ಶನಿವಾರ, ಜುಲೈ 31, 2021
24 °C
ಅಧ್ಯಕ್ಷರಾಗಿ ಜೆಡಿಎಸ್‌ ಗುಂಪಿನ ಸದಸ್ಯ ದುಗ್ಗಪ್ಪಗೌಡ ಪುನರಾಯ್ಕೆ, ಕುಂಸಿ ಬಾಬಣ್ಣ ಉಪಾಧ್ಯಕ್ಷ

ಎಪಿಎಂಸಿ ಚುನಾವಣೆ: ಬಹುಮತವಿದ್ದರೂ ಬಿಜೆಪಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ದುಗ್ಗಪ್ಪಗೌಡ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕುಂಸಿ ಬಾಬಣ್ಣ ಗೆಲುವು ಸಾಧಿಸಿದರು.

17 ಸದಸ್ಯ ಬಲದ ಎಪಿಎಂಸಿಯಲ್ಲಿ ಮೊದಲ ಅವಧಿಯಲ್ಲಿ ಬಿಜೆಪಿಯ ಜ್ಯೋತಿ ಪ್ರಕಾಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್, ಜೆಡಿಎಸ್‌ ಅಧಿಕಾರ ಹಿಡಿದಿತ್ತು. ಎರಡನೇ ಅವಧಿಗೆ ದುಗ್ಗಪ್ಪ ಗೌಡ ಅಧ್ಯಕ್ಷರಾದರು. ಮೂರನೇ ಅವಧಿಯ ಚುನಾವಣೆ ಬುಧವಾರ ನಿಗದಿಯಾಗಿತ್ತು. ಎಪಿಎಂಸಿಯಲ್ಲಿ ಜೆಡಿಎಸ್‌, ಕಾಂಗ್ರೆಸ್ ಗುಂಪಿನ 9 ಸದಸ್ಯರು, ಬಿಜೆಪಿ ಗುಂಪಿನ 8 ಸದಸ್ಯರು ಇದ್ದರು. ಈ ಮಧ್ಯೆ ತ್ಯಾಜವಳ್ಳಿಯ ಟಿ.ಬಿ.ಜಗದೀಶ್ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ ಕಾರಣ ಬಿಜೆಪಿ ಗುಂಪಿನ ಬಲ ವೃದ್ಧಿಸಿತ್ತು. ಹಾಗಾಗಿ, ಸುಲಭವಾಗಿ ಬಿಜೆಪಿ ಗೆಲುವು ಸಾಧಿಸುವ ನಿರೀಕ್ಷೆ ಇತ್ತು.

ಉಲ್ಟಾ ಹೊಡೆದ ಒಂದು ಮತ: 

ಬಿಜೆಪಿ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಟಿ.ಬಿ.ಜಗದೀಶ್‌ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿತ್ತು. ವಿಜಯೋತ್ಸವಕ್ಕೆ ಪಕ್ಷದ ಕಾರ್ಯಕರ್ತರೂ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಬಿಜೆಪಿ ಗುಂಪಿನ ಒಬ್ಬರು ಸದಸ್ಯರು ವಿರೋಧಿ ಗುಂಪಿಗೆ ಮತ ಹಾಕಿರುವುದು ಬಹಿರಂಗವಾಯಿತು. 9 ಮತಗಳನ್ನು ಪಡೆದ ದುಗ್ಗಪ್ಪ ಗೌಡ, ಕುಂಸಿ ಬಾಬು ಅವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು. ಬಿಜೆಪಿ ಮುಖಂಡರು ತೀವ್ರ ಮುಖಭಂಗ ಅನುಭವಿಸಿದರು.

ಆಣೆ–ಪ್ರಮಾಣದ ಪ್ರಸಂಗ:

ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಸದಸ್ಯರಲ್ಲಿ ಕೈಕೊಟ್ಟವರ ಕುರಿತು ಶೋಧನಾ ಕಾರ್ಯ ನಡೆಯಿತು. ಗುಪ್ತ ಮತದಾನವಾದ ಕಾರಣ ಪತ್ತೆಕಾರ್ಯ ಕಷ್ಟವಾಯಿತು. ಕೊನೆಗೆ ದೇವರ ಸನ್ನಿದಾನಕ್ಕೆ ತೆರಳಿ 9 ಸದಸ್ಯರಿಂದಲೂ ಆಣೆ, ಪ್ರಮಾಣ ಮಾಡಿಸಲು ನಿರ್ಧರಿಸಿದರು. ಪಕ್ಷದ ಕಾರ್ಯಕರ್ತರಲ್ಲೂ ನಿರಾಸೆ ಕಂಡುಬಂತು.

ಜೆಡಿಎಸ್‌ ವಿಜಯೋತ್ಸವ: ದುಗ್ಗಪ್ಪ ಗೌಡ ಅವರು ಗೆಲುವು ಸಾಧಿಸುತ್ತಿದಂತೆ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂವಿನ ಹಾರ ಹಾಕಿ ಹೊತ್ತು ಕುಣಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು