ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ದಬ್ಬಾಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Last Updated 6 ಮೇ 2019, 13:41 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ದಬ್ಬಾಳಿಕೆ ಖಂಡಿಸಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ರಾಜಕೀಯ ಎದುರಾಳಿಗಳು ಹಾಗೂ ಮಾಧ್ಯಮ ಕ್ಷೇತ್ರ ಹತ್ತಿಕ್ಕಲು ಸೇಡಿನ ಕ್ರಮ ಅನುಸರಿಸುತ್ತಿದೆ. ಬಿಜೆಪಿ ಪರ ಅಭಿಮಾನ ಹೊಂದಿರುವ ಮುಖಂಡರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಅದೇ ಬಿಜೆಪಿ ನೀಡಿದ ದೂರಿಗೆ ಯಾವುದೇ ಕ್ರಮ ಕೈಗೊಳ್ಳದೆ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು.

ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವಂತೆ ಕರೆ ನೀಡಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ನಟರಾದ ದರ್ಶನ್, ಯಶ್ ಅವರಿಗೆ ನೇರವಾಗಿ ಬೆದರಿಕೆ ಹಾಕಿದ್ದ ಶಾಸಕ ನಾರಾಯಣ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ದೂರು ನೀಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕಾರ್ಯವೈಖರಿ ಟೀಕಿಸುವುದೇ ಅಪರಾಧ ಎನ್ನುವ ಧೋರಣೆ ಇದೆ. ವಿರೋಧ ಪಕ್ಷಗಳು ಮುಖಂಡರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಭಯದ ವಾತಾವರಣ ಮೂಡಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯ ಕರಾಳ ನೆನಪು ಮರುಕಳಿಸುವ ಹಲವು ಪ್ರಕರಣಗಳು ನಡೆಯುತ್ತಿವೆ. ಸ್ವತಃ ಮುಖ್ಯಮಂತ್ರಿಗಳು ಮಾಧ್ಯಮಗಳನ್ನು ದೂಷಿಸುತ್ತಾರೆ. ಬಹಿಷ್ಕಾರದ ಬೆದರಿಕೆ ಹಾಕುತ್ತಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಸರ್ಕಾರ ಟೀಕಿಸಿದ ಕಾರಣಕ್ಕೆ ಬಿಜೆಪಿ ಹಿತೈಷಿಗಳು ಮತ್ತು ಹಿರಿಯ ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಗಿದೆ. ಮಹೇಶ್ ವಿಕ್ರಂ ಹೆಗಡೆ, ಶ್ರುತಿ ಬೆಳ್ಳಕ್ಕಿ, ಶಾರದಾ ಡೈಮಂಡ್, ಹೇಮಂತ್ ಕುಮಾರ್, ಅಜಿತ್ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಗೃಹ ಸಚಿವ ಎಂ.ಬಿ.ಪಾಟೀಲ್, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಈಚೆಗೆ ಪರಸ್ಪರ ದೂಷಿಸಿದ್ದರು. ಆಸ್ತಿ ಗಳಿಕೆ ಅಕ್ರಮ ಸಂಪಾದನೆ ಎಂದು ಆರೋಪಿಸಿದ್ದರು. ಇಬ್ಬರ ಮೇಲೂ ಪ್ರಕರಣ ದಾಖಲಿಸಬೇಕು. ಅಕ್ರಮ ಆಸ್ತಿಯ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಜಾತಿ ರಾಜಕಾರಣ ಮಾಡಿ ರಾಜಕೀಯ ಮಾಡಿದರು. ಧರ್ಮ ಟೀಕಿಸಿದ ಭಗವಾನ್‌ಗೆ ರಕ್ಷಣೆ ನೀಡಿದರು. ಲೋಕಾಯುಕ್ತ, ಎಸಿಬಿ ದುರ್ಬಳಕೆ ಮಾಡಿಕೊಂಡರು. ಮಂಕಿ ಸ್ವಾಭಾವದ ಸಿದ್ದರಾಮಯ್ಯ ಅಂಥವರೇ ಅಲ್ಲಿ ತುಂಬಿಕೊಂಡಿದ್ದಾರೆ ಎಂದು ಟೀಕಿಸಿದರು.

ಶಾಸಕ ಕೆ.ಎಸ್.ಈಶ್ವರಪ್ಪ, ಮೇಯರ್ ಲತಾ ಗಣೇಶ್, ಮುಖಂಡರಾದ ಎನ್.ಜಿ.ನಾಗರಾಜ್, ಎಸ್.ಎನ್. ಚನ್ನಬಸಪ್ಪ, ಬಿ.ಆರ್.ಮಧುಸೂದನ್, ಮಾಲತೇಶ್, ಸುವರ್ಣ ಶಂಕರ್, ಹಿರಣ್ಣಯ್ಯ, ಅಣ್ಣಪ್ಪ, ವಿರೂಪಾಕ್ಷಪ್ಪ, ರಾಮು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT