ಶನಿವಾರ, ಜುಲೈ 24, 2021
27 °C
ವಾಜಪೇಯಿ ಬಡಾವಣೆ ನಿವೇಶನಗಳ ಹಂಚಿಕೆ ಹಗರಣ

ಶಿವಮೊಗ್ಗ: ಮಾಜಿ ಶಾಸಕ ಪ್ರಸನ್ನಕುಮಾರ್ ಹೇಳಿಕೆಗೆ ಬಿಜೆಪಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲೋಕಾಯುಕ್ತ ತನಿಖೆ ನಡೆಯುತ್ತಿರುವ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಹಗರಣವನ್ನು ರದ್ದು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಸರ್ಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿಕೆ ಬಾಲಿಶ. ಮಾಜಿ ಶಾಸಕರು ತಕ್ಷಣ ಇಂತಹ ಅಸಂಬದ್ಧ ಹೇಳಿಕೆ ಹಿಂಪಡೆಯಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್ ಆಗ್ರಹಿಸಿದರು.

ಅಸಂಬದ್ಧವಾಗಿ ಹೇಳಿಕೆ ನೀಡಿರುವ ಪ್ರಸನ್ನಕುಮಾರ್ ಈಶ್ವರಪ್ಪ ಅವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಸಾಮಾಜಿಕ ಜಾಲತಾಣಗಳಲ್ಲೂ ವಾಜಪೇಯಿ ಬಡಾವಣೆ ತನಿಖೆ ಹಾದಿ ತಪ್ಪಿಸುವ ಯತ್ನ ನಡೆಯುತ್ತಿದೆ. ಹಿಂದೆ ಅವರೇ ಈ ತನಿಖೆ ವಿಷಯ ತಿರುಚಲು ಮುಖ್ಯಮಂತ್ರಿಗಳಿಂದಲೂ ಸಾಧ್ಯವಿಲ್ಲ ಎಂದಿದ್ದರು. ಈಗ ಸಚಿವರಿಂದ ಹೇಗೆ ಸಾಧ್ಯ? ತನಿಖಾ ವರದಿಯಲ್ಲಿನ ಅಂಶಗಳು ಇವರಿಗೆ ಗೊತ್ತಿವೆ ಎಂದಾದರೆ ವರದಿಯ ಅಂಶಗಳು ಸೋರಿಕೆ ಆಗಿವೆ ಎಂದರ್ಥ. ಅಲ್ಲದೆ ಹಿಂದಿನ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಅವಧಿಯಲ್ಲಿ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಆಚಾರ್ಯತ್ರರ ಭವನಕ್ಕೆ ಈಶ್ವರಪ್ಪ ಅಡ್ಡಗಾಲು ಹಾಕುತ್ತಿದ್ದಾರೆ ಎಂದೂ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಈಶ್ವರಪ್ಪ ಅವರು ಎಂದಿಗೂ ಆ ರೀತಿ ಮಾಡುವವರಲ್ಲ, ಅವರೇ ಈ ಭವನ ನಿರ್ಮಾಣಕ್ಕೆ ₨ 50 ಲಕ್ಷ ಕೊಟ್ಟಿದ್ದಾರೆ. ಅವರ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡುತ್ತಿದ್ದಾರೆ. ಮಾಜಿ ಶಾಸಕರು ಇಂತಹ ಕೀಳುಮಟ್ಟದ ರಾಜಕೀಯ ನಿಲ್ಲಿಸಬೇಕು. ಆಧಾರ ರಹಿತವಾದ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದರು.

ಪ್ರಧಾನಿ ಮೋದಿ ಅವರ ಒಂದು ವರ್ಷದ ಸಾಧನೆ ಪ್ರಚಾರ ಅಭಿಯಾನದ ಕತೆಗೆ ಜೂನ್‌ 10ರಂದು ವಿದೇಶಿ ವಸ್ತುಗಳ ಖರೀದಿ ಮತ್ತು ಬಳಕೆ ವಿರೋಧಿ ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲಾಗುವುದು. 14ರಂದು ಸಂಜೆ 4ಕ್ಕೆ ವಿದೇಶಿ ವಸ್ತುಗಳ ಬಳಕೆ ವಿರೋಧಿ ಅಭಿಯಾನದ ಮುಕ್ತಾಯ ಸಮಾರಂಭ ಎಲ್ಲೆಡೆ ನಡೆಯುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಿ.ಆರ್‌.ಮಧುಸೂದನ್, ರಮೇಶ್, ಶಿವರಾಜ್, ಎನ್.ಡಿ.ಸತೀಶ್, ಕೆ.ವಿ.ಅಣ್ಣಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು