ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಜಲಾಶಯಕ್ಕೆ ಜುಲೈ, ಆಗಸ್ಟ್ ಮಳೆಯೇ ಆಸರೆ?

ಐದು ವರ್ಷಗಳಿಂದಲೂ ಜೂನ್ ತಿಂಗಳಲ್ಲಿ ಮಳೆ ಕೊರತೆ
Last Updated 3 ಜುಲೈ 2022, 2:34 IST
ಅಕ್ಷರ ಗಾತ್ರ

ಶಿವಮೊಗ್ಗ: ಜಲಾನಯನ ಪ್ರದೇಶದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆ ಆಗಿಲ್ಲ. ಹೀಗಾಗಿ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಇದೆ.

2021ರ ಜೂನ್ 30ಕ್ಕೆ ಜಲಾಶಯದಲ್ಲಿ ನೀರಿನ ಮಟ್ಟ 154.07 ಅಡಿಯಷ್ಟು ಇತ್ತು. ಈ ವರ್ಷ 152.02ಅಡಿ ಇದೆ.

ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೇಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಯ ಮೂಲಕ ಅಚ್ಚುಕಟ್ಟು ಭಾಗಗಳಿಗೆ ನೀರು ಹರಿಸಬೇಕಿದೆ. ಆದರೆ, ಜಲಾಶಯದಲ್ಲಿ ನಿರೀಕ್ಷೆಯಷ್ಟು ನೀರಿನ ಸಂಗ್ರಹ ಆಗಿಲ್ಲ.

ಜುಲೈ 15ರ ವೇಳೆಗೆ ನೀರಿನ ಮಟ್ಟ 165 ಅಡಿಗೆ ಏರಿಕೆಯಾದರೆ ಮಾತ್ರ ಕಾಲುವೆಗೆ ನೀರು ಹರಿಸಲು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ತೀರ್ಮಾನಿಸಿದೆ. ಅದರನ್ವಯ ಇನ್ನು 12 ದಿನಗಳಲ್ಲಿ 12 ಅಡಿ ನೀರು ಹೆಚ್ಚಳವಾಗಬೇಕಿದೆ. ಹೀಗಾಗಿಭತ್ತದ ನಾಟಿಗೆ ಕಾದು ಕುಳಿತಿರುವ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತರ ಚಿತ್ತ ಮಲೆನಾಡಿನ ಮುಗಿಲಿನತ್ತ ನೆಟ್ಟಿದೆ.

ಮಳೆಯ ಕೊರತೆ: ಭದ್ರಾ ನದಿಯ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಈ ಬಾರಿ ವಾಡಿಕೆಯಷ್ಟು ಜೂನ್ ತಿಂಗಳಲ್ಲಿ ಮಳೆ ಆಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಜೂನ್ 1ರಿಂದ 30ರವರೆಗೆ (ಕೊಪ್ಪ, ಹರಿಹರಪುರ ಹಾಗೂ ಮೇಗುಂದ ಹೋಬಳಿ) ವಾಡಿಕೆ ಮಳೆ 538 ಮಿ.ಮೀ. ಬೀಳಬೇಕಿತ್ತು. ಆದರೆ, 207 ಮಿ.ಮೀ. ಮಳೆ ಬಿದ್ದಿದೆ. ಶೇ 61ರಷ್ಟು ಮಳೆ ಕೊರತೆ ಆಗಿದೆ.

ಮೂಡಿಗೆರೆ ತಾಲ್ಲೂಕಿನಲ್ಲಿ (ಮೂಡಿಗೆರೆ, ಬಣಕಲ್, ಗೋಣಿಬೀಡು, ಕಳಸ, ಬೈಲೂರು) 454 ಮಿ.ಮೀ. ವಾಡಿಕೆ ಮಳೆಯ ಪೈಕಿ 319 ಮಿ.ಮೀ. ಮಳೆ ಆಗಿದೆ. ನರಸಿಂಹರಾಜಪುರ ತಾಲ್ಲೂಕಿನಲ್ಲಿ (ನರಸಿಂಹರಾಜಪುರ, ಬಾಳೆಹೊನ್ನೂರು) 262 ಮಿ.ಮೀ. ವಾಡಿಕೆ ಮಳೆಯ ಪೈಕಿ 108 ಮಿ.ಮೀ. ಮಳೆ ಬಿದ್ದಿದೆ.

‘ಈ ಬಾರಿ ಜೂನ್‌ನಲ್ಲಿ ಮಳೆಯ ಪ್ರಮಾಣ ತೀರಾ ಕೊರತೆ ಇದೆ. ಕಳೆದ ಎರಡು (ಮುಂಗಾರು–ಬೇಸಿಗೆ) ಹಂಗಾಮುಗಳಲ್ಲಿ ಕಾಲುವೆಗೆ ನೀರು ಹರಿಸಿದ್ದರೂ ಜಲಾಶಯದಲ್ಲಿ ಇಷ್ಟು ನೀರು ಸಂಗ್ರಹವಾಗಿರುವುದಕ್ಕೆ ಡಿಸೆಂಬರ್‌ನಲ್ಲಿ ಸುರಿದ ಮಳೆ ಹಾಗೂ ಮೇ ತಿಂಗಳ ಸೈಕ್ಲೋನ್ ಕಾರಣ ಹೊರತು ಮುಂಗಾರಿನಲ್ಲಿ ಸುರಿದ ಮಳೆಯ ಪ್ರಮಾಣ ಅಲ್ಲ’ ಎಂದು ಭದ್ರಾ ಕಾಡಾ ಅಧಿಕಾರಿಯೊಬ್ಬರು ಹೇಳುತ್ತಾರೆ.

ಇದಕ್ಕೆ ಪೂರಕವಾಗಿ ಕಳೆದ ಮೇ 31ರಂದು ಜಲಾಶಯದಲ್ಲಿ ನೀರಿನ ಮಟ್ಟ 150.6 ಅಡಿವರೆಗೆ ಸಂಗ್ರಹಗೊಂಡಿತ್ತು. ಜೂನ್ 30ಕ್ಕೆ 152.2 ಅಡಿ ಇತ್ತು. ಒಂದು ತಿಂಗಳಲ್ಲಿ 2 ಅಡಿ ಮಾತ್ರ ನೀರು ಹೆಚ್ಚಳಗೊಂಡಿದೆ.

ಆರಿದ್ರಾ ಚುರುಕು, ಮಘೆವರೆಗೂ ಆಶಾಭಾವ..

ಜೂನ್ ಮೊದಲ ಮೂರು ವಾರ ರೋಹಿಣಿ, ಮೃಗಶಿರಾ ಮಳೆಗಳು ರೈತರ ಕೈ ಹಿಡಿಯಲಿಲ್ಲ. ತಿಂಗಳ ಕೊನೆಗೆ ಹಾಗೂ ಜುಲೈ ಆರಂಭದಲ್ಲಿ ಆರಿದ್ರಾ ಮಳೆ ಒಂದಷ್ಟು ಚುರುಕಾಗಿದೆ. ಹಿಂದಿನ ವರ್ಷಗಳಂತೆ ಆಗಸ್ಟ್ ಅಂತ್ಯದವರೆಗೆ ಪುನರ್ವಸು, ಪುಷ್ಯ, ಆಶ್ಲೇಷ ಹಾಗೂ ಮಘೆ ಮಳೆಗಳ ಸಮೃದ್ಧಿ ಜಲಾಶಯ ತುಂಬಲು ನೆರವಾಗಬಹುದು ಎಂದು ದಾವಣಗೆರೆ ತಾಲ್ಲೂಕಿನ ಬಾಡ ಗ್ರಾಮದ ರೈತ ಪವನಕುಮಾರ ಆಶಾಭಾವ ವ್ಯಕ್ತಪಡಿಸುತ್ತಾರೆ.

ಒಳ ಹರಿವು ಹೆಚ್ಚಳ

ಭದ್ರಾ ಜಲಾಶಯಕ್ಕೆ ಜೂನ್ 24ರ (324 ಕ್ಯುಸೆಕ್) ನಂತರ ಒಳಹರಿವು ಹೆಚ್ಚಾಗಿದೆ. ಜೂನ್ 26ಕ್ಕೆ 1,679 ಕ್ಯುಸೆಕ್‌ಗೆ ಏರಿದ್ದ ಒಳಹರಿವು ಜುಲೈ 2ರಂದು 5,324 ಕ್ಯುಸೆಕ್‌ಗೆ ಹೆಚ್ಚಳಗೊಂಡಿದೆ. ಜೊತೆಗೆ ಜಲಾಶಯದ ನೀರಿನ ಮಟ್ಟ 153.1 ಅಡಿಗೆ ಏರಿಕೆ ಆಗಿದೆ.

‘ಇದು ಜೂನ್ ಕೊನೆಯ ವಾರದಿಂದ ಜಲಾನಯದ ಪ್ರದೇಶದಲ್ಲಿ ಮಳೆಯ ಪ್ರಮಾಣ ಚುರುಕುಗೊಂಡಿರುವ ದ್ಯೋತಕ’ ಎಂದು ಭದ್ರಾ ಜಲಾಶಯದ ತಾಂತ್ರಿಕ ವಿಭಾಗದ ಸಹಾಯಕ ಅಶೋಕ ಪಾಲೇಕರ ಹೇಳುತ್ತಾರೆ.

ರೈತರು ನಿರಾಶರಾಗಬೇಕಿಲ್ಲ:ಪವಿತ್ರಾ ರಾಮಯ್ಯ

ಮೊದಲಿಗೆ ಜೂನ್ ತಿಂಗಳಲ್ಲಿ ಹೊಳೆ ಕಟ್ಟುತ್ತಿತ್ತು. ಈಗ ಐದಾರು ವರ್ಷಗಳಿಂದ ಜುಲೈ, ಆಗಸ್ಟ್ ತಿಂಗಳಲ್ಲಿ ಕಟ್ಟುತ್ತಿದೆ. ಹೀಗಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ನಿರಾಶರಾಗುವ ಅಗತ್ಯವಿಲ್ಲ ಎಂದು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳುತ್ತಾರೆ.

‘ಭಗವಂತನ ಕೃಪೆಯಿಂದ ನಾಲ್ಕು ದಿನ ಭರ್ಜರಿ ಮಳೆ ಸುರಿದರೆ ಜಲಾಶಯ ತುಂಬಲಿದೆ. ಈ ಹಿಂದೆ ಅಂತಹದ್ದೇ ನಿದರ್ಶನಗಳಿವೆ. ಜಲಾಶಯದ ಮಟ್ಟ 165 ಅಡಿ ತಲುಪಿದ ದಿನದಿಂದಲೇ ಕಾಲುವೆ ನೀರು ಹರಿಸಲು ಆರಂಭಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT