗಳನ್ನು ಹೀಗೆ ಸಮಗ್ರ ಕೃಷಿ ಪದ್ಧತಿ ಅನುಸರಿಸಿದ್ದಾರೆ. ಅವರ ಜಮೀನಿನಲ್ಲೀಗ ಬೆಳೆಗಳು ನಳನಳಿಸುತ್ತಿವೆ.

ತಮ್ಮ ಖುಷ್ಕಿ ಜಮೀನಿನಲ್ಲಿ 2 ಕೊಳವೆಬಾವಿಗಳನ್ನು ಕೊರೆಯಿಸಿ ಪ್ರತಿ ದಿನ ಸರದಿಯಂತೆ ಗಿಡಗಳಿಗೆ ನೀರುಣಿಸುತ್ತಾರೆ. ಸಕಾಲಕ್ಕೆ ಸರಿಯಾಗಿ ಪೌಷ್ಟಿಕ ಗೊಬ್ಬರಗಳನ್ನು ನೀಡಿ ಗಿಡಗಳು ಸಮೃದ್ಧಿಯಾಗಿ ಬೆಳೆಯುವಂತೆ ನೋಡಿಕೊಂಡಿದ್ದಾರೆ. ಅಡಿಕೆ ಸಸಿಗಳನ್ನು ನೆಟ್ಟು ಅದರೊಂದಿಗೆ ಮಿಶ್ರ ಬೆಳೆಯಾಗಿ ಬಾಳೆ ಹಾಗೂ ತೆಂಗಿನ ಗಿಡಗಳನ್ನು ಹಾಕಿದ್ದಾರೆ. ಪ್ರತಿ ಅಡಿಕೆ ಗಿಡಗಳಿಗೂ ಕಾಳುಮೆಣಸಿನ ಬಳ್ಳಿಯನ್ನು ಹಾಕಿದ್ದಾರೆ.

ಬಾಳೆ ಹಾಗೂ ಕಾಳುಮೆಣಸಿನಿಂದ ಬರುವ ಆದಾಯವು ಅಡಿಕೆ ಗಿಡಗಳ ಪಾಲನೆ ಪೋಷಣೆಗೆ ಸಹಕಾರಿಯಾಗಿದೆ. ಅಡಿಕೆ ಗಿಡಗಳಲ್ಲಿ ಫಸಲು ಬರುತ್ತಿದೆ. ಜತಗೆ ರಬ್ಬರ್‌ ಕೂಡ ಹಾಕಿರುವುದರಿಂದ ಉತ್ತಮ ಆದಾಯ ಇದೆ.

‘ನೌಕರಿಯಲ್ಲಿದ್ದಾಗ ಸಿಗುತ್ತಿದ್ದ ವೇತನಕ್ಕಿಂತಲೂ ಹೆಚ್ಚಿನ ಆದಾಯ ಗಳಿಸುತ್ತಿದ್ದೇನೆ. ಸಮಗ್ರ ಕೃಷಿ ಪದ್ಧತಿ ಕೈಹಿಡಿದಿದೆ. ಕೂಲಿಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಿಕೊಂಡು ಜಮೀನಿನಲ್ಲಿ ಪರಿಶ್ರಮದಿಂದ ಕೆಲಸ ಮಾಡಿದರೆ ಆದಾಯದ ಜತೆಗೆ ನೆಮ್ಮದಿ ಜೀವನ ಸಾಗಿಸಬಹುದು’ ಎನ್ನುತ್ತಾರೆ ಪ್ರೀತಮ್‌.

‘ಭೂಮಿ ತಾಯಿಗೆ ಹಣ ಹಾಕಿದರೆ ಮೋಸವಿಲ್ಲ. ಇಂದಲ್ಲ, ನಾಳೆ ಅದು ಬಂದೇ ಬರುತ್ತದೆ. ಅಲ್ಪಾವಧಿಯ ಲಾಭವನ್ನು ನೋಡದೇ ದೀರ್ಘಾವಧಿಯ ಲಾಭದತ್ತ ಎದುರು ನೋಡಿದರೆ ಕೃಷಿಯಲ್ಲಿ ನಷ್ಟವಿಲ್ಲ. ಕೃಷಿಯನ್ನು ನಂಬಿ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದರೆ ಉತ್ತಮ ಆದಾಯ ಸಾಧ್ಯ. ಈ ಅರಿವು ರೈತರಲ್ಲಿ ಇರಬೇಕು’ ಎಂದು ತಮ್ಮ ಕೃಷಿ ಅನುಭವ ಬಿಚ್ಚಿಡುತ್ತಾರೆ ಅವರು.

ನೌಕರಿ ಬಿಟ್ಟು ಕೃಷಿಯಲ್ಲಿ ಆದಾಯ ಕಂಡುಕೊಂಡಿರುವ ಪ್ರೀತಮ್ ಈ ಭಾಗದ ಯುವಕರಿಗೆ ಪ್ರೇರಣೆ.

*
ತಂದೆಯವರು ಮೊದಲಿನಿಂದಲೂ ಕೃಷಿಯನ್ನೆ ಅವಲಂಬಿಸಿದ್ದರು. ಅವ‌ರ ಕೃಷಿ ಕಾಯಕವೇ ನನಗೆ ಪ್ರೇರಣೆ. ಅನುಭವದಿಂದ ವ್ಯವಸ್ಥಿತವಾಗಿ ಕೃಷಿ ಕೈಗೊಂಡರೆ ಲಾಭ ಸಾಧ್ಯ.
-ಪ್ರೀತಮ್‌, ಯುವ ರೈತ, ವೀರಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು