ಗುರುವಾರ , ಮಾರ್ಚ್ 23, 2023
21 °C

ದಲಿತರ ವಿರುದ್ಧ ಸಿದ್ದರಾಮಯ್ಯ ಹೇಳಿಕೆ: ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ  ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿಯ ನಾಯಕರ ಬಗ್ಗೆ ಅವಹೇಳನಕಾರಿ ಮಾತುಗಳಾಡುವುದನ್ನೇ ಸಿದ್ದರಾಮಯ್ಯ ವೃತ್ತಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ಧರಾಮಯ್ಯ ತಪ್ಪಿಸಿದರು. ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಬ್ಲ್ಯಾಕ್‌ ಮೇಲ್ ಮಾಡಿ ಮುಖ್ಯಮಂತ್ರಿಯಾದರು. ಅವರೊಬ್ಬ ಕಪಟ ರಾಜಕಾರಣಿ. 2006 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕೇವಲ 257 ಮತಗಳ ಅಂತರದಲ್ಲಿ ಗೆಲುವು ಕಂಡರು. ಕಾಂಗ್ರೆಸ್ ಪಕ್ಷದ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮಹಾದೇವಪ್ಪ ಇಲ್ಲದಿದ್ದರೆ ಅಂದೇ ರಾಜಕೀಯದಿಂದ ಕಳೆದುಹೋಗುತ್ತಿದ್ದರು ಎಂದು ಛೇಡಿಸಿದರು.
 
ದಲಿತರ ಕುರಿತು ಮಾತನಾಡಲು ಸಿದ್ಧರಾಮಯ್ಯಗೆ ನೈತಿಕ ಹಕ್ಕಿಲ್ಲ. ದಲಿತರ ನಡೆ ಯಾವಾಗಲೂ ಬಿಜೆಪಿಯ ಕಡೆ ಇರುತ್ತದೆ. ಬಿಜೆಪಿ ತೋರಿಕೆಗಾಗಿ ದಲಿತರಿಗೆ ಅವಕಾಶ ನೀಡಿಲ್ಲ. ದಲಿತರ ಪರ ಎಂಬ ಕಾಂಗ್ರೆಸ್‌ ಬಣ್ಣ ಬಯಲಾಗಿದೆ. ದಲಿತರಿಗೆ ಮತ್ತು ಹಿಂದುಳಿದವರಿಗೆ ನಾಟಕ ಅರ್ಥವಾಗಿದೆ. ಇನ್ನಾದರೂ ಸಿದ್ಧರಾಮಯ್ಯನವರು ತಮ್ಮ ನಡೆ ತಿದ್ದಿಕೊಂಡು ಅವಾಚ್ಯವಾಗಿ ನಿಂದಿಸುವುದನ್ನು ಬಿಟ್ಟು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.

ನೆಹರೂ ಕ್ರೀಡಾಂಗಣದಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿಸಿದರು.

ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಶ್ರೀನಿವಾಸ ಕಾಸರವಳ್ಳಿ, ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ಎಸ್.ಸಿ. ಮೋರ್ಚಾ ಪದಾಧಿಕಾರಿಗಳಾದ ಎಂ.ರಾಜು. ಜಯರಾಮ ನಾಯ್ಕ್, ಎಚ್.ಶಿವಾಜಿ, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಸಿ.ಮೂರ್ತಿ, ಹರಮಘಟ್ಟ ಸುರೇಶ್, ಮಂಡೇನಕೊಪ್ಪ ದೇವರಾಜ್, ಛಲವಾದಿ ಕೃಷ್ಣ, ವಿದ್ಯಾನಗರ ಲಕ್ಷ್ಮಣ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು