ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ರ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಮಹಿಳೆಯರಿಗೆ ಮಾತ್ರ ಅವಕಾಶ: ಎ.ವೈ.ಉಪ್ಪಿನ್

Published 26 ಆಗಸ್ಟ್ 2023, 16:00 IST
Last Updated 26 ಆಗಸ್ಟ್ 2023, 16:00 IST
ಅಕ್ಷರ ಗಾತ್ರ

ಶಿವಮೊಗ್ಗ: ‘ದೆಹಲಿಯಲ್ಲಿ ನಡೆಯುವ 2024ರ ಗಣರಾಜ್ಯೋತ್ಸವ (ಆರ್‌ಡಿ) ಪರೆಡ್‌ನಲ್ಲಿ ಮಹಿಳೆಯರಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಬೆಂಗಳೂರು ಪ್ರಾಂತೀಯ ರಾಷ್ಟ್ರೀಯ ಯೋಜನೆ ನಿರ್ದೇಶನಾಲಯ ನಿರ್ದೇಶಕ ಎ.ವೈ.ಉಪ್ಪಿನ್ ಹೇಳಿದರು.

ಇಲ್ಲಿನ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ (ಎಟಿಎನ್ ಸಿಸಿ) ಕಾಲೇಜು ಆವರಣದಲ್ಲಿ ಶನಿವಾರ ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ಆಯೋಜಿಸಿದ್ದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ‘ಅಂತರ ಕಾಲೇಜು ಶಿಬಿರ’ದ ಸಮರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

‘ರಾಜ್ಯದಾದ್ಯಂದ ಪ್ರತಿವರ್ಷ ವಿಶ್ವವಿದ್ಯಾಲಯ ಮಟ್ಟದಲ್ಲಿ ಎನ್‌ಸಿಸಿ ಹಾಗೂ ಎನ್ಎಸ್ಎಸ್ ಶಿಬಿರದ ಮೂಲಕ ಶೇ 50ರಷ್ಟು ಮಾತ್ರ ಮಹಿಳೆಯರಿಗೆ ಗಣರಾಜ್ಯೋತ್ಸವ ಪರೆಡ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, 2024ರಲ್ಲಿ ಶೇ 100ರಷ್ಟು ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗುವುದು. ಇದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ದಿನಗಳಲ್ಲಿ ಹಳೆಯ ಮಾದರಿಯಲ್ಲಯೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮಹಿಳಾ ಸಬಲೀಕರಣದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದರು.

‘ಭವಿಷ್ಯದಲ್ಲಿ ಸಂಶೋಧನಾ ವಿಭಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಎನ್ಎಸ್ಎಸ್ ಸ್ವಯಂ ಸೇವಕರನ್ನು ಜಿಲ್ಲೆಯ ನಿರುದ್ಯೋಗಿ ಯುವಕ–ಯುವತಿಯರ ಮಾಹಿತಿ ಕಲೆ ಹಾಕಲು ಬಳಸಿಕೊಳ್ಳಲಾಗುವುದು’ ಎಂದರು.

‘ಮನುಷ್ಯ ಎಲ್ಲ ರಂಗದಲ್ಲಿಯೂ ಮುಂದೆ ಸಾಗುತ್ತಿದ್ದಾನೆ. ಹಕ್ಕಿಯಂತೆ ಹಾರಬಲ್ಲ, ನೀರಿನಲ್ಲಿ ಈಜಬಲ್ಲ. ಆದರೆ ಮಾನವೀಯತೆ ಗುಣ ಬೆಳೆಸಿಕೊಂಡು ಮನುಷ್ಯನಾಗಿ ಉಳಿಯುವುದನ್ನು ಮರೆತಿದ್ದಾನೆ. ಈ ಶಿಬಿರದಲ್ಲಿ ಕಲಿತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಮು‌ಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಆಗಬೇಕು’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹಕಾರ್ಯದರ್ಶಿ ಪಿ.ನಾರಾಯಣ ಅವರು ಹೇಳಿದರು.

‘ಸಮಾಜಕ್ಕೆ ಸರಳ ಸಜ್ಜನಿಕೆಯ ರಾಜಕಾರಣಿಗಳ ಅವಶ್ಯಕತೆ ಇದೆ. ಆದ್ದರಿಂದ ಎನ್ಎಸ್ಎಸ್ ಸ್ವಯಂ ಸೇವಕರು ಈ ರೀತಿಯ ಶಿಬಿರಗಳ ಪ್ರಯೋಜನ ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಈ ಶಿಬಿರದಲ್ಲಿ ಪಡೆದುಕೊಂಡ ಜ್ಞಾನ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಿ, ಸಮಾಜದಲ್ಲಿ ಅರಿವು ಮೂಡಿಸಿ’ ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾ ಅಧಿಕಾರಿ ಪರಿಸರ ನಾಗರಾಜ್ ಅವರು ಹೇಳಿದರು.

ಎಟಿಎನ್‌ಸಿಸಿ ಕಾಲೇಜು ಪಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ, ಪ್ರೊ.ಎಸ್.ಜಗದೀಶ್, ಪ್ರೊ.ಕೆ.ಎಂ.ನಾಗರಾಜ, ಎನ್.ಮಂಜುನಾಥ್, ಮಲ್ಲಿಕಾರ್ಜುನ, ಹರ್ಷ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT