ಭಾನುವಾರ, ಅಕ್ಟೋಬರ್ 25, 2020
28 °C
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಆಕ್ರೋಶ

ರೈತ ಪರ ಕಾಯ್ದೆ ವಿರುದ್ಧ ಸುಳ್ಳುಗಳ ವದಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೇಂದ್ರ ಸರ್ಕಾರ ರೈತರ ಕಲ್ಯಾಣಕ್ಕಾಗಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಹಬ್ಬಿಸುತ್ತಿರುವ ಸುಳ್ಳು ವದಂತಿಗಳಿಗೆ ರೈತರು ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ಕಾಂಗ್ರೆಸ್‌, ರೈತ ಸಂಘಟನೆಗಳು ಸೇರಿದಂತೆ ಹಲವು ಮುಖಂಡರು ಈ ಕಾಯ್ದೆಯ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ರಾಜಕೀಯ ಕಾರಣಗಳಿಗಾಗಿ ವಿರೋಧ ವ್ಯಕ್ತಪಡಿಸುತ್ತಿದ್ಧಾರೆ. ನಿಜವಾದ ರೈತರು ಕಾಯ್ದೆ ಪರ ಇದ್ದಾರೆ. ಉಳಿದ ರೈತರು ವದಂತಿಗಳಿಗೆ ಕಿವಿಗೊಡಬಾರದು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.

ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್‌ ಮುಖಂಡರು ಸದಾ ಮುಂದಿದ್ದಾರೆ. ಈ ಹಿಂದೆ ದೇಶದ ರಕ್ಷಣಾ ವ್ಯವಸ್ಥೆ ಬಲಗೊಳಿಸುವ ದೃಷ್ಟಿಯಿಂದ ಪ್ರಧಾನಿ ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕಾಂಗ್ರೆಸ್‌ ಮುಖಂಡರು ಹಗರಣ ನಡೆದಿದೆ ಎಂದು ಸುದ್ದಿ ಹಬ್ಬಿಸಿದ್ದರು. ಹಗರಣ ಕಾಣುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದ ಮೇಲೆ ತೆಪ್ಪಗಾದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವೂ ಅಪಪ್ರಚಾರ ನಡೆಸಿದರು. ಆಯುಷ್ಮಾನ್ ‌ಭಾರತ್, ತ್ರಿವಳಿ ತಲಾಕ್,  370ನೇ ವಿಧಿ ಜಾರಿಗೆ ತರುವಾಗಲೂ ವಿರೋಧ ವ್ಯಕ್ತಪಡಿಸಿದ್ದರು ಎಂದು ದೂರಿದರು. 

ಕೃಷಿ ಕಾಯ್ದೆಗೆ ಮೂಲ ಕಾರಣಕರ್ತರು ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್‌, ಮನಮೋಹನ್ ಸಿಂಗ್. ಈ ವಿಷಯ ಅರಿಯದ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ಪಕ್ಷದಿಂದ ಕಿತ್ತೊಗೆಯಬೇಕು ಎಂದು ಛೇಡಿಸಿದರು.

ಎಪಿಎಂಸಿ ಕಾಯ್ದೆಗೂ ಇತಿಹಾಸವಿದೆ. 1943ರಲ್ಲಿ ಜನ್ಮತಾಳಿತ್ತು. ಇಂದಿನವರೆಗೂ ಸಾಕಷ್ಟು ಬದಲಾವಣೆಗಳಾಗಿವೆ. ರೈತರ ಹಿತಸಾಕ್ತಿ ಗಮನದಲ್ಲಿ ಇಟ್ಟುಕೊಂಡು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ರೈತರು ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರಕ್ಕೆ ಮನೆ ಬಾಗಿಲಲ್ಲೇ ಮಾರಾಟ ಮಾಡಬಹುದು ಎಂದರು.

ಕೃಷಿ ಕ್ಷೇತ್ರದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕೈಗಾರಿಕಾ ಕ್ಷೇತ್ರ ಉಳಿಸಿಕೊಳ್ಳಲು ಈ ಕಾಯ್ದೆ ಅನುಕೂಲವಾಗಿದೆ. ಲೋಕಸಭಾ ಚುನಾವಣೆ ಸಮಯದ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವವಿದೆ. ಹೀಗಿದ್ದರೂ ಕಾಂಗ್ರೆಸ್‌ ಇಬ್ಬಂದಿತನ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ಪನ್ನಗಳ ಬೆಲೆ ಏರಿಕೆಯಾದರೆ ರೈತರಿಗೆ ಅನುಕೂಲ. ದರ ಕುಸಿದರೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡುತ್ತದೆ. ದಲ್ಲಾಳಿಗಳ ಕಾಟ ತಪ್ಪುತ್ತದೆ. ರೈತರ ಆದಾಯ ದ್ವಿಗುಣವಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್, ಶಾಸಕ ಕೆ.ಬಿ.ಅಶೋಕ್ ನಾಯ್ಕ, ಆರ್ಯ ವೈಶ್ಯ ಸಮಾಜ ಅಭಿವಋದ್ಧಿ ನಿಗಮದ ಅಧ್ಯಕ್ಷ  ಡಿ.ಎಸ್.ಅರುಣ್, ‘ಸೂಡಾ’ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್, ಮುಖಂಡರಾದ ಎಸ್.ಎನ್.ಚನ್ನಬಸಪ್ಪ, ಜಗದೀಶ್, ಬಿ.ಆರ್.ಮಧುಸೂದನ್, ಕೆ.ವಿ.ಅಣ್ಣಪ್ಪ, ಎಸ್.ಜ್ಞಾನೇಶ್ವರ್, ಎಸ್.ದತ್ತಾತ್ರಿ, ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.