ಮಂಗಳವಾರ, ಜನವರಿ 26, 2021
19 °C

ಖುಲಾಸೆಗೊಂಡಿದ್ದ ಆರೋಪಿಗೆ ಹೈಕೋರ್ಟ್‌ನಿಂದ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ತಾಲ್ಲೂಕಿನ ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೋಡಿ ಗ್ರಾಮದಲ್ಲಿ 2012ನೇ ಸಾಲಿನಲ್ಲಿ ನಡೆದಿದ್ದ 70 ವರ್ಷದ ವೃದ್ಧರೊಬ್ಬರ ಕೊಲೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದ ಆರೋಪಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೇರಳದ ಪಾಲಕಾಡು ಜಿಲ್ಲೆಯ ಶಿಜು ಕುರಿಯನ್ ಕೆರೋಡಿ ಗ್ರಾಮದಲ್ಲಿ ಜೋಸ್ ಫಾಕನ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದ. ಫಾಕನ್ ಅವರ ಮಕ್ಕಳು ವಿದೇಶದಲ್ಲಿದ್ದು, ಅವರು ಒಬ್ಬರೇ ಇಲ್ಲಿ ನೆಲೆಸಿದ್ದರು.

ಫಾಕನ್ ಅವರ ಶವ ತೋಟದ ಗೊಬ್ಬರದ ಗುಂಡಿಯಲ್ಲಿ ಪತ್ತೆಯಾಗಿತ್ತು. ಕೆಲಸಗಾರ ಶಿಜು ಕುರಿಯನ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಈತನೇ ಫಾಕನ್ ಅವರನ್ನು ಹಣದ ಆಸೆಗಾಗಿ ಕೊಲೆ ಮಾಡಿ ಗೊಬ್ಬರದ ಗುಂಡಿಯಲ್ಲಿ ಹೂತಿಟ್ಟಿದ್ದ ವಿಷಯ ಬೆಳಕಿಗೆ ಬಂದಿತ್ತು.

ಅಂದಿನ ಡಿವೈಎಸ್‌ಪಿ ಡಾ. ಶರಣಪ್ಪ ನೇತೃತ್ವದ ತಂಡ ತನಿಖೆ ನಡೆಸಿ ಶಿಜು ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಯನ್ನು ಖುಲಾಸೆ ಮಾಡಿತ್ತು.

ಸರ್ಕಾರದ ಪರವಾಗಿ ಪ್ರಕರಣ ನಡೆಸಿದ ಸರ್ಕಾರಿ ಅಭಿಯೋಜಕ ವಿ.ಜಿ. ಯಳಗೇರಿ ಈ ಪ್ರಕರಣದ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಿದ್ದರು. ಈ ಪ್ರಕಾರ ಅಭಿಯೋಜಕ ಇಲಾಖೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಶಿಜು ಕುರಿಯನ್‌ಗೆ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ. ಕೇರಳದ ಪಾಲಕ್ಕಾಡ್‌ನಲ್ಲಿದ್ದ ಶಿಜು ಕುರಿಯನ್‌ನನ್ನು ಬಂಧಿಸಿರುವ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು