ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡು, ನುಡಿಯ ಜಾಗೃತಿ ಅಗತ್ಯ: ಬಿಎಸ್‌ವೈ

ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನ ಕನ್ನಡ ಭವನಕ್ಕೆ ಶಂಕುಸ್ಥಾಪನಾ ಸಮಾರಂಭ
Last Updated 27 ಜನವರಿ 2023, 5:37 IST
ಅಕ್ಷರ ಗಾತ್ರ

ಶಿಕಾರಿಪುರ: ಕನ್ನಡ ನಾಡು ನುಡಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಕನ್ನಡ ಭಾಷೆ ಬೆಳೆಸಬೇಕು ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು.

ಪಟ್ಟಣದ ಶಿಶುವಿಹಾರ ರಸ್ತೆಯ ಸಾಂಸ್ಕೃತಿಕ ಭವನ ಹಿಂಭಾಗದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸುತ್ತಿದೆ. ಸ್ಥಳೀಯ ಸಾಹಿತ್ಯ ಹೆಚ್ಚು ಬೆಳೆಯಬೇಕು. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಮಹತ್ವ ನೀಡಬೇಕು. ವಿವಿಧ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಗೆ ತಕ್ಕ ಸಾಹಿತ್ಯವಿದ್ದು, ಸಾಹಿತ್ಯ ಬೆಳೆಸಲು ನಾವು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

‘2008ರಿಂದ ಕನ್ನಡ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆತಿದ್ದು, ಇಲ್ಲಿಯವರೆಗೆ ಕೇಂದ್ರ ಸರ್ಕಾರ
₹ 13 ಕೋಟಿ ಅನುದಾನ ನೀಡಿದೆ. ಗಡಿನಾಡಿನ ಶಿಕ್ಷಣ, ಆರೋಗ್ಯ ಹಾಗೂ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 100 ಕೋಟಿ ಅನುದಾನ ನೀಡಿದೆ. ಅನುದಾನ ಸದುಪಯೋಗ ಮಾಡಿಕೊಂಡು ಕನ್ನಡ ಭಾಷೆ ಬೆಳೆಸಲು ಶ್ರಮ ಹಾಕೋಣ’ ಎಂದರು.

‘ಶಿಕಾರಿಪುರ ತಾಲ್ಲೂಕು ಶರಣ ಶರಣೆಯರ ನೆಲ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪ್ರಯತ್ನದಿಂದ ಸಾಹಿತ್ಯ ಭವನ ಶಂಕುಸ್ಥಾಪನೆ ಆಗಿದ್ದು, ಶೀಘ್ರ ಭವನ ನಿರ್ಮಾಣವಾಗಬೇಕು. ಶಿವಮೊಗ್ಗದ ಸಾಹಿತ್ಯ ಗ್ರಾಮದ ಯೋಜನೆ ಪೂರ್ಣವಾಗಲು ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಸಹಕಾರ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮನವಿ ಮಾಡಿದರು.

‘ಪಟ್ಟಣದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆ ನಡೆಸಲು ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಬೇಕು ಎಂಬ ಆಜೀವ ಸದಸ್ಯರ ಕನಸು ನನಸಾಗುವ ಸಂದರ್ಭ ಬಂದಿದೆ. ಈ ಸಾಹಿತ್ಯ ಭವನ ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡಿದ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಅನುದಾನ ನೀಡಲು ಸಹಕರಿಸಿದ ಸಂಸದ ರಾಘವೇಂದ್ರ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್. ರಘು ಹೇಳಿದರು.

ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಂಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಉಗ್ರಾಣ ನಿಗಮದ ಅಧ್ಯಕ್ಷ ಎಚ್.ಟಿ. ಬಳಿಗಾರ್, ಕಾಡಾ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ, ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಅಗಡಿ ಅಶೋಕ್, ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುನಾಥ್ ಸಿಂಗ್, ಸದಸ್ಯ ಟಿ.ಎಸ್. ಮೋಹನ್,
ಗುರುರಾಜ್ ರಾವ್ ಜಗತಾಪ್, ಎಪಿಎಂಸಿ ಸದಸ್ಯ ಎ.ಬಿ. ಸುಧೀರ್, ವಾಗೀಶಸ್ವಾಮಿ, ಜಿಲ್ಲಾ ಕಸಾಪ ಪದಾಧಿಕಾರಿಗಳು, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT