ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಜ್ಜವಳ್ಳಿ: ಕುಂಟುತ್ತಾ ಸಾಗಿದೆ ಉಪಕೇಂದ್ರದ ಕಾಮಗಾರಿ

ವಿದ್ಯುತ್ ಸಮಸ್ಯೆಗೆ ಸಿಲುಕಿದ ಮಂಡಗದ್ದೆ ಹೋಬಳಿ ಜನತೆ
Last Updated 1 ಏಪ್ರಿಲ್ 2021, 7:46 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತಾಲ್ಲೂಕಿನ ಬೆಜ್ಜವಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ₹ 7 ಕೋಟಿ ವೆಚ್ಚದ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಮೂಲಕ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಉಪ ಕೇಂದ್ರದ ಕಾಮಗಾರಿ ನಿಗದಿಯಂತೆ ಮಾರ್ಚ್ ಅಂತ್ಯದ ಹೊತ್ತಿಗೆ ಸೇವೆಗೆ ಅಣಿಯಾಗಬೇಕಿತ್ತು. ಆದರೆ, ಈಗ ಶೇ 50ರಷ್ಟು ಕಾಮಗಾರಿ ನಡೆದಿದ್ದು, ವಿದ್ಯುತ್ ಕೇಂದ್ರದ ಕೆಲಸ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಬೆಜ್ಜವಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸುವಂತೆ ಈ ಭಾಗದ ಸಾರ್ವಜನಿಕರು, ರೈತರು, ಸಂಘ ಸಂಸ್ಥೆಗಳು ಹಲವಾರು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ತಂದಿದ್ದವು. ಅನೇಕ ಪ್ರತಿಭಟನೆ ನಡೆಸಲಾಗಿತ್ತು. ಬೆಜ್ಜವಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪನೆ ಮಾಡುವುದರಿಂದ ಮಂಡಗದ್ದೆ ಹೋಬಳಿಯ ಕನ್ನಂಗಿ, ಹಣಗೆರೆಕಟ್ಟೆ, ಬಾಂಡ್ಯಕುಕ್ಕೆ, ಬೆಜ್ಜವಳ್ಳಿ, ತೂದೂರು, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಅನುಕೂಲವಾಗಲಿದೆ. ಉಪ ಕೇಂದ್ರ ಸ್ಥಾಪನೆಯಿಂದ ಓಲ್ಟೇಜ್ ಸಮಸ್ಯೆ, ವಿದ್ಯುತ್ ಅಡಚಣೆಗೆ ಪರಿಹಾರ ದೊರೆಯಲಿದೆ ಎಂಬ ಕಾರಣಕ್ಕೆ ಈ ಭಾಗದ ಜನರು ಬೆಜ್ಜವಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸುವಂತೆ ಪಟ್ಟು ಹಿಡಿದಿದ್ದರು.

ಉಪಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಭೂಮಿ ಬೆಜ್ಜವಳ್ಳಿ ಸುತ್ತಮುತ್ತ ಲಭ್ಯವಿಲ್ಲದ ಕಾರಣ ವಿದ್ಯುತ್ ಇಲಾಖೆಗೆ ಸೇರಿದ ಶಿವಮೊಗ್ಗ– ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ಬೆಜ್ಜವಳ್ಳಿಯಲ್ಲಿನ ಸ್ಥಳವನ್ನು ಆಯ್ದುಕೊಳ್ಳಲಾಗಿತ್ತು. ಸರ್ಕಾರ ಒಪ್ಪಿಗೆ ನೀಡಿದ ನಂತರ ಕಾಮಗಾರಿಯನ್ನು ಆರಂಭಿಸಲಾಯಿತು.

ಇದರ ಶಂಕುಸ್ಥಾಪನೆಯನ್ನು ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ನೆರವೇರಿಸಿದ್ದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆಯನ್ನು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ನೀಡಿದ್ದರು. ಆದರೆ, ಮಂದಗತಿಯ ಕಾಮಗಾರಿಯಿಂದಾಗಿ ಉಪಕೇಂದ್ರ ಕಾರ್ಯನಿರ್ವಹಿಸುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂಬ ಅಸಮಾಧಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

‘ಬೇಸಿಗೆ ಸಮಯದಲ್ಲಿ ವಿದ್ಯುತ್ ಕೊರತೆಯಾಗುತ್ತಿದೆ. ಜಮೀನಿಗೆ ನೀರುಣಿಸಲು ವಿದ್ಯುತ್ ಪೂರೈಕೆಯಾಗದಿರುವುದು ದೊಡ್ಡ ಸಮಸ್ಯೆಯಾಗಿದೆ. ಪಂಪ್‌ಸೆಟ್‌ಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಒದಗಿಸುತ್ತಿಲ್ಲ. ಮಳೆ ಬೀಳದಿದ್ದರೆ ಗಿಡಗಳು ಒಣಗುವ ಭೀತಿ ಇದೆ’ ಎನ್ನುತ್ತಾರೆ ಮಂಡಗದ್ದೆ ಹೋಬಳಿ ರೈತ ಮಂಜುನಾಥ್.

ಮೇ ಅಂತ್ಯಕ್ಕೆ ಆರಂಭ

ಉತ್ತರ ಭಾರತದಿಂದ ಬರಬೇಕಿದ್ದ ಸಲಕರಣೆಗಳು ಕೊರೊನಾ ಕಾರಣದಿಂದಾಗಿ ಪೂರೈಕೆಯಾಗಿಲ್ಲ. ಜೆಲ್ಲಿ, ಮರಳು ಸಿಗು ತ್ತಿಲ್ಲ. 2 ತಿಂಗಳಿನಿಂದ ಜಿಲ್ಲೆಯ ಎಲ್ಲ ಕಡೆಗಳಲ್ಲಿನ ಉಪಕೇಂದ್ರದ ಕೆಲಸ ನಿಂತಿದೆ. ಬೆಜ್ಜವಳ್ಳಿ ಉಪಕೇಂದ್ರ ಮೇ ಅಂತ್ಯಕ್ಕೆ ಆರಂಭಗೊಳ್ಳಲಿದೆ.

-ಕುಮಾರಸ್ವಾಮಿ, ಕಾರ್ಯನಿರ್ವಾಹಕ ಎಂಜಿನಿಯರ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಶಿವಮೊಗ್ಗ

ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳಿ

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳ ದಿರುವುದರಿಂದ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆ ಯಾಗುತ್ತಿಲ್ಲ. ವಿದ್ಯುತ್ ನಂಬಿ ಕೃಷಿ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ಆರಂಭಕ್ಕೆ ಕ್ರಮ ತಗೆದುಕೊಳ್ಳಬೇಕು.

-ಮುಡುಬ ರಾಘವೇಂದ್ರ, ಅಧ್ಯಕ್ಷ, ತೀರ್ಥಹಳ್ಳಿ ಗ್ರಾಮಾಂತರ ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT