ಶಿವಮೊಗ್ಗ: ‘ನಮಗೆ ಗೊತ್ತಿಲ್ಲದಂತೆ ಪ್ರಕೃತಿಗೆ ವಿಷಪ್ರಾಶನ ಮಾಡಿಸುತ್ತಿದ್ದೇವೆ. ಅದರ ಪರಿಣಾಮ ಕೂಡ ಅನುಭವಿಸುತ್ತೇವೆ. ಪರಿಸರ ರಕ್ಷಣೆ ಬರೀ ಸಂಘ– ಸಂಸ್ಥೆಗಳ ಹೊಣೆ ಮಾತ್ರ ಅಲ್ಲ. ನಮ್ಮೆಲ್ಲರ ಹೊಣೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ನಗರದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಸಾಗರ ಯೂತ್ ಫೋರ್ಸ್ ಅಸೋಸಿಯೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಸ್ಯೋದ್ಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಪರಿಸರ ನಾವೇ ರಕ್ಷಿಸಬೇಕು. ಸಮಾಜದಲ್ಲಿ ಹೊಣೆಗಾರಿಕೆ ಪ್ರಜ್ಞೆಯ ಕೊರತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಅಥವಾ ಮಹಾತ್ಮ ಗಾಂಧೀಜಿ ಅವರ ಸ್ವಚ್ಛತಾ ಆಂದೋಲನದ ಬಗ್ಗೆ ಜನ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದರು.
‘ಶಿವಮೊಗ್ಗದಲ್ಲಿ ಹಲವು ಪರಿಸರ ಸಂಘಟನೆಗಳಿವೆ. ಜಿಲ್ಲಾ ವಾಣಿಜ್ಯ ಸಂಘದ ಸದಸ್ಯರು ಒಂದೊಂದು ಕುಂಡಗಳ ಕೊಂಡು ತಮ್ಮ ಅಂಗಡಿಗಳ ಮುಂದೆ ಇಟ್ಟರೆ ನಗರದ ಇತಿಹಾಸವೇ ಬದಲಾಗುತ್ತದೆ. ಎಲ್ಲರೂ ಇದಕ್ಕೆ ಕೈಜೋಡಿಸೋಣ’ ಎಂದು ಉದ್ಯಮಿ ಜ್ಯೋತಿ ಪ್ರಕಾಶ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ‘ಪರಿಸರ ಸಂರಕ್ಷಣೆ ಬಗ್ಗೆ ಅನೇಕರು ಮಾತಾಡುತ್ತಾರೆ. ಆದರೆ, ಅದನ್ನು ಅನುಷ್ಠಾನ ಮಾಡುವವರು ಕಡಿಮೆ. ವಾಣಿಜ್ಯ ಕೈಗಾರಿಕಾ ಸಂಘ ನಗರದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಕೈಜೋಡಿಸುತ್ತದೆ’ ಎಂದರು.
ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್ ರವಿ ಪಾಟೀಲ್ ಮಾತನಾಡಿ, ‘ಮಲೆನಾಡು ಈಗ ತಂಪಾಗಿಲ್ಲ. 42 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದೆ. ಪರಿಸರ ನಾಶದಿಂದ ಉಷ್ಣತೆ ಜಾಸ್ತಿಯಾಗಿದೆ. ಹೀಗಾಗಿ ಸಸ್ಯೋದ್ಯಾನ ಅಭಿಯಾನದ ಅವಶ್ಯಕತೆ ಇದೆ’ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷೆ ಎಚ್.ಎಸ್.ಪುಷ್ಪಲತಾ, ವಿನುತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ನೆಹರೂ ರಸ್ತೆಯ ವರ್ತಕರ ಸಂಘದ ಅಧ್ಯಕ್ಷ ಧನಲಕ್ಷ್ಮಿ ಗಿರೀಶ್, ನೆಹರೂ ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ವಸಂತ್ ಹೋಬಳಿದಾರ್ ಇದ್ದರು.