ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಗಳಿಂದ ವಿಮುಕ್ತರಾಗಬೇಡಿ: ಸಿದ್ಧಲಿಂಗ ಸ್ವಾಮೀಜಿ

ಶರಣ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ಧಲಿಂಗ ಸ್ವಾಮೀಜಿ ಆಶಯ
Last Updated 24 ನವೆಂಬರ್ 2022, 5:11 IST
ಅಕ್ಷರ ಗಾತ್ರ

ಆನಂದಪುರ: ‘ಜಗತ್ತಿನ 21 ನಾಗರಿಕತೆಗಳಲ್ಲಿ 19 ನಾಗರಿಕತೆಗಳು ಅವನತಿ ಹೊಂದಿರುವುದು ಬಾಹ್ಯ ಆಕ್ರಮಣದಿಂದಲ್ಲ, ಬದಲಾಗಿ ಆಂತರಿಕ ಮೌಲ್ಯಗಳ ಕುಸಿತದಿಂದಾಗಿ. ಆದ್ದರಿಂದ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಶರಣ ಸಾಹಿತ್ಯ ಸಮ್ಮೇಳನ ಹಾಗೂ ಶಿವಾನುಭವಗೋಷ್ಠಿಯಿಂದ ಮಾತ್ರ ಸಾಧ್ಯ’ ಎಂದು ಗೋಣಿಬೀಡು ಶಿವಯೋಗಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಆನಂದಪುರ ಸಮೀಪದ ಮುರುಘಾಮಠದಲ್ಲಿ ಬುಧವಾರ ನಡೆದ ಶರಣ ಸಾಹಿತ್ಯ ಸಮ್ಮೇಳನ, 560ನೇ ಮಾಸಿಕ ಶಿವಾನುಭವ ಗೋಷ್ಠಿ, ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶರಣರ ಹಾಗೂ ಜ್ಞಾನಿಗಳ ಚಿಂತನೆಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯ. ಜನನದಿಂದ ಮರಣದ ಆಚೆಗೆ ಚಿಂತನೆ ಮಾಡುವವನು ನಿಜವಾದ ಶಿವಾನುಭವಿ ಆಗುತ್ತಾನೆ. ಸಮಾಜದಲ್ಲಿ ಮಕ್ಕಳು ತಂದೆ– ತಾಯಂದಿರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಮನುಷ್ಯನಿಗೆ ಆಚಾರ ವಿಚಾರಗಳು, ಮೌಲ್ಯಗಳು ಮುಖ್ಯವಾಗಿವೆ. ಆದರೆ ಮೌಲ್ಯಗಳಿಂದ ನಾವು ವಿಮುಕ್ತರಾಗುತ್ತಿದ್ದೇವೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದು ನುಡಿದರು.

‘ಜನರಲ್ಲಿರುವ ಅಜ್ಞಾನಗಳನ್ನು ಹೋಗಲಾಡಿಸಿ, ಸುಜ್ಞಾನ ಬೆಳಗಲಿ ಎಂಬ ಸದುದ್ದೇಶದಿಂದ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶರಣ ಸಾಹಿತ್ಯ ಅಗಾಧವಾದ ಜ್ಞಾನ ಭಂಡಾರವನ್ನು ಹೊಂದಿದ್ದು, ಮೇಲು ಕೀಳು ಎಂಬುದು ಕಾಣದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತದೆ’ ಎಂದು ತಾಳಗುಪ್ಪ ಮಠದ ಸಿದ್ಧವೀರ ಸ್ವಾಮೀಜಿ ಹೇಳಿದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ, ‘ನಮ್ಮ ಜಡ್ಡುಗಟ್ಟಿದ ಮನಸ್ಸುಗಳಿಗೆ ಹೊಸ ಚೈತನ್ಯ ತುಂಬಲು ಶರಣ ಸಾಹಿತ್ಯ ಸಮ್ಮೇಳನಗಳು ಅತ್ಯಮೂಲ್ಯವಾಗಿವೆ. ಕೆಲವೆಡೆ ಹಣ ನೀಡಿ ಭಾಷಣ ಕೇಳುವ ಪರಿಸ್ಥಿತಿ ಇದೆ. ಆದರೆ, ಶರಣ ಸಾಹಿತ್ಯ ಪರಂಪರೆಯಲ್ಲಿ ಅದ್ಯಾತ್ಮ ವಿಚಾರಗಳನ್ನು ಉಚಿತವಾಗಿ ಪ್ರಚುರ ಪಡಿಸಲಾಗುತ್ತದೆ. ಭಕ್ತರ ಬದುಕು ಹಸನಾಗಬೇಕು ಎನ್ನುವ ಉದ್ದೇಶದಿಂದ ಭಕ್ತರ ಸಹಕಾರದೊಂದಿಗೆ ಇಂತಹ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿರುವುದು ಶರಣ ಪರಂಪರೆಯ ಹೆಗ್ಗಳಿಕೆ’ ಎಂದು ಹೇಳಿದರು.

ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗುತ್ತಲ ಮಠದ ಪ್ರಭು ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಚೌಕಿಮಠದ ನೀಲಕಂಠ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ರುದ್ರಮುನಿ ಶಿವಚಾರ್ಯ ಸ್ವಾಮೀಜಿ, ದೀಪೋತ್ಸವ ಸಮಿತಿ ಅಧ್ಯಕ್ಷ ಬೇಸೂರು ಇಂದೂಧರ ಗೌಡ, ಕಾರ್ಯದರ್ಶಿ ಕೆ.ಆರ್.ರಾಜು, ಹಾಜಿರಾಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT