ಭಾನುವಾರ, ಜುಲೈ 25, 2021
22 °C

ಮೀಸಲಾತಿ: ಅತಂತ್ರರಾದ ಮುಖಂಡರು

ಕೆ.ಎನ್.ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಭದ್ರಾವತಿ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು, ಹಲವು ಮುಖಂಡರು ಅವಕಾಶದಿಂದ ವಂಚಿತರಾಗಿದ್ದಾರೆ.

ತಲಾ ಎರಡು ಬಾರಿ ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಎಸ್. ಕುಮಾರ್ ಹಾಗೂ ಜ್ಯೋತಿ ಎಸ್.ಕುಮಾರ್ ದಂಪತಿ ಈ ಬಾರಿಯ ಮೀಸಲಾತಿಯಿಂದ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದೆ.

ಆದರೂ ದೊಣಬಘಟ್ಟ ಸಿಂಗನಮನೆ ಹಾಗೂ ತಡಸ ಕೂಡ್ಲಿಗೆರೆ ಕ್ಷೇತ್ರ ಸಾಮಾನ್ಯ ಮಹಿಳೆಗೆ ಸಿಕ್ಕಿರುವ ಲಾಭವನ್ನು ಪಡೆಯಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅವರಿಗೆ ಅವಕಾಶವಿದೆ. ಆದರೆ ಸ್ವಕ್ಷೇತ್ರ ಹಿರಿಯೂರು ಯರೇಹಳ್ಳಿ ಪಂಚಾಯಿತಿ ಎಸ್ಸಿ ಮಹಿಳೆಗೆ ಮೀಸಲಾಗಿರುವುದು ಇವರಿಗೆ ಕಹಿ ತಂದಿದೆ.

ಸತತ ಎರಡು ಬಾರಿ ಸಿಂಗನಮನೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಜೆ.ಪಿ. ಯೋಗೀಶ್ ಅವರಿಗೆ ಪುನಃ ಸ್ಪರ್ಧಿಸಲು ಅವಕಾಶ ಇಲ್ಲದಂತಾಗಿದ್ದು, ಅವರಿಗೆ ನಿರಾಸೆಯಾಗಿದೆ.

ಎರಡು ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸುವ ಮೂಲಕ ಎಂ.ಜೆ. ಅಪ್ಪಾಜಿ ಭದ್ರಕೋಟೆ ಎನಿಸಿದ್ದ ಸಿಂಗನಮನೆ ಕ್ಷೇತ್ರವು ಈಗ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಮಾಜಿ ಶಾಸಕರ ಕುಟುಂಬದ ಬಂಧುಗಳಿಗೆ ಇದರ ಲಾಭ ಸಿಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಬಾರಿ ಕೂಡ್ಲಿಗೆರೆ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಎಸ್.ಮಣಿಶೇಖರ್ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವ ತಯಾರಿಯಲ್ಲಿದ್ದರು. ಕ್ಷೇತ್ರದ ಮೀಸಲಾತಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದರಿಂದ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅರಬಿಳಚಿ ಬಿಸಿಎಂ ‘ಬಿ’ ಕಡೆ ಮುಖ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕ್ಷೇತ್ರಕ್ಕೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಕೆಲವಷ್ಟು ಹಳ್ಳಿಗಳು ಸೇರುವ ಕಾರಣ ಅವರ ಸ್ಪರ್ಧೆಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೂ ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.

ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಹೆಸರು ಮಾಡಿರುವ ಎಚ್.ಎಲ್. ಷಡಾಕ್ಷರಿ ಸ್ಪರ್ಧಿಸಲು ಎರಡು ಕ್ಷೇತ್ರದಲ್ಲೂ ಅವಕಾಶ ಸಿಕ್ಕಿದೆ. ಆನವೇರಿ ಇಲ್ಲವೆ ಅರಬಿಳಚಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿರುವುದು ಅವರ ಉತ್ಸಾಹ ಹೆಚ್ಚಿಸಿದೆ.

ಕಳೆದ ಬಾರಿ ಭದ್ರಾವತಿ ಕ್ಷೇತ್ರದ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಣಿಶೇಖರ್ ಎದುರು ಸೋತಿದ್ದ ಅವರು ಈ ಬಾರಿ ಗೆಲುವಿನ ದಡ ಸೇರಲು ಅನುಕೂಲ ಎನಿಸುವ ರೀತಿಯಲ್ಲಿ ಅವಕಾಶ ಸಿಕ್ಕಿದೆ.

ಅರಬಿಳಚಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ. ಇಲ್ಲಿ ಗೆಲುವು ಸುಲಭ. ಅದರಲ್ಲೂ ಷಡಾಕ್ಷರಿ ಅವರು ಈ ಹಿಂದೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಅಲ್ಲಿನ ಕೆಲವು ಗ್ರಾಮಗಳು ಈ ಪಂಚಾಯಿತಿಗೆ ಸೇರುವುದರಿಂದ ಅರಬಿಳಚಿ ಕ್ಷೇತ್ರದ ಆಯ್ಕೆ ಅವರಿಗೆ ಸೂಕ್ತ’ ಎನ್ನುತ್ತಾರೆ ಅವರ ಆಪ್ತರಾದ ಮಧುಸೂದನ್.

‘ಭದ್ರಾವತಿ ವಿಧಾನಸಭಾ ಕ್ಷೇತ್ರದ ಮೂರು ಜಿಲ್ಲಾ ಪಂಚಾಯಿತಿ ಸ್ಥಾನಗಳು ಕಳೆದ ಬಾರಿ ಜೆಡಿಎಸ್ ಪಾಲಾಗಿತ್ತು. ಈ ಬಾರಿ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷವೂ ಈಗಾಗಲೇ ತಯಾರಿ ನಡೆಸಿದ್ದು ಮೀಸಲಾತಿ ಕುರಿತಂತೆ ನಮ್ಮಲ್ಲಿ ಯಾವುದೇ ಅಪಸ್ವರವಿಲ್ಲ ಎಂಬ ಮಾತನ್ನು ಮುಖಂಡರು ಸ್ಪಷ್ಟವಾಗಿ ಹೇಳುತ್ತಿದ್ದರೂ, ಸಭೆ ಬಳಿಕ ಎಲ್ಲಕ್ಕೂ ಸ್ಪಷ್ಟತೆ ಸಿಗಲಿದೆ’ ಎನ್ನುತ್ತವೆ ಮೂಲಗಳು.

ಮೀಸಲಾತಿ ಬಂದ ನಂತರದಲ್ಲಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಕೆಲವರು ಮುಂದಾಗಿದ್ದರೆ ಮಾಜಿ ಸದಸ್ಯರು, ಸೋಲನ್ನೇ ಕಾಣದ ನಾಯಕರು ಮಾತ್ರ ಸಿಕ್ಕ ಅವಕಾಶವನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.