ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿರುದ್ಧ ಬಹಿರಂಗ ಹೇಳಿಕೆ ನೀಡಿದರೆ ಕಠಿಣ ಕ್ರಮ: ಬಿಜೆಪಿ ಎಚ್ಚರಿಕೆ

ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳಿಗೆ ಬಿಜೆಪಿ ವಿಶೇಷ ಸಭೆಯಲ್ಲಿ ತೆರೆ
Last Updated 3 ಜನವರಿ 2021, 13:11 IST
ಅಕ್ಷರ ಗಾತ್ರ

ಶಿವಮೊಗ್ಗ: ಬಹಿರಂಗ ಹೇಳಿಕೆ ನೀಡುವ ಮೂಲಕ ಸರ್ಕಾರ, ಪಕ್ಷಕ್ಕೆ ಮುಜುಗರ ಸೃಷ್ಟಿಸುವ ಮುಖಂಡರು, ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುವ ಮೂಲಕ ಎರಡು ದಿನಗಳು ನಗರದಲ್ಲಿ ನಡೆದ ಬಿಜೆಪಿ ವಿಶೇಷ ಸಭೆ ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳಿಗೆ ತೆರೆ ಎಳೆದಿದೆ.

ಸರ್ಕಾರದ ವಿರುದ್ಧ ನಿರಂತರ ಹೇಳಿಕೆ ನಿಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ಪಕ್ಷದ ಮುಖಂಡರೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ತರುತ್ತಿದ್ದಾರೆ. ನಮ್ಮವರ ಹೇಳಿಕೆಗಳನ್ನೇ ಉದಾಹರಿಸಿ ವಿರೋಧ ಪಕ್ಷದ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಪಕ್ಷದ ಪ್ರಮುಖರ ಎದುರು ಅಳಲು ತೋಡಿಕೊಂಡಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಬಹುಮತ ಸಿಗಲಿಲ್ಲ. ಬೇರೆ ಪಕ್ಷಗಳ ಶಾಸಕರು ತಮ್ಮ ಮೇಲೆ ವಿಶ್ವಾಸವಿಟ್ಟು ರಾಜೀನಾಮೆ ನೀಡಿ, ಪಕ್ಷಕ್ಕೆ ಬಂದಿದ್ದಾರೆ. ಅವರ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅಂದು ಸರ್ಕಾರ ರಚನೆಗೆ ಸಹಕರಿಸಿದವರಿಗೆ ಸ್ಥಾನಮಾನ ನೀಡುವುದು ಅನಿವಾರ್ಯ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಎಷ್ಟು ಸರಿ? ಎಲ್ಲರೂ ಸಹಕರಿಸಿದರೆ ಉಳಿದ ಎರಡೂವರೆ ವರ್ಷ ಉತ್ತಮ ಆಡಳಿತ ನೀಡಿ, ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲಬಹುದು. ಆಗ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧನಾಗಿರುವೆ ಎಂದು ಭರವಸೆ ನೀಡಿದ್ದಾರೆ.

ಬಿಜೆಪಿ ಕಾರ್ಯಕಾರಿಣಿ‌ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಬಿಜೆಪಿ ಕಾರ್ಯಕಾರಿಣಿ‌ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

‘ನಾನು ಹೈಕಮಾಂಡ್‌ ಸೂಚನೆಯಂತೆ ನಡೆದುಕೊಂಡಿರುವೆ. ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲು ಮೋದಿಜಿ ನೆನಪು ಮಾಡಿಕೊಳ್ಳುತ್ತೇನೆ. ಅವರ ಆಯುಷ್ಯ, ಆರೋಗ್ಯಕ್ಕೆ ಬೇಡಿಕೊಳ್ಳುವೆ. ನನ್ನ ಮೇಲೆ ವಿಶ್ವಾಸಬಿಟ್ಟು ಕೆಲಸ ಮಾಡಲು ಬಿಡಿ’ ಎಂದು ಗದ್ಗದಿತರಾಗಿ ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ ಮುಖಂಡರು ಮುಖ್ಯಮಂತ್ರಿ ಬದಲಾವಣೆ, ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಚರ್ಚೆ ಅನಗತ್ಯ. ಪಕ್ಷದ ಶಾಸಕರಲ್ಲಿ ಅಸಮಧಾನ ಮೂಡದಂತೆ ಕಾರ್ಯನಿರ್ವಹಿಸಬೇಕು. ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅರುಣ್‌ ಸಿಂಗ್ ಸಲಹೆ ನೀಡಿದ್ದಾರೆ.

11ರಿಂದ ‘ಜನ ಸೇವಕ್‌’ ಸಮಾವೇಶ

ಬಿಜೆಪಿ ಕಾರ್ಯಕಾರಿಣಿ‌ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು
ಬಿಜೆಪಿ ಕಾರ್ಯಕಾರಿಣಿ‌ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು

ಗ್ರಾಮ ಪಂಚಾಯಿತಿ ಚುನಾವಣೆಯ ಯಶಸ್ವಿನ ಯಾತ್ರೆ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಮುಂದುವರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಜನಸೇವಕ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಜನವರಿ 11ರಿಂದ ಮೂರು ದಿನಗಳು ಸಮಾವೇಶ ನಡೆಯಲಿದೆ. ಮೈಸೂರಿನಲ್ಲಿ 11ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಮಾವೇಶಕ್ಕೆ ಚಾಲನೆ ನೀಡುವರು. ಪ್ರತಿ ಜಿಲ್ಲೆಯಲ್ಲೂ ಎರಡು ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.

ರೈತರ ಹೋರಾಟ; ರಾಜ್ಯದಲ್ಲೂ ಮುನ್ನೆಚ್ಚರಿಕೆ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ದಿಕ್ಕು ತಪ್ಪಿದೆ. ಅವರ ಬೇಡಿಕೆಗಳ ಸ್ವರೂಪ ಬದಲಾಗಿದೆ. ರಾಜ್ಯದಲ್ಲೂ ಇಂತಹ ಪ್ರತಿಭಟನೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ವಿಶೇಷ ಸಭೆ ನಿರ್ಧರಿಸಿತು.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆಗಳು ರೈತರಿಗೆ ಪೂರಕವಾಗಿವೆ. ಅವುಗಳ ಮಹತ್ವ, ದೆಹಲಿ ರೈತ ಹೋರಾಟದ ಹಿಂದಿರುವ ರಾಜಕೀಯ ಷಡ್ಯಂತ್ರಗಳನ್ನು ರಾಜ್ಯದ ರೈತರಿಗೂ ಮನವರಿಕೆ ಮಾಡಿಸಬೇಕು. ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಅರ್ಥ ಮಾಡಿಸಬೇಕು. ವಿರೋಧ ಪಕ್ಷಗಳು ಅಸಮಾಧಾನದ ಲಾಭ ಪಡೆಯದಂತೆ ನೋಡಿಕೊಳ್ಳುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಮುಂಬರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅಗತ್ಯ ಕಾರ್ಯತಂತ್ರ ರೂಪಿಸಿವುದು. ಗ್ರಾಮೀಣ ಮಟ್ಟದಲ್ಲಿ ಪಕ್ಷದ ಸಂಘಟನೆ ಮತ್ತಷ್ಟು ಬಲಪಡಿಸುವುದು. ಸರ್ಕಾರ, ಪಕ್ಷದ ವಿರುದ್ಧ ನೀಡುವ ಬಹಿರಂಗ ಹೇಳಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಸೇರಿದಂತೆ ಹಲವು ವಿಷಯಗಳ ಕುರಿತು ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತು.

ವಿಶೇಷ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಶಿವಮೊಗ್ಗ ರಾಜಕೀಯ ಪ್ರಯೋಗಶಾಲೆ. ಯುವ ರಾಜಕಾರಣಿಗಳಿಗೆ ಪ್ರೇರಣೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಭೆ ಉದ್ಘಾಟಿಸಿದ ನಂತರ ಪಕ್ಷಕಟ್ಟಲು, ಅಧಿಕಾರಕ್ಕೆ ತರಲು ನಡೆಸಿದ ಸುದೀರ್ಘ ಹೋರಾಟವನ್ನು ಮೆಲುಕು ಹಾಕಿದರು. ಇಬ್ಬರ ಗೆಲುವಿನಿಂದ ಆರಂಭವಾದ ರಾಜಕೀಯ ಯಾತ್ರೆ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿನ ಹಾದಿ ತೆರೆದಿಟ್ಟರು. ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಪಡೆದು ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಭರವಸೆ ವ್ಯಕ್ತಪಡಿಸಿದರು ಎಂದು ವಿವರ ನೀಡಿದರು.

ಕೇಂದ್ರದ ನಿರ್ಧಾರಗಳಿಗೆ ಸಹಮತ

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿರುವುದು, ಕೃಷಿ ಸುಧಾರಣಾ ಮಸೂದೆಗಳು ಅತ್ಯಂತ ಪ್ರಮುಖವಾದವು. ಈ ಕಾಯ್ದೆಗಳ ವಿರುದ್ಧ ಎಡ ಪಂಥೀಯರು, ಕಾಂಗ್ರೆಸ್‌ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿವೆ. ರೈತರ ಹೆಸರಿನಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಯತ್ನಗಳು ನಡೆದಿವೆ. ಅವರ ಬೇಡಿಕೆಗಳ ಸ್ವರೂಪವೂ ಬದಲಾಗಿದೆ. ಇಂತಹ ಷಡ್ಯಂತ್ರಗಳ ವಿರುದ್ಧ ಪಕ್ಷದ ಕಾರ್ಯಕರ್ತರು ಜಾಗ್ರತೆ ವಹಿಸಬೇಕು. ರೈತರಿಗೆ ಕಾಯ್ದೆಗಳ ಪ್ರಯೋಜನ ಮನವರಿಕೆ ಮಾಡಿಕೊಡಬೇಕು. ಅದಕ್ಕಾಗಿ ಸೂಕ್ತ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದೆ. ಸುಮಾರು 42 ಸಾವಿರ ಕಾರ್ಯಕರ್ತರು, ಬೆಂಬಲಿಗರು ಆಯ್ಕೆಯಾಗಿದ್ದಾರೆ. ಅದೇ ರೀತಿ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲೂ ಗೆಲುವು ದಾಖಲಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯರು, ಇತರೆ ಪ್ರತಿನಿಧಿಗಳನ್ನು ಬಳಸಿಕೊಂಡು ಜನ ಸೇವಕ್‌ ಸಮಾವೇಶಗಳ ಮೂಲಕ ಜನರನ್ನು ತಲುಪಲು ಯೋಜನೆ ರೂಪಿಸಲಾಯಿತು ಎಂದರು.

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್, ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ, ಡಿ.ಕೆ.ಅರುಣಾ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಮುಖಂಡರಾದ ಅರವಿಂದ ಲಿಂಬಾವಳಿ, ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಅರುಣ್‌ ಕುಮಾರ್, ರವಿಕುಮಾರ್,. ಮಹೇಶ್ ತೆಂಗಿನ ಕಾಯಿ, ಅಶ್ವತ್ಥ ನಾರಾಯಣ, ಮುನಿರಾಜು, ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT