ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಗೆ ವಿರುದ್ಧವಾದ ನಡೆ ಸಲ್ಲ: ಬಸವ ಮರುಳಸಿದ್ಧ ಸ್ವಾಮೀಜಿ ಕಳವಳ

ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಕಳವಳ
Last Updated 27 ನವೆಂಬರ್ 2021, 7:26 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಾಣಿ, ಪಕ್ಷಿಗಳಲ್ಲಿ ಇಲ್ಲದ ಕೆಟ್ಟಗುಣಗಳು, ಅತಿಯಾಸೆ ಮನುಷ್ಯನಲ್ಲಿವೆ. ಪ್ರಕೃತಿಗೆ ವಿರುದ್ಧವಾದ ಇಂತಹ ನಡೆಯ ಪರಿಣಾಮ ಪರಿಸರ ನಾಶವಾಗುತ್ತಿದೆ ಎಂದು ಬಸವ ಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಬಸವನಗುಡಿಯ ಆರ್‌.ಎಸ್‌. ಹಾಲಸ್ವಾಮಿ–ಇ. ಪ್ರೇಮಾ ಅವರವ ಮನೆ ‘ಶ್ರೀನಿಧಿ’ಯಲ್ಲಿ ಬಸವ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ಚಿಂತನ ಕಾರ್ತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ, ಮನುಷ್ಯರ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಪ್ರಾಣಿ–ಪಕ್ಷಿಗಳೂ ಮನುಷ್ಯನನ್ನು ಕಂಡರೆ ಹೆದರುತ್ತಿವೆ. ಅಷ್ಟೊಂದು ಕೆಟ್ಟ ಗುಣಗಳನ್ನು ಮನುಷ್ಯನಲ್ಲಿ ಕಾಣತ್ತಿದ್ದೇವೆ. ಪರಿಸರವನ್ನೇ ನಾಶ ಮಾಡಿ ಬೀಗುತ್ತಿದ್ದೇವೆ. ಆಸೆಯೇ ಇದಕ್ಕೆಲ್ಲ ಮೂಲ ಕಾರಣ ಎಂದರು.

‘ಆಸೆಗೆ ಹಿರಿಯರು, ಕಿರಿಯರು ಎನ್ನುವ ಭೇದವಿಲ್ಲ. ವಯಸ್ಸಿನಲ್ಲಿ ಹಿರಿತನ ಅಳೆಯಬಾರದು. ಆಸೆ ಬಿಟ್ಟವರೇ ಹಿರಿಯರು. ಆಸೆ ಇಟ್ಟುಕೊಂಡವರು ಎಲ್ಲರಿಗಿಂತ ಕಿರಿಯರು. ಒಂದು ಸಣ್ಣ ಇರುವೆ ಪ್ರಕೃತಿಗೆ ಪೂರಕವಾಗಿ ಬದುಕುತ್ತದೆ. ಅದು ಎಲ್ಲರಿಗಿಂತ ಹಿರಿದು.ಆಸೆ ಇಲ್ಲದೆ ಬದುಕುವ ಅದು ಅತ್ಯಂತ ಉನ್ನತ ಜೀವಿ. ಇತ್ತ ಜನರು ಪರಿಸರದ ಮೇಲೆ ಅತ್ಯಾಚಾರ, ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಕ್ಷಣದ ಸುಖ, ಸಂತೋಷ ಮರೆತು ಪ್ರಾಣಿ, ಪಕ್ಷಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದೇವೆ’ ಎಂದು ತಿಳಿಸಿದರು.

ಶರಣರ ವಚನಗಳಲ್ಲಿ ಪರಿಸರ ಕಾಳಜಿ ಇಲ್ಲ ಎಂಬ ಮಾತುಗಳಿವೆ. ಆದರೆ, ಅಂದು ಪರಿಸರ ಇಂದಿನಷ್ಟು ನಾಶವಾಗಿರಲಿಲ್ಲ. ಅಕ್ಕಮಹಾದೇವಿ ಪರಿಸರದಲ್ಲೇ ದೇವರನ್ನು ಕಂಡರು. ದೇವರನ್ನೇ ಪತಿಯಾಗಿ ಸ್ವೀಕರಿಸಿದರು.ಗಿಡ ಮರಗಳ ಬಳಿ ದೇವರ ಹುಡುಕಿದರು. ಅಂದು ಪುರುಷರು ಹೇಗೆ ಇದ್ದರೋ ಇಂದು ಹಾಗೇ ಇದ್ದಾರೆ. ಮನಃಸ್ಥಿತಿ ಸ್ವಲ್ಪವೂ ಬದಲಾಗಿಲ್ಲ ಎಂದು ವಿಶ್ಲೇಷಿಸಿದರು.

ಅಧ್ಯಕ್ಷತೆ ವಹಿಸಿದ್ದ ವಲಯ ಅರಣ್ಯಾಧಿಕಾರಿ ರೇವಣ ಸಿದ್ದಯ್ಯ ಮಾತನಾಡಿ, ‘ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯ. ಪರಿಸರ ಸಮತೋಲನ ಕಾಪಾಡದೇ ಹೋದರೆ ಮುಂದೆ ಭಾರಿ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರಾಣಿಗಳಲ್ಲಿರುವ ಉದಾರ ಗುಣಗಳು ಜನರಲ್ಲಿ ಕಾಣೆಯಾಗುತ್ತಿವೆ. ಇರುವೆಯಂತಹ ಜೀವಿಯಿಂದಲೂ ಪರಿಸರದ ಪಾಠ ಎಲ್ಲರೂ ಕಲಿಯಬೇಕಿದೆ’ ಎಂದು ಹೇಳಿದರು.

ರಂಗಗೀತೆಗಳ ಗಾಯಕಿ ಟಿ.ಜೆ. ನಾಗರತ್ನಾ, ರಾಣಿ, ತತ್ವಪದಕಾರ ನಾದ ಮಣಿನಾಲ್ಕೂರು ಗೀತೆಗಳನ್ನು ಹಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಕಲೀಮ್ ಉಲ್ಲಾ ಅವರು ‘ತರೀಕೆರೆ ಪರಿಸರ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಯುವ ಘಟಕದಪ್ರಧಾನ ಕಾರ್ಯದರ್ಶಿ ಸಿ. ಉಮಾಶಂಕರ್, ಉದ್ಯಮಿ ತಿಪ್ಪೇಸ್ವಾಮಿ, ಆರ್‌.ಎಸ್‌. ಹಾಲಸ್ವಾಮಿ, ಇ. ಪ್ರೇಮಾ, ಅನಿತಾ ಜವಳಿ, ಗೀತಾ ತಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT