ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ಬದಲು ಪ್ರೀತಿಯ ರಾಜಕಾರಣ ನೆಲೆಯೂರಲಿ: ಬೇಳೂರು

ಪೌರ ಸನ್ಮಾನ ಸ್ವೀಕರಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ
Published 30 ಜೂನ್ 2023, 14:26 IST
Last Updated 30 ಜೂನ್ 2023, 14:26 IST
ಅಕ್ಷರ ಗಾತ್ರ

ಸಾಗರ: ಇಂದಿನ ರಾಜಕಾರಣದಲ್ಲಿ ದ್ವೇಷದ ಮನೋಭಾವ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ದ್ವೇಷದ ಬದಲು ಎಲ್ಲೆಡೆ ಪ್ರೀತಿಯ ರಾಜಕಾರಣ ನೆಲೆಯೂರಬೇಕಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ನಗರಸಭೆ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ವತಿಯಿಂದ ನೀಡಿದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ ಹಾಗೂ ಎಸ್.ಬಂಗಾರಪ್ಪ ಅವರ ಕಾಲದಲ್ಲಿ ಮೌಲ್ಯಾಧಾರಿತ ರಾಜಕಾರಣ ಮುನ್ನೆಲೆಯಲ್ಲಿತ್ತು. ಅಂತಹ ದಿನಗಳು ಮರುಕಳಿಸಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ’ ಎಂದರು.

‘ಪಕ್ಷ ರಾಜಕಾರಣ ಚುನಾವಣೆ ಮುಗಿಯವವರೆಗೆ ಮಾತ್ರ ಇರಬೇಕು. ಚುನಾವಣೆಯಲ್ಲಿ ಗೆದ್ದು ಬಂದವರು ಎಲ್ಲಾ ಪಕ್ಷದವರಿಗೂ ಜನಪ್ರತಿನಿಧಿಯಾಗಿರುತ್ತಾರೆ. ನಾನು ಕಾಂಗ್ರೆಸ್‌ನಿಂದ ಶಾಸಕನಾಗಿದ್ದರೂ ಬಿಜೆಪಿಯ ಯಾವುದೇ ನಗರಸಭೆ ಸದಸ್ಯರು ಅಭಿವೃದ್ಧಿ ವಿಷಯದಲ್ಲಿ ಬಂದು ಭೇಟಿ ಮಾಡಿದರೆ ಖಂಡಿತಾ ಅವರಿಗೆ ಸಹಕಾರ ನೀಡುತ್ತೇನೆ’ ಎಂದು ತಿಳಿಸಿದರು.

ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಬಗ್ಗೆ ನಾನು ಈ ಹಿಂದೆ ಪ್ರಸ್ತಾಪ ಮಾಡಿದಾಗ ಅನೇಕ ಮಂದಿ ಅಪಹಾಸ್ಯ ಮಾಡಿದ್ದರು. ಈಗ ಆ ಯೋಜನೆಯ ಉಪಯುಕ್ತತೆ ಏನು ಎಂಬುದು ಎಲ್ಲರಿಗೂ ಅರಿವಾಗಿದೆ. ರಾಜಕಾರಣದಲ್ಲಿ ಯಾರನ್ನೂ ಕೇವಲವಾಗಿ ನೋಡುವ ಮನೋಭಾವ ಸರಿಯಲ್ಲ ಎಂದರು.

ಸ್ಥಳೀಯ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಣಪತಿ ದೇವಸ್ಥಾನದ ಎದುರು ನಕ್ಷತ್ರವನ ಉದ್ಯಾನವನ ನಿರ್ಮಿಸುವ ಯೋಜನೆ ಇದೆ. ಅದೇ ರೀತಿ ಸುಸಜ್ಜಿತವಾದ ರಂಗಮಂದಿರದ ಅಗತ್ಯವೂ ಸಾಗರ ನಗರಕ್ಕಿದೆ. ನಗರದ ಎಲ್ಲಾ 31 ವಾರ್ಡ್‌ಗಳಲ್ಲಿ ಪಾರ್ಕ್ ನಿರ್ಮಾಣವಾಗಬೇಕಿದೆ. ಈ ಸಂಬಂಧ ನಗರಸಭೆಯ ಎಲ್ಲಾ ಸದಸ್ಯರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಚುನಾವಣೆಯಲ್ಲಿ ಸೋಲು, ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬೇಳೂರು ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಶಾಸಕರಾಗಿದ್ದವರು ಈಗ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಹಿಂದೆ ಅವರಿಗೆ ನೀಡಿದ ಸಹಕಾರವನ್ನೇ ಮುಂದುವರಿಸುವುದಾಗಿ ಬಿಜೆಪಿ ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್ ಹೇಳಿದರು.

ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಪೌರಾಯುಕ್ತ ಸಿ.ಚಂದ್ರಪ್ಪ, ಕಾರ್ಯಪಾಲಕ ಎಂಜಿನಿಯರ್‌ ಎಚ್.ಕೆ. ನಾಗಪ್ಪ, ನಗರಸಭೆ ಸದಸ್ಯರಾದ ಮಧು ಮಾಲತಿ, ಎನ್. ಲಲಿತಮ್ಮ, ಕೆ.ಆರ್. ಪ್ರಸಾದ್, ವಿ. ಮಹೇಶ್, ಸೈಯದ್ ಜಾಕೀರ್, ಉಮೇಶ್, ಶ್ರೀನಿವಾಸ್ ಮೇಸ್ತ್ರಿ, ಗಣಪತಿ ಮಂಡಗಳಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT