ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪೂಜಾರಿ ಅವರು ಕಚೇರಿ ಅಧೀಕ್ಷಕರಿಗೆ ನಿಂದಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಅಧೀಕ್ಷಕಿ ವಿಕ್ಟೋರಿಯಾ ಮೇರಿ ಅವರಿಗೆ ಸಮಯ ನೀಡದೇ ತ್ವರಿತವಾಗಿ ಮಾಹಿತಿ ಒದಗಿಸಲು ತಾಕೀತು ಮಾಡಿದ್ದಾರೆ. ಎಲ್ಲ ಸಿಬ್ಬಂದಿ ಮುಂದೆ ಮುಜುಗರವಾಗುವ ರೀತಿ ನಿಂದಿಸಿದ್ದಾರೆ. ಬೆದರಿಕೆ ಹಾಕಿದ್ದಾರೆ. ವೀರಭದ್ರಪ್ಪ ಪೂಜಾರಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳಾ ಅಧಿಕಾರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾ ಪಂಚಾಯಿತಿ ಆಂತರಿಕ ಮಹಿಳಾ ದೂರು ಸಮಿತಿ ಹಾಗೂ ಉಪ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ನೌಕರರಾದ ಶಿವಮ್ಮ, ಶೈಲಜಾ, ಭಾರತಿ, ಸುಪ್ರಿಯಾ, ದೇವಮ್ಮ, ಮೀನಾಕ್ಷಿ, ಶೋಭಾ, ಸುಮಾ, ಪದ್ಮಾವತಿ, ಮಂಜುಳಾ, ನಾಗರತ್ನಾ, ಸಂಧ್ಯಾ ಮತ್ತಿತರರು ಮನವಿ ಸಲ್ಲಿಸಿದರು.