ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ಮುಖಂಡರು ಕೇಸರಿ ಬಿಟ್ಟು ಕೆಂಪು ಶಾಲು ಧರಿಸಲಿ’

Last Updated 11 ಮೇ 2022, 2:50 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಕ್ತಕ್ಕೆ ಆಸೆಪಡುವ ಬಿಜೆಪಿ ಮುಖಂಡರು ಕೇಸರಿ ಶಾಲು ಅಲ್ಲ, ಕೆಂಪು ಶಾಲು ಧರಿಸಬೇಕು’ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಬಾಲರಾಜ ರಸ್ತೆಯ ಭೋವಿ ಸಮಾಜದ ಕಚೇರಿ ಎದುರು ಸೋಮವಾರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ‘ಜನಧ್ವನಿ’ ಜಾಥಾ ಹಾಗೂ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯವರು ಇತ್ತೀಚಿಗೆ ಟೋಪಿ ಹಾಕುತ್ತಿದ್ದಾರೆ. ಯುವಕರಿಗೆ ಕೇಸರಿ ಹಾಕಿಸುತ್ತಿದ್ದಾರೆ. ನಿಮಗೂ ಕೇಸರಿಗೂ ಏನೂ ಸಂಬಂಧ. ಯಾರಾದರೂ ಸತ್ತಿದ್ದಾರಾ? ನೀವು ಯಾವಾಗಲೂ ಕೆಂಪು ಟೋಪಿ ಹಾಕ್ಕೊಬೇಕು. ನಿಮಗೆ ರಕ್ತವೇ ಬೇಕಲ್ಲವೇ. ಈ ಹಿಂದೆ ಗಂಗಾ ಸ್ನಾನ ತುಂಗಾ ಪಾನ ಎಂಬ ಮಾತಿತ್ತು. ಈಗ ತುಂಗಾ ನದಿ ಮಾತ್ರವಲ್ಲ. ಈಡೀ ರಾಜ್ಯವನ್ನೇ ಕಲ್ಮಶ ಮಾಡಿಟ್ಟಿದ್ದಾರೆ’ ಎಂದು ದೂರಿದರು.

‘ಶುದ್ಧ ನೀರಿನಲ್ಲಿ ಕಮಲ ಬೆಳೆಯಲ್ಲ, ಕೊಳಚೆಯಲ್ಲೇ ಬೆಳೆಯುವುದು. ಹಾಗೆಯೇ ಬಿಜೆಪಿಯವರು ಶುದ್ಧ ವಾತಾವರಣವನ್ನು ಕದಡಿ ಅದರಿಂದಲೇ ಅಧಿಕಾರಕ್ಕೆ ಬರಲು ಹಪಹಪಿಸುತ್ತಾರೆ. ‌ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್‌ನ ಹಲವು ನಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಬಿಜೆಪಿಯಿಂದ ದೇಶಕ್ಕಾಗಿ ಒಂದು ನರಪಿಳ್ಳೆಯೂ
ಪ್ರಾಣ ಕಳೆದುಕೊಂಡಿಲ್ಲ’ ಎಂದು ಟೀಕಿಸಿದರು.

‘ಬಿಜೆಪಿಯಲ್ಲಿ ಸಿಎಂ ಸೀಟಿಗೆ ₹ 2500 ಸಾವಿರ ಕೋಟಿ ಇಡಬೇಕು ಎಂದು ಅವರದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ. ಆದರೂ ಅವರ ವಿರುದ್ಧ ಬಿಜೆಪಿ ಕ್ರಮ ಕೊಂಡಿಲ್ಲ. ಏಕೆಂದರೆ, ಯತ್ನಾಳ್‌ಗೆ ಬಿಜೆಪಿ ನಾಯಕರ ಬಂಡವಾಳ ಗೊತ್ತಿದೆ. ಅದಕ್ಕಾಗಿ ಅವರು ಏನು ಹೇಳಿದರೂ ಯಾರೂ ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ನಾನು ಇದ್ದು, ನಮ್ಮ ಪಕ್ಷದವರು ಯಾರಾದರೂ ಈ ರೀತಿ ಹೇಳಿಕೆ ಕೊಟ್ಟಿದ್ದಿದ್ದರೆ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುತ್ತಿದ್ದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT