ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲೆನಾಡಿನ ‘ಜಂಟಲ್ ಮನ್’ ರಾಜಕಾರಣಿ ಕಣ್ಮರೆ

ಹೋರಾಟದ ಹಾದಿಯಲ್ಲೇ ನಿರ್ಗಮಿಸಿದ ಎಂ.ಬಿ.ಭಾನುಪ್ರಕಾಶ್‌
Published 18 ಜೂನ್ 2024, 7:13 IST
Last Updated 18 ಜೂನ್ 2024, 7:13 IST
ಅಕ್ಷರ ಗಾತ್ರ

ಶಿವಮೊಗ್ಗ: ಸಂಘ, ಸಂಘಟನೆ, ಪಕ್ಷ, ಹೋರಾಟ ಸೇರಿ ಸಾರ್ವಜನಿಕ ಬದುಕಿಗೆ ಸುದೀರ್ಘ ಐದು ದಶಕಗಳನ್ನು ಸಮರ್ಪಿಸಿಕೊಂಡು ಬಂದವರು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ.ಬಿ.ಭಾನುಪ್ರಕಾಶ್.

ಸೋಮವಾರ ಇಲ್ಲಿನ ಗೋಪಿ ವೃತ್ತದಲ್ಲಿ ಪಕ್ಷದ ಹೋರಾಟದ ವೇದಿಕೆಯಲ್ಲಿಯೇ ಜೀವಬಿಟ್ಟದ್ದು ಕಾಕತಾಳೀಯ.

ಭಾನುಪ್ರಕಾಶ್ ಮೂಲತಃ ಇಲ್ಲಿನ ಆರ್‌ಎಸ್ಎಸ್ ಶಕ್ತಿ ಕೇಂದ್ರ, ಸಂಸ್ಕ್ರತ ಗ್ರಾಮ ಮತ್ತೂರಿನ ನಿವಾಸಿ. ಮಲೆನಾಡಿನ ರಾಜಕಾರಣದಲ್ಲಿ ತಮ್ಮ ‘ಜೆಂಟಲ್‌ಮನ್’ ವ್ಯಕ್ತಿತ್ವದಿಂದ ಅಜಾತಶತ್ರು ಎನ್ನಿಸಿಕೊಂಡವರು.

ಬಾಲ್ಯದಿಂದ ಸಂಘದ ನಂಟಿನಲ್ಲಿಯೇ ಬೆಳೆದುಬಂದ ಅವರು, ಜನಸಂಘದಲ್ಲೂ ಸಕ್ರಿಯರಾಗಿದ್ದರು. ತಮ್ಮೂರಿನ ಗ್ರಾಮ ಪಂಚಾಯ್ತಿ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದ ಅವರು, 2001ರಲ್ಲಿ ಗಾಜನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದರು. 2013ರಿಂದ 19ರವರೆಗೆ ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿದ್ದರು.

ಎಸ್‌.ಬಂಗಾರಪ್ಪ 2004–05ರಲ್ಲಿ ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದಾಗ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಭಾನುಪ್ರಕಾಶ್‌ ಕಣಕ್ಕಿಳಿದಿದ್ದರು. ಪ್ರಚಾರದ ವೇಳೆ ಮುಖಾಮುಖಿ ಆದಾಗ ಬಂಗಾರಪ್ಪ ಅವರು, ‘ಭಾನುಜಿ ನೀವು ಜೆಂಟಲ್‌ಮನ್. ನಾನು ಗೆಲ್ಲಲಿಲ್ಲ ಎಂದರೆ ಗೆಲುವು ನಿಮ್ಮದಾಗಲಿ’ ಎಂದು ಹಾರೈಸಿದ್ದರಂತೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಲು ತಯಾರಿ ನಡೆಸಿದ್ದಾಗ ಶಿಕಾರಿಪುರದ ಅವರ ನಿವಾಸಕ್ಕೆ ತೆರಳಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದವರಲ್ಲಿ ಭಾನುಪ್ರಕಾಶ್‌ ಪ್ರಮುಖರು.

ಕೆಡಿಪಿ ಸಭೆಗಳಲ್ಲಿ ಆಗಿನ  ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರನ್ನು ‘ಸರ್ ನಾನು ನಿಮ್ಮ ಕ್ಷೇತ್ರದ ಮತದಾರ. ನನ್ನ ಸ್ವಗ್ರಾಮ ಮತ್ತೂರು ತೀರ್ಥಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ಊರಿನ ಕೆಲಸವನ್ನು ಆದ್ಯತೆ ಮೇಲೆ ಮಾಡಿಕೊಡಬೇಕು ಎನ್ನುತ್ತಿದ್ದರು. ಕಿಮ್ಮನೆ ಕೂಡಾ ಅವರ ಊರಿನ ಬಹುತೇಕ ಬೇಡಿಕೆಗಳಿಗೆ ನಗು- ನಗುತ್ತಲೇ ಅಸ್ತು ಅನ್ನುತ್ತಿದ್ದರು’ ಎಂದು ಹಿರಿಯ ಪತ್ರಕರ್ತ ವೀರೇಂದ್ರ ಪಿನಾಕಿ ನೆನಪಿಸಿಕೊಳ್ಳುತ್ತಾರೆ.

ಇನ್ನು ಜೆಡಿಎಸ್‌ನ ಅಪ್ಪಾಜಿ ಗೌಡ ಅವರ ಜೊತೆಯೂ ಅವರದ್ದು ಅದೇ ಪ್ರೀತ್ಯಾದರ. ಮಧು ಬಂಗಾರಪ್ಪ ಮೊದಲ ಬಾರಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ ಸಭೆಗಳಲ್ಲಿ ವಿಷಯ ಮಂಡಿಸಿದಾಗ, ಪಕ್ಷಭೇದ ಮರೆತು ಅವರನ್ನು ಬೆಂಬಲಿಸಿ ಭಾನುಪ್ರಕಾಶ್ ಮಾತಾಡುತ್ತಿದ್ದರು. ಕಾಗೋಡು ತಿಮ್ಮಪ್ಪ ಇವರನ್ನು ಪ್ರೀತಿಯಿಂದ ‘ಭಾನು ಭಟ್ರೇ’ ಅನ್ನುತ್ತಿದ್ದರು. ಇವೆಲ್ಲವೂ ಪಕ್ಷ ರಾಜಕಾರಣದ ಆಚೆ ಭಾನುಪ್ರಕಾಶ್ ಅವರಿಗೆ ಎಲ್ಲರೊಂದಿಗೆ ಇದ್ದ ಆಪ್ತತೆಯ ನಿದರ್ಶನ.

ಬಿಜೆಪಿ ಸಂಘಟನೆಗೂ ಒತ್ತು:

ಪಕ್ಷದ ನಾಯಕರಾದ ಬಿ.ಎಸ್.ಯಡಿಯೂಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಸಮಾನ ಸಲುಗೆ ಹೊಂದಿದ್ದ ಭಾನುಪ್ರಕಾಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ವೇಳೆ ಮೂವರ ನಡುವೆಯೂ ಸಮನ್ವಯ ಸಾಧಿಸಿ ಮಲೆನಾಡಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಮುಂದೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಪಕ್ಷದ ಪ್ರಕೋಷ್ಠಗಳ ಸಂಚಾಲಕರಾಗಿಯೂ ತಮ್ಮ ಅನುಭವವನ್ನು ಧಾರೆ ಎರೆದಿದ್ದರು.

ಎಸ್‌.ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆತರುವಲ್ಲಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ವಾಪಸ್ ಬಿಜೆಪಿಗೆ ಕರೆತರುವಲ್ಲಿ ಸಂಘ ಹಾಗೂ ಪಕ್ಷದ ಪ್ರತಿನಿಧಿ ಆಗಿ ಎಂ.ಬಿ.ಭಾನುಪ್ರಕಾಶ್ ಕೆಲಸ ಮಾಡಿದ್ದರು.

ರಾಜಕಾರಣದ ಜೊತೆಗೆ ಊರಿನಲ್ಲಿ ಕೃಷಿ, ಹೈನುಗಾರಿಕೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದ ಭಾನುಪ್ರಕಾಶ್, ವಿಶಿಷ್ಟ ಭಾಷೆ ಹಾಗೂ ಸಂಪ್ರದಾಯದ ಕಾರಣಕ್ಕೆ ಮತ್ತೂರು ಗ್ರಾಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವಲ್ಲಿ ಒಡನಾಡಿ ಪಟ್ಟಾಭಿರಾಮ್‌ ಅವರೊಂದಿಗೆ ಸೇರಿ ಶ್ರಮಿಸಿದ್ದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಪುತ್ರ ಎಂ.ಬಿ.ಹರಿಕೃಷ್ಣ ಅವರ ರಾಜಕೀಯ ಭವಿಷ್ಯ ರೂಪಿಸಲು ಈಚೆಗೆ ಭಾನುಪ್ರಕಾಶ್ ಪ್ರಯತ್ನ ನಡೆಸಿದ್ದರು.

ಮಹಾತ್ಮಾ ಗಾಂಧೀಜಿ ಅವರ ನೆಚ್ಚಿನ ‘ರಘುಪತಿ ರಾಘವ ರಾಜಾರಾಮ್’ ಭಜನೆ ಹಾಡುತ್ತಲೇ ಬದುಕಿನ ಹೋರಾಟದ ವೇದಿಕೆಯಿಂದಲೂ ಒಡನಾಡಿಗಳ ನೆಚ್ಚಿನ ‘ಭಾನುಜೀ’ ದಿಢೀರನೆ ನಿರ್ಗಮಿಸಿದರು.

ಶಿವಮೊಗ್ಗ ತಾಲ್ಲೂಕಿನ ಮತ್ತೂರಿನಲ್ಲಿ ಸೋಮವಾರ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಂತಿಮ ನಮನ ಸಲ್ಲಿಸಿದರು. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಚಿತ್ರದಲ್ಲಿದ್ದಾರೆ
ಶಿವಮೊಗ್ಗ ತಾಲ್ಲೂಕಿನ ಮತ್ತೂರಿನಲ್ಲಿ ಸೋಮವಾರ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರ ಪಾರ್ಥೀವ ಶರೀರಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಂತಿಮ ನಮನ ಸಲ್ಲಿಸಿದರು. ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಚಿತ್ರದಲ್ಲಿದ್ದಾರೆ

ಪಕ್ಷದಿಂದ ಗೌರವ ಸಲ್ಲಿಕೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್‌ ಪಾರ್ಥಿವ ಶರೀರಕ್ಕೆ ಪಕ್ಷದ ಧ್ವಜ ಹೊದಿಸಿ ಗೌರವ ಸಲ್ಲಿಸಿದರು. ಸಂಸದರಾದ ಬಿ.ವೈ.ರಾಘವೇಂದ್ರ ವಿಶ್ವೇಶ್ವರ ಹೆಗಡೆ ಕಾಗೇರಿ ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ ಆರಗ ಜ್ಞಾನೇಂದ್ರ ಶಾರದಾ ಪೂರ್ಯಾನಾಯ್ಕ ವಿಧಾನಪರಿಷತ್‌ ಸದಸ್ಯರಾದ ಎಸ್‌.ರುದ್ರೇಗೌಡ ಡಿ.ಎಸ್‌.ಅರುಣ್‌ ಡಾ.ಧನಂಜಯ ಸರ್ಜಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರ‍ಪ್ಪ ಮಾಜಿ ಸಚಿವರಾದ ಡಿ.ಎಚ್‌.ಶಂಕರಮೂರ್ತಿ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕರಾದ ಡಿ.ಎನ್‌.ಜೀವರಾಜ್ ಕೆ.ಬಿ.ಅಶೋಕ ನಾಯ್ಕ ಎಸ್‌.ದತ್ತಾತ್ರಿ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಎಚ್‌.ಆರ್.ಬಸವರಾಜಪ್ಪ ಕೆ.ಟಿ.ಗಂಗಾಧರ ಅಂತಿಮ ದರ್ಶನ ಪಡೆದರು. ಸಂಜೆಯೇ ಮತ್ತೂರಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಪತ್ನಿ ಪುತ್ರರಾದ ಹರಿಕೃಷ್ಣ ಯಾದವ ಕೃಷ್ಣ ಹಾಗೂ ಚಿನ್ಮಯಕೃಷ್ಣ ಅಂತಿಮ ವಿಧಿ–ವಿಧಾನ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT